Advertisement

ನೈಜ ಕಲಾವಿದರಿಗೆ ಪ್ರಶಸ್ತಿ ದೊರೆಯುತ್ತಿಲ್ಲ: ರಾಮಚಂದ್ರ

08:53 PM Jun 28, 2019 | Team Udayavani |

ಚಾಮರಾಜನಗರ: ರಾಜಕೀಯ ಹಸ್ತಕ್ಷೇಪದಿಂದಾಗಿ ನೈಜ ಕಲಾವಿದರಿಗೆ ಪ್ರಶಸ್ತಿಗಳು ದೊರೆಯುತ್ತಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ವಿಷಾದಿಸಿದರು. ನಗರದ ರೋಟರಿ ಭವನದಲ್ಲಿ ಕರ್ನಾಟಕ ರಂಗ ಪರಿಷತ್ತು ಜಿಲ್ಲಾ ಘಟಕ ಹಾಗೂ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಸಹಯೋಗದಲ್ಲಿ ನಡೆದ ಸಿಜಿಕೆ ಬೀದಿ ರಂಗ ದಿನ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

Advertisement

ಕಲೆಯೇ ಜೀವನದ ಕೈಗನ್ನಡಿ. ರಂಗ ಕಲಾವಿದರು ಬೀದಿನಾಟಕಗಳು, ನಾಟಕಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದರು. ಇತ್ತೀಚಿನಲ್ಲಿ ಟೀವಿಯಲ್ಲಿ ಬರುವ ಧಾರಾವಾಹಿಗಳು ಕೌಟುಂಬಿಕ ಜಗಳವನ್ನು ತೋರಿಸುತ್ತದೆ. ಇದರಿಂದ ಮಾನವೀಯ ಮೌಲ್ಯಗಳೂ ಮರೆಯಾಗುತ್ತಿದೆ. ಕಲುಷಿತ ವಾತಾವರಣದಲ್ಲಿ ಸುಳ್ಳನ್ನೇ ನಿಜ ಎಂದು ನಿಜವನ್ನೇ ಸುಳ್ಳು ಎಂದು ಬಿಂಬಿಸಲಾಗುತ್ತಿದೆ ಎಂದರು.

ರಂಗಕಲೆ ಸಂಸ್ಕೃತಿ, ನಾಡು, ನುಡಿ ಹಾಗೂ ಊರಿನ ವೈಭವ ಬಿಂಬಿಸುವ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ಕಲಾವಿದನ ಕೌಶಲ್ಯಕ್ಕೆ ತಕ್ಕಂತೆ ಪ್ರಶಸ್ತಿ ಸಿಕ್ಕರೆ ರಂಗಕಲೆಗೆ ಬೆಲೆ ಸಿಗುತ್ತದೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ, ಸಹಕಾರ ನೀಡಬೇಕು ಎಂದು ಹೇಳಿದರು.

ತಬಲ ವಿದ್ವಾನ ದಶಪಾಲ್‌ರಿಗೆ ಸಿಜಿಕೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಬಹಳ ಅರ್ಥಪೂರ್ಣ. ಅವರಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಲಭಿಸಲಿ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿ ರಂಗಕರ್ಮಿ ಕೆ.ವೆಂಕಟರಾಜು, ಸಿಜಿಕೆ ಅವರು ರಂಗಕಲೆಗೆ ದೊಡ್ಡಕೊಡುಗೆ ನೀಡಿದ್ದಾರೆ. ಸಮುದಾಯ ತಂಡದ ಮೂಲಕ ನಾಡಿನ ಬಡವರು, ನಿರ್ಗತಿಕರು ಮತ್ತು ಶೋಷಿತರ ಪರವಾಗಿ ಹೋರಾಟ ಮಾಡಿದರು.

ಅನೇಕ ಪ್ರಸಿದ್ಧ ನಟ, ನಟಿಯರನ್ನು ನಾಡಿಗೆ ಪರಿಚಯಿಸಿದ್ದಾರೆ. ಯುವ ರಂಗಕರ್ಮಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಿಜಿಕೆ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾಥಾದ ಮೂಲಕ ಸಮುದಾಯ ಘಟಕವನ್ನು ಸ್ಥಾಪನೆ ಮಾಡಿದರು. ಶಿಬಿರದ ಮೂಲಕ ನಾಟಕ ಮಾಡಿ ಸಾಮಾಜಿಕ ಅರಿವು ಮೂಡಿಸಿದರು ಎಂದರು.

Advertisement

ಪ್ರಸ್ತುತ ನೂರಾರು ಕಲಾವಿದರು, ಬರಹಗಾರರ ಅಗತ್ಯವಿದೆ. ಕೇಂದ್ರ ಸರ್ಕಾರದಲ್ಲಿ ವಿರೋಧ ಪಕ್ಷ ಇಲ್ಲವಾಗಿದೆ. ದೇಶದಲ್ಲಿ ವಿಚಿತ್ರ ಬೆಳವಣಿಗೆ ನಡೆಯುತ್ತಿವೆ. ಕೊಲೆ, ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಭಟನೆ, ಪ್ರತಿರೋಧವನ್ನು ನಾಟಕ, ಕಾವ್ಯದ ಮೂಲಕ ಕಲಾವಿದರೂ ಮಾಡಬೇಕಿದೆ. ಪ್ರತಿಯೊಂದು ಕಲೆಯು ರಂಜನೆಯೂ ಹೌದು, ವಿರೋಧವೊ ಹೌದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಂಗ ಪರಿಷತ್ತು ರಾಜ್ಯ ಸಂಚಾಲಕ ಸಿ.ಎಂ.ನರಸಿಂಹಮೂರ್ತಿ, ಕಷ್ಟದ ಪರಿಸ್ಥಿತಿಯಲ್ಲಿರುವ ಕಲಾವಿದರಿಗೆ ಕಾರ್ಮಿಕರ ಕಲ್ಯಾಣ ನಿಧಿ ಇರುವಂತೆ ರಂಗಭೂಮಿ ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಿ ಧನಸಹಾಯ ಮಾಡಬೇಕು. ಮಾಸಾಶನ ಹೆಚ್ಚಳ ಹಾಗೂ ಕಲಾವಿದರ ವಯೋಮಿತಿ ಕಡಿಮೆ ಮಾಡುವಂತೆ ಒತ್ತಾಯಿಸಿದರು.

ಪ್ರಶಸ್ತಿ ಪ್ರದಾನ: ಕೊಳ್ಳೇಗಾಲದ ತಬಲ ವಿದ್ವಾನ್‌ ವಿ.ದಶಪಾಲ್‌ ಅವರಿಗೆ ಸಿಜೆಕೆ ಪ್ರಶಸ್ತಿಯನ್ನು ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಪ್ರದಾನ ಮಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹೊನ್ನನಾಯಕ, ರೋಟರಿ ಅಧ್ಯಕ್ಷ ನಾಗರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಬಸವರಾಜು,

ಕೊಳ್ಳೇಗಾಲ ದೇವಾಂಗ ಸಂಘ ಅಧ್ಯಕ್ಷ ಆಚಾಳ್‌ನಾಗರಾಜ್‌, ಕರ್ನಾಟಕ ರಂಗ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ರಾಜಪ್ಪ, ಪ್ರಧಾನ ಕಾರ್ಯದರ್ಶಿ ಉಮ್ಮತ್ತೂರು ಬಸವರಾಜು, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್‌ ಇದ್ದರು. ಇದೇ ವೇಳೆ ರಂಗಕಲಾವಿದರು ರಂಗಗೀತೆ ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next