Advertisement

ಯಾವುದೇ ದೇಗುಲದಲ್ಲೂ ಪ್ರಮಾಣ ಮಾಡಲು ಸಿದ್ಧ

10:02 PM Jun 23, 2019 | Lakshmi GovindaRaj |

ಹುಣಸೂರು: ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಶಾಸಕ ಎಚ್‌.ವಿಶ್ವನಾಥ್‌ ಮತ್ತು ಅವರ ಪುತ್ರನ ವಿರುದ್ಧ ತಾವು ಮಾಡಿರುವ ವರ್ಗಾವಣೆ ದಂಧೆ ಆರೋಪಕ್ಕೆ ಈಗಲೂ ಬದ್ಧನಾಗಿದ್ದು, ಪುತ್ರನೊಂದಿಗೆ ಅವರೇ ಸೂಚಿಸುವ ದೇವಾಲಯಕ್ಕೆ ಬರಲಿ ಪ್ರಮಾಣ ಮಾಡಲು ಸಿದ್ಧನಿದ್ದೇನೆಂದು ಬಿಜೆಪಿ ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್‌ ಸವಾಲು ಹಾಕಿದರು.

Advertisement

ತಾನು ಕ್ಲೀನ್‌ ಹ್ಯಾಂಡ್‌ ಎಂದು ಹೇಳಿ ಕೊಂಡಿರುವ ಶಾಸಕರು ತಮ್ಮ ಜೊತೆಯಲ್ಲಿ ಪುತ್ರನನ್ನು ಧರ್ಮಸ್ಥಳ, ಕಪ್ಪಡಿ ಸೇರಿದಂತೆ ಅವರೇ ನಿಗದಿಪಡಿಸುವ ಯಾವುದೇ ದೇವಾಲಯ ಸೂಚಿಸಲಿ, ಅವರೇ ದಿನಾಂಕ, ಸ್ಥಳ ನಿಗದಿಪಡಿಸಲಿ ಬರಲು ತಯಾರಿದ್ದೇನೆ. ಇನ್ನೂ ತಾಲೂಕಿನಲ್ಲಿ ಕಂದಾಯ, ಪೊಲೀಸ್‌ ಇಲಾಖೆಯಲ್ಲಿ ಪ್ಯಾಕೇಜ್‌ ಸಿಸ್ಟಂ ದಂಧೆ ಇರುವ ಬಗ್ಗೆ ಆರೋಪಿಸಿದ್ದೆ.

ಅವರು ಹಿಂದಿನಿಂದಲೂ ಇದೆ ಎನ್ನುವ ಮೂಲಕ ಭ್ರಷ್ಟಾಚಾರವನ್ನು ಇದೆ ಎಂದು ಒಪ್ಪಿಕೊಂಡಿದ್ದಾರೆ. ಯಾರಿಗೂ ಲಂಚ ಕೊಡಬೇಡಿ ಎಂದು ಏಕೆ ಬಹಿರಂಗವಾಗಿ ಹೇಳುತ್ತಿಲ್ಲ, ಆರೋಪದ ನಂತರವು ದಂಧೆ ಮುಂದುವರಿದಿದೆ. ನಮ್ಮದೇನು ಇದರಲ್ಲಿ ಸ್ವಾರ್ಥವಿಲ್ಲ, ಸಾರ್ವಜನಿಕ ಹಿತದೃಷ್ಟಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದು ಪ್ರಶ್ನೆ ಮಾಡಿದ್ದೇವೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆಡಿಎಸ್‌ನಿಂದ ಗೆಲ್ಲಿಸಿ: ಸಿದ್ಧಾಂತದ ಬಗ್ಗೆ ಮಾತನಾಡುವ ಶಾಸಕ ವಿಶ್ವನಾಥ್‌ ಅವರ ಪುತ್ರ ಅಮಿತ್‌ ದೇವರಹಟ್ಟಿ ಕಾಂಗ್ರೆಸ್‌ನಿಂದ ಜಿಪಂ ಸದಸ್ಯನಾಗಿದ್ದು, ಮೊದಲು ಆ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಜೆಡಿಎಸ್‌ನಿಂದ ಗೆಲ್ಲಿಸಲಿ ಎಂದು ಆಗ್ರಹಿಸಿದರು. ಶಾಸಕರ ಆಡಳಿತದಿಂದ ಬೇಸತ್ತ ಕೆ.ಆರ್‌.ನಗರ ತಾಲೂಕಿನ ಜನತೆ ಎರಡು ಬಾರಿ ಸೋಲಿಸಿದ್ದಾರೆ. ಮೊದಲು ಆತ್ಮಾವಲೋಕನ ಮಾಡಿಕೊಳ್ಳಲೆಂದು ಛೇಡಿಸಿದರು.

ತನಿಖೆ ನಡೆಸಿ: ತಾಲೂಕಿನ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಪಕ್ಷ ಕೈಜೋಡಿಸಲಿದೆ. ಚಿಲ್ಕುಂದ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 19 ಕೋಟಿ ರೂ. ಮಂಜೂರು ಮಾಡಿಸಿರುವುದು ಸ್ವಾಗತಾರ್ಹ. ಈ ಹಿಂದೆ ಇವರೇ ಸಂಸದರಾಗಿದ್ದರು ಹಾಗೂ ಮಾಜಿ ಶಾಸಕ ಮಂಜುನಾಥ್‌‌ ಅವಧಿಯಲ್ಲಿ ಚಿಲ್ಕುಂದ ಯೋಜನೆ ಕಳಪೆ ಕಾಮಗಾರಿಯಿಂದ ಹಳ್ಳ ಹಿಡಿದಿದ್ದು, ಅದನ್ನೇಕೆ ತನಿಖೆ ಮಾಡಿಸುತ್ತಿಲ್ಲ, ಸರಕಾರದ ಹಣ ಪೋಲಾಗುವುದು ಎಷ್ಟರ ಮಟ್ಟಿಗೆ ಸರಿ, ಈ ಬಗ್ಗೆ ಉತ್ತರಿಸಲಿ, ಕಳಪೆ ಕಾಮಗಾರಿ ನಡೆಸಿರುವವರ ವಿರುದ್ಧ ಕ್ರಮವಾಗಲಿ ಎಂದು ಒತ್ತಾಯಿಸಿದರು.

Advertisement

ರಾಜೀನಾಮೆ ನೀಡಿ: ತಾಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ಜೆಡಿಎಸ್‌ ಮುಖಂಡರೆಂದು ಹೇಳಿಕೊಂಡಿರುವ ಶಿವಶೇಖರ್‌ ಅ‌ವರು ಹಲವು ವರ್ಷಗಳ ಹಿಂದೆ ಅಂಬೇಡ್ಕರ್‌ ಪುತ್ಥಳಿ ಸ್ಥಾಪಿಸಲು ಸಾರ್ವಜನಿಕರು, ಅಧಿಕಾರಿಗಳಿಂದ ಸಾಕಷ್ಟು ಹಣ ವಸೂಲಿ ಮಾಡಿದ್ದು, ಈವರೆಗೂ ಪುತ್ಥಳಿ ನಿರ್ಮಾಣವಾಗಿಲ್ಲ, ಹಣಕ್ಕೂ ಲೆಕ್ಕ ನೀಡಿಲ್ಲ.

ಇನ್ನು ಇವರ ಪತ್ನಿ ಕಾಂಗ್ರೆಸ್‌ನಿಂದ ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದರು. ಇದೀಗ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದು, ಇನ್ನೊಬ್ಬರ ವಿರುದ್ಧ ಆರೋಪ ಮಾಡುವ ಮೊದಲು ರಾಜಿನಾಮೆ ಕೊಟ್ಟು, ಜೆಡಿಎಸ್‌ನಿಂದ ಗೆದ್ದು ಬರಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್‌, ತಾಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಅಪ್ಪಣ್ಣ , ತಾಲೂಕು ಕಾರ್ಯದರ್ಶಿ ಚಂದ್ರೇಗೌಡ, ನಗರ ಕಾರ್ಯದರ್ಶಿ ನಾರಾಯಣ್‌ ಉಪಸ್ಥಿತರಿದ್ದರು.

ಗೋಮಾಂಸ ಮಾರಾಟ ತಡೆಯದಿದ್ದರೆ ಹೋರಾಟ: ಹುಣಸೂರು ನಗರದ ಜನ ನಿಬಿಡ ಪ್ರದೇಶದಲ್ಲಿ ಗೋಮಾಂಸ ಮಾರಾಟ ತಡೆಯದಿದ್ದಲ್ಲಿ ಬಿಜೆಪಿ ವತಿಯಿಂದ ಸಾರ್ವಜನಿಕರೊಡಗೂಡಿ ನಗರಸಭೆ ಮುಂದೆ ಹಂದಿ ಮಾಂಸ ಮಾರಾಟ ಮಾಡುತ್ತೇವೆಂಬ ಹೇಳಿಕೆಗೆ ತಾವು ಬದ್ಧರಾಗಿದ್ದು, ನಿಗದಿತ ಜೂ.29ರೊಳಗೆ ಬಂದ್‌ ಆಗದಿದ್ದಲ್ಲಿ ಮಾಂಸ ಮಾರಾಟ ಮಾಡಿ ಪ್ರತಿಭಟಿಸುವುದು ಅನಿವಾರ್ಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್‌.ಯೋಗಾನಂದಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next