ಧಾರವಾಡ: ಜಿಲ್ಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಸೋಮವಾರದಿಂದ ಶಾಲೆಗಳು ಕಾರ್ಯಾ ರಂಭ ಮಾಡುವ ಮೂಲಕ ಶೈಕ್ಷಣಿಕ ವರ್ಷಕ್ಕೆ ಚಾಲನೆ ಸಿಗಲಿದೆ. ಜಿಲ್ಲೆಯ 1,742 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 16ರಿಂದ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ಶಾಲಾವರಣಗಳನ್ನು ಸ್ವತ್ಛಗೊಳಿಸಿ ಅಣಿಗೊಳಿಸಲಾಗಿದೆ.
ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಗ್ರಾಪಂ, ಶಿಕ್ಷಕರು, ಎಸ್‌ಡಿಎಂಸಿ ಸಮಿತಿ ನೇತೃತ್ವದಲ್ಲಿ ಮಾಡಲಾಗಿದೆ. ಮೊದಲ ದಿನ ಶಾಲೆಗೆ ಬರುವ ಮಕ್ಕಳಿಗೆ ಪಠ್ಯಪುಸ್ತಕಗಳ ಜತೆಗೆ ಬೆಲ್ಲದ ಸಜ್ಜಕ ಅಥವಾ ಶಿರಾ ಸಿಹಿ ನೀಡಿ ಸ್ವಾಗತಿಸಲಾಗುತ್ತಿದೆ.
1742 ಶಾಲೆಗಳಲ್ಲಿ 4,96,111 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ಪೈಕಿ ಧಾರವಾಡ ಗ್ರಾಮೀಣದಲ್ಲಿ 263 ಶಾಲೆಯಲ್ಲಿ 81,453, ಧಾರವಾಡ ಶಹರದ ವ್ಯಾಪ್ತಿಯ 264 ಶಾಲೆಯಲ್ಲಿ 70,008, ಹುಬ್ಬಳ್ಳಿ ಶಹರ ವ್ಯಾಪ್ತಿಯ 410 ಶಾಲೆಯಲ್ಲಿ 1,28,462, ಹುಬ್ಬಳ್ಳಿ ಗ್ರಾಮೀಣ ಭಾಗದ 257 ಶಾಲೆಯಲ್ಲಿ 69,928, ಕಲಘಟಗಿಯ 183 ಶಾಲೆಯಲ್ಲಿ 52,516, ಕುಂದಗೋಳದ 166 ಶಾಲೆಯಲ್ಲಿ 43,687, ನವಲಗುಂದದ 199 ಶಾಲೆಯಲ್ಲಿ 50,189 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಧಾರವಾಡ ಜಿಲ್ಲೆಗೆ ಒಟ್ಟು 19,62,264 ಪಠ್ಯಪುಸ್ತಕಗಳು ಬೇಕಿದ್ದು, ಈ ಪೈಕಿ ಶೇ.46 ಪುಸ್ತಕಗಳು ಈಗಾಗಲೇ ಜಿಲ್ಲೆಗೆ ತಲುಪಿವೆ. ಇವುಗಳನ್ನು ಮೊದಲ ದಿನವೇ ವಿತರಿಸಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಉಳಿದ ಪಠ್ಯಪುಸ್ತಕಗಳನ್ನು ಹಂತ ಹಂತವಾಗಿ ನೀಡಲು ಯೋಜಿಸಲಾಗಿದೆ.
ಜಿಲ್ಲೆಯ 527 ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಂಡುಬಂದಿದೆ. ಹೀಗಾಗಿ ಅಂತಹ ಶಾಲೆಗಳಿಗೆ ತೊಂದರೆ ಆಗದಂತೆ 389 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈ ಅಧಿಕಾರವನ್ನು ಆಯಾ ಶಾಲೆ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿಗೆ ನೀಡಲಾಗಿದೆ. ಬಹುತೇಕ ನೇಮಕ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಮೇ 16ಕ್ಕೆ ಅವರು ಶಾಲೆಗೆ ಹಾಜರಾಗಲಿದ್ದಾರೆ.
9 ತಂಡಗಳ ರಚನೆ: ಮೇ 16ರಿಂದ 31ರವರೆಗೆ ಶಾಲೆ ಆರಂಭ ಹಾಗೂ ಶಿಕ್ಷಕರ, ಮಕ್ಕಳ ಹಾಜರಾತಿ, ಅಲ್ಲಿರುವ ಸೌಲಭ್ಯಗಳ ಕುರಿತು ಪರಿಶೀಲನೆಗೆ ಮಿಂಚಿನ ಸಂಚಾರ ನಡೆಸಲು ಇಲಾಖೆ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ 9 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ 5 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ಒಂಭತ್ತೂ ತಂಡಗಳಭೆರಡು ದಿನಕ್ಕೆ ಒಂದು ತಾಲೂಕು ಆಯ್ದುಕೊಂಡು ಪ್ರತಿಶಾಲೆಗೆ ಭೇಟಿ ನೀಡಲಿವೆ. ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಪಠ್ಯದಲ್ಲಿ ಕೆಲ ಪಠ್ಯಗಳನ್ನು ಕಡಿತಗೊಳಿಸಲಾಗಿತ್ತು. ಆದರೆ ಈ ವರ್ಷ ಪಠ್ಯ ಕಡಿತದ ಬಗ್ಗೆ ಯಾವುದೇ ಸೂಚನೆಗಳು ಸರಕಾರದಿಂದ ನಮಗೆ ಬಂದಿಲ್ಲ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.