ದಾವಣಗೆರೆ: ಶಿರಾ, ರಾಜರಾಜೇಶ್ವರಿ ನಗರ ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದು ನಾನು ಈ ಸವಾಲು ಸ್ವೀಕರಿಸಲು ಸಿದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವಪ್ಪ ಪ್ರತಿಕ್ರಿಯಿಸಿದರು.
ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಹಿಂದೆ ನಡೆದ ಲೊಕಸಭೆ ಚುನಾವಣೆ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅದು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದಿದ್ದರು. ಆಗ ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು. ಸಮ್ಮಿಶ್ರ ಸರ್ಕಾರ ಪತನವಾಗಿ 12 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯವರು ಯಾರೂ ಗೆಲ್ಲುವುದಿಲ್ಲ ಎಂದಿದ್ದರು. ಆಗ ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಯಿತು. ಇದೀಗ ಉಪಚುನಾವಣೆ, ಪರಿಷತ್ ಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಎನ್ನುತ್ತಿದ್ದು ನಾನು ಈ ಸವಾಲು ಸ್ವೀಕರಿಸಲು ಸಿದ್ಧ ಎಂದರು.
ಇದನ್ನೂ ಓದಿ:ಭೀಮಾ ಸಂತ್ರಸ್ತರ ನೆರವಾಗಲು ತಾಂತ್ರಿಕ ಕಾರಣ ಅಡ್ಡಿ: ಶಿವಾನಂದ ಪಾಟೀಲ್
ಸಿದ್ದರಾಮಯ್ಯ ಅವರಿಗೆ ಪ್ರತಿಯೊಂದಕ್ಕೂ ಸ್ಟೇಟ್‌ಮೆಂಟ್ ಕೊಡುವುದು ಹವ್ಯಾಸ. ಸಿದ್ದರಾಮಯ್ಯ ಇರುವುದೇ ಟೀಕೆ ಮಾಡಲು. ಹಾಗಾಗಿ ಅವರ ಎಲ್ಲ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಸಿದ್ದರಾಮಯ್ಯ ಅವರು ಇನ್ನು ಮುಂದೆಯಾದರೂ ದಯಮಾಡಿ ಎಲ್ಲವುದಕ್ಕೂ ಟೀಕೆ ಮಾಡುವುದನ್ನು ನಿಲ್ಲಿಸಲು ಮನವಿ ಮಾಡುವುದಾಗಿ ಹೇಳಿದರು.