ವಾಷಿಂಗ್ಟನ್: ಪ್ಯಾಂಗ್‌ಯಾಂಗ್‌ನ ಅಣ್ವಸ್ತ್ರ ಸಜ್ಜಿತ ಆಡಳಿತದ ವಿರುದ್ಧ ಮಾತಿನ ಸಮರ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಉತ್ತರ ಕೊರಿಯಾ ಮೇಲೆ ದಾಳಿ ನಡೆಸಲು ಅಮೆರಿಕ ತನ್ನ ಶಸ್ತ್ರಾಸ್ತ್ರಗಳನ್ನು ಲೋಡ್ ಮಾಡಿ, ಗುರಿ ಇಟ್ಟು ಕೂತಿದ್ದು, ಟ್ರಿಗರ್ ಒತ್ತುವುದೊಂದೇ ಬಾಕಿ,’ ಎಂದು ಹೇಳಿದ್ದಾರೆ.
ಈ ಮೂಲಕ ಎರಡು ಶಕ್ತಿಶಾಲಿ ರಾಷ್ಟ್ರಗಳ ನಡುವಿನ ಯುದ್ಧದ ಕಾವು ಮತ್ತಷ್ಟು ಏರಿದೆ. ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಟ್ರಂಪ್, “ಉತ್ತರ ಕೊರಿಯಾ ಏನಾದರೂ ಅನುಚಿತವಾಗಿ ವರ್ತಿಸಿದರೆ ಆ ನೆಲದ ಮೇಲೆ ದಾಳಿ ನಡೆಸಲು ಎಲ್ಲ ಸಿದ್ಧತೆಗಳನ್ನು ಅಮೆರಿಕ ಮಾಡಿಕೊಂಡಿದೆ.
ರಕ್ಷಣಾ ಪಡೆ ಸಂಪೂರ್ಣ ಶಸ್ತ್ರಸಜ್ಜಿತವಾಗಿ ನಿಂತಿದ್ದು, ಆದೇಶ ನೀಡುವು ದೊಂದೇ ಬಾಕಿ. ಹೀಗಾಗಿ ಕಿಮ್ ಜಾಂಗ್ ಉನ್ ತಮ್ಮ ಪಥ ಬದಲಿಸುತ್ತಾರೆ ಎಂಬ ವಿಶ್ವಾಸವಿದೆ,’ ಎಂದಿದ್ದಾರೆ.
ಒಂದೊಮ್ಮೆ ಅಮೆರಿಕ ಮೇಲೆ ಉತ್ತರ ಕೊರಿಯಾ ಮೊದಲಿಗೆ ಕ್ಷಿಪಣಿ ದಾಳಿ ನಡೆಸಿದರೆ ತಾನು ನೆರವಿಗೆ ಬರುವುದಿಲ್ಲ ಎಂದು
ಹೇಳಿರುವ ಚೀನಾ, ಅಮೆರಿಕ ದಾಳಿ ನಡೆಸಿದರೆ ಉತ್ತರ ಕೊರಿಯಾಕ್ಕೆ ತನ್ನ ಬೆಂಬಲ ಇದೆ ಎಂದು ಹೇಳಿದೆ.