ಗುರುಮಠಕಲ್: ನೌಕರರ ಶ್ರೇಯೋಭಿವೃದ್ಧಿಗಾಗಿ ಎಂತಹ ಹೋರಾಟಕ್ಕೂ ನಾನು ಸಿದ್ಧ. ಸಂಘಟನೆ ದೃಷ್ಟಿಯಲ್ಲಿ ಸರ್ಕಾರಿ ನೌಕರರ ಸಂಘ ಪ್ರಬಲವಾಗಿದೆ. ಸಂಘಟನೆ ಸಹಕಾರ ನನ್ನೊಂದಿಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಪಟ್ಟಣದ ಹೀರಾ ಗಾರ್ಡನ್‌ನಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಹೊಸ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ, ರಾಜ್ಯ ಪದಾಧಿಕಾರಿಗಳ ಸನ್ಮಾನ ಹಾಗೂ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಹಳೇ ಪಿಂಚಣಿ ಪದ್ಧತಿ ಜಾರಿಗೊಳಿಸಬೇಕು. ಎನ್‌ಪಿಎಸ್ ರದ್ದತಿ, ಪೇ ಕಮಿಷನ್, ಖಾಲಿ ಹುದ್ದೆ ಭರ್ತಿ, ಕೇಂದ್ರ ಮಾದರಿ ವೇತನ ಪಡೆಯುವಿಕೆಗೆ ನಿರಂತರ ಪ್ರಯತ್ನ ಸಾಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರ ಸಮಸ್ಯೆ ಸರ್ಕಾರಿ ನೌಕರರ ಸಮಸ್ಯೆಯೆಂದು ಪರಿಗಣಿಸಿದೆ. ನೌಕರರ ಗುಣಾತ್ಮಕ ಸೇವೆಗೆ ಸರ್ಕಾರ ಪೂರಕ ಸೌಲಭ್ಯ ಒದಗಿಸುವಂತೆ ಸಂಘಟನೆ ಮೂಲಕ ಪ್ರಯತ್ನಿಸುತ್ತೇನೆ ಎಂದ ಅವರು, ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಯೋಜನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಂಗಳೊಳಗೆ ಚಾಲನೆ ನೀಡಲಿದ್ದಾರೆ. ಒಟಿಎಸ್ ವರ್ಗಾವಣೆಗಾಗಿ ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮೊದಲು ರಾಜ್ಯಾಧ್ಯಕ್ಷ ಷಡಕ್ಷರಿ ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಸಂಘದ ತಾಲೂಕು ಅಧ್ಯಕ್ಷ ಸಂತೋಷಕುಮಾರ ನಿರೇಟಿ ಪ್ರಾಸ್ತಾವಿಕ ಮಾತನಾಡಿದರು.
ಹೈದ್ರಾಬಾದ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಮುಖ್ಯಸ್ಥ ಮಧುಸೂದನ ಜೆ.ವಿ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮಾಲಿಪಾಟೀಲ್, ಕಲಬುರ್ಗಿ ಜಿಲ್ಲಾಧ್ಯಕ್ಷ ರಾಜು ಲಿಂಗೇಟಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಕಾರ್ಯದರ್ಶಿ ಕಿಷ್ಟರೆಡ್ಡಿ, ಪಿ. ಕಿಷ್ಟಪ್ಪ, ಮೋನಪ್ಪ ಗಚ್ಚಿಮನಿ, ಬಿಇಒ ಚಂದ್ರಕಾಂತರೆಡ್ಡಿ, ರಾಘವೇಂದ್ರ ಕಲಾಲ್, ಅಶೋಕ ಕೆಂಭಾವಿ, ಲಕ್ಷ್ಮೀಕಾಂತರೆಡ್ಡಿ, ಗೋಪಾಲರೆಡ್ಡಿ ದಂತಾಪೂರ, ಸುದರ್ಶನರೆಡ್ಡಿ, ನಾರಾಯಣರೆಡ್ಡಿ ಪೊಲೀಸ್ ಪಾಟೀಲ್, ಭೀಮರಾಯ, ಹರಿಬಾಬು, ದೊಡ್ಡ ಬಸವರಾಜು, ಯಾಮಾರೆಡ್ಡಿ, ರಾಚಣ್ಣ ಗೌಡ ಇದ್ದರು.