Advertisement
ಮಾತುಕತೆ ನಡೆಸಿ ಪಾಕಿಸ್ತಾನದ ಜತೆಗೆ ಉತ್ತಮ ಬಾಂಧವ್ಯ ಹೊಂದುವ ಬಗ್ಗೆ ಭಾರತಕ್ಕೆ ಆಸಕ್ತಿ ಇದೆ. ಆದರೆ, ಈ ಬಗ್ಗೆ ಆ ದೇಶವೇ ನಿರ್ಧಾರ ಕೈಗೊಳ್ಳಬೇಕು. ಉಗ್ರರಿಗೆ ನೀಡುತ್ತಿರುವ ಪ್ರೋತ್ಸಾಹ, ವಿತ್ತೀಯ ನೆರವು, ವಿನಾ ಕಾರಣ ನಮ್ಮ ದೇಶದ ಜತೆಗೆ ದ್ವೇಷ ಸಾಧಿಸುವುದನ್ನು ಬಿಡಬೇಕು. ಆ ಪರಿಸ್ಥಿತಿಯನ್ನು ಪಾಕಿಸ್ತಾನ ಸರ್ಕಾರ ಸಿದ್ಧಪಡಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Related Articles
Advertisement
ಶಾಂತಿಗೆ ಬದ್ಧ:ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ದುಃಖ ವ್ಯಕ್ತಪಡಿಸಿದ ಪ್ರಧಾನಿ ಭಾರತ ಯಾವತ್ತೂ ಶಾಂತಿಯ ಪರವೇ ಆಗಿದೆ. ಈ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಬದಲಾವಣೆಯೇ ಇಲ್ಲ ಎಂದು ಮತ್ತೂಮ್ಮೆ ನಿಲುವು ಸ್ಪಷ್ಟಪಡಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಜತೆಗೆ ನಿಕಟ ಬಾಂಧವ್ಯ ಹೊಂದಿದ್ದೇವೆ. ಹೆಚ್ಚಾಗುತ್ತಿರುವ ಆಹಾರ, ತೈಲ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಉಂಟಾಗದೇ ಇರಲು ಎರಡೂ ರಾಷ್ಟ್ರಗಳಿಗೂ ನೆರವು ನೀಡಲು ಸಿದ್ಧರಿದ್ದೇವೆ ಎಂದರು.ಜಿ20 ರಾಷ್ಟ್ರಗಳ ಪ್ರಸಕ್ತ ಸಾಲಿನ ಅಧ್ಯಕ್ಷ ಸ್ಥಾನದ ನೆಲೆಯಿಂದ, ಜಿ7 ರಾಷ್ಟ್ರಗಳ ಸಮ್ಮೇಳನದಲ್ಲಿ ಇಂಧನ, ಡಿಜಿಟಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ದೇಶ ಸಾಧಿಸಿದ ಪ್ರಗತಿಯನ್ನು ಮಂಡಿಸುವುದಾಗಿ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಭಾರತದ ಸಹಭಾಗಿತ್ವ ಹೊಂದುವ ಮೂಲಕ ಜಗತ್ತಿಗೆ ಹೇಗೆ ನೆರವು ಮತ್ತು ಲಾಭ ಪಡೆಯಲು ಸಾಧ್ಯ ಎಂಬುದನ್ನು ವಿವರಿಸುವುದಾಗಿ ಹೇಳಿದ್ದಾರೆ. ಹಿರೋಶಿಮಾ ತಲುಪಿದ ಪ್ರಧಾನಿ: ಇದೇ ವೇಳೆ, ಮೂರು ದಿನಗಳ ಜಪಾನ್ ಪ್ರವಾಸಕ್ಕಾಗಿ ಪ್ರಧಾನಿಯವರು ಹಿರೋಶಿಮಾ ತಲುಪಿದ್ದಾರೆ. ಮೇ 21ರ ವರೆಗೆ ಅವರು ಜಪಾನ್‌ನಲ್ಲಿ ಇರಲಿದ್ದಾರೆ ಮತ್ತು ಜಗತ್ತಿನ ಪ್ರಮುಖ ನಾಯಕರ ಜತೆಗೆ ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ. ಜಿ7 ರಾಷ್ಟ್ರಗಳ ಒಕ್ಕೂಟದ ಸದಸ್ಯನಲ್ಲದೇ ಇದ್ದರೂ, ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿದಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಹಿರೋಶಿಮಾಕ್ಕೆ ತೆರಳಿದ್ದಾರೆ. ನಂತರ ಅಲ್ಲಿಂದ ಪಾಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಝೆಲೆನ್‌ಸ್ಕಿ ಜತೆಗೆ ನಾಳೆ ಭೇಟಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕೂಡ ಜಿ7 ಒಕ್ಕೂಟದ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಅವರು ಹಿರೋಶಿಮಾಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಆ ದೇಶದ ಮೇಲೆ ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ಇಬ್ಬರು ನಾಯಕರ ಭೇಟಿ ಇದಾಗಲಿದೆ. ಮಾತುಕತೆ ವೇಳೆ ಇಬ್ಬರು ನಾಯಕರು ಯುದ್ಧ ಮತ್ತು ಅದರಿಂದ ಉಂಟಾದ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಈ ನಡುವೆ ಜಿ7 ಒಕ್ಕೂಟದ ನಾಯಕರು ರಷ್ಯಾ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.