Advertisement

ಕೋವಿಡ್‌ ಕರ್ತವ್ಯ ನಿರ್ವಹಣೆಗೆ ಅಗತ್ಯ ಮಾನವ ಸಂಪನ್ಮೂಲ ಒದಗಿಸಲು ಸಿದ್ಧ

08:59 AM Jul 28, 2020 | Suhan S |

ಧಾರವಾಡ: ಕೋವಿಡ್‌ ಸೋಂಕಿತರ ಚಿಕಿತ್ಸೆ, ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಕೌನ್ಸೆಲಿಂಗ್‌, ಸೀಲ್‌ಡೌನ್‌ ಪ್ರದೇಶಗಳ ನಿರ್ವಹಣೆ, ಜನದಟ್ಟಣೆ ಕಡಿಮೆ ಮಾಡಲು ಮಾರುಕಟ್ಟೆಗಳ ಸ್ಥಳಾಂತರಿಸಲು ಅಗತ್ಯವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಮಾನವ ಸಂಪನ್ಮೂಲ ಒದಗಿಸಲಾಗುವುದು. ಹೀಗಾಗಿ ಹು-ಧಾ ಮಹಾ ನಗರ ಪಾಲಿಕೆಯು ಪೊಲೀಸ್‌ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ನಿತೇಶ್‌ ಪಾಟೀಲ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ 19 ನಿಯಂತ್ರಣಕ್ಕಾಗಿ ರಚಿಸಿರುವ ಕಣ್ಗಾವಲು ತಂಡಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ ನಿರ್ವಹಣೆ ಎಲ್ಲಾ ಇಲಾಖೆಗಳ ಅಧಿ ಕಾರಿಗಳು, ಇಂಜನಿಯರ್‌ಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಪಾರ್ಥಿವ ಶರೀರಗಳ ಅಂತ್ಯಕ್ರಿಯೆ ನಿರ್ವಹಣೆಗೆ ನಗರ ಸ್ಥಳೀಯ ಸಂಸ್ಥೆಗಳು ಪ್ರತ್ಯೇಕ ಏಜೆನ್ಸಿ ಗುರುತಿಸಿ ಕಟ್ಟಿಗೆ, ಮಾನವ ಸಂಪನ್ಮೂಲ, ವಾಹನ ಮತ್ತಿತರ ಅಗತ್ಯ ಸೇವೆಗಳು 24¥7 ಲಭ್ಯವಿರುವಂತೆ ನೋಡಿಕೊಳ್ಳಬೇಕು. ಪಾರ್ಥಿವ ಶರೀರಗಳ ಅಂತ್ಯಕ್ರಿಯೆ ಸಂದರ್ಭದಲ್ಲಿ ನಿಯಮಗಳ ಪಾಲನೆ ಪರಿಶೀಲಿಸಲು ಪೊಲೀಸ್‌ ಇಲಾಖೆ ಸಹಕಾರ ಪಡೆಯಬೇಕೆಂದು ಸೂಚಿಸಿದರು.

ಮಹಾನಗರ ಪಾಲಿಕೆಯು ಜನಜಾಗೃತಿಗೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮನೆಗಳಲ್ಲಿ ಪ್ರತ್ಯೇಕವಾಗಿ ಇರುವಿಕೆ ಕುರಿತು ವ್ಯಂಗ್ಯಚಿತ್ರ, ಕಲೆ, ಫೋಟೋಗಳನ್ನು ಬಳಸಿ ಹೆದ್ದಾರಿ ಫಲಕಗಳನ್ನು ಅವಳಿನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಬೇಕೆಂದು ಸೂಚನೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಜಾಗೃತಿ ಮೂಡಿಸಲು ಚಿಕ್ಕಮಕ್ಕಳಿಂದ ಆನ್‌ ಲೈನ್‌ ಮೂಲಕ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ, ಉತ್ತಮ ಕಲಾಕೃತಿ ನೀಡಿದ ಮಕ್ಕಳನ್ನು ಜಿಲ್ಲಾ ಧಿಕಾರಿಗಳೊಂದಿಗೆ ಉಪಹಾರಕ್ಕೆ ಆಹ್ವಾನಿಸಿ, ಪ್ರೋತ್ಸಾಹಿಸಬೇಕೆಂಬ ಸಲಹೆ ನೀಡಿದಾಗ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿ, ಚಿತ್ರಕಲೆ,ಲೇಖನ, ಘೋಷವಾಕ್ಯ ರಚನೆ ಹೀಗೆ ವೈವಿಧ್ಯಮಯ ಸ್ಪರ್ಧೆ ಏರ್ಪಡಿಸಲು ಸೂಚಿಸಿದರು.

ಜಿಪಂ ಸಿಇಒ ಡಾ| ಬಿ.ಸಿ.ಸತೀಶ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಪ್ರಕರಣಗಳ ದಾಖಲೀಕರಣ ಮತ್ತು ಡಿಸ್‌ ಚಾರ್ಜ್‌ ವರದಿಗಳ ಕ್ರೋಢೀಕರಣ ಸರಳಗೊಳಿಸಲು ಗೂಗಲ್‌ ಸ್ಪ್ರೆಡ್‌ ಶೀಟ್‌ ರಚಿಸಿ ಆ ಮೂಲಕ ಅಪ್‌ಡೇಟ್‌ ಮಾಡುವ ಸೌಕರ್ಯ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಕಲ್ಪಿಸಬೇಕು ಎಂದರು.

ಹು-ಧಾ ಉಪ ಪೊಲೀಸ್‌ ಆಯುಕ್ತ ಕೃಷ್ಣಕಾಂತ್‌, ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಡಿಮ್ಹಾನ್ಸ್‌ ಮುಖ್ಯ ಆಡಳಿತಾಧಿಕಾರಿ ಡಾ| ಷಣ್ಮುಖ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಯಶವಂತ ಮದೀನಕರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next