Advertisement

ಪ್ರಾಕೃತಿಕ ಸವಾಲು ಸಮರ್ಥವಾಗಿ ಎದುರಿಸಲು ಸಜ್ಜಾಗಿ

09:59 AM May 11, 2019 | Team Udayavani |

ಹಾಸನ: ಮುಂಬರುವ ಮುಂಗಾರು ಅವಧಿಯಲ್ಲಿ ಎದುರಾಗಬಹುದಾದ ಸಂಭವನೀಯ ಪ್ರಾಕೃತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಸನ್ನದ್ಧವಾಗಿರಬೇಕೆಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರಿನ ಸವಾಲು ಎದುರಿಸುವ ಸಿದ್ಧತೆ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದರು.

ಕಳೆದ ವರ್ಷದ ಮಳೆಗಾಲದಲ್ಲಿ ಹಲವು ಪ್ರಾಕೃತಿಕ ವಿಕೋಪಗಳು ಸಂಭವಿಸಿವೆ. ಈ ಹಿಂದಿನ ಅನುಭವದ ಆಧಾರದ ಮೇಲೆ ಈ ಬಾರಿ ಯಾವುದೇ ರೀತಿಯ ಅನಾಹುತಗಳಾಗದಂತೆ ಯೋಜಿತ ಸಿದ್ಧತೆ ಕೈಗೊಂಡು ಕಾರ್ಯಾನುಷ್ಠಾನ ಗೊಳಿಸಬೇಕೆಂದರು.

ಪ್ರಾಕೃತಿಕ ವಿಕೋಪಗಳನ್ನು ಎಲ್ಲಾ ಇಲಾಖೆಗಳು ಒಂದು ತಂಡವಾಗಿ ಎದುರಿಸಬೇಕಾಗುತ್ತದೆ. ಪರಸ್ಪರ ಸಹಕಾರ-ಸಮನ್ವಯ ಮುಖ್ಯ. ಬೇಕಾದ ಸಾಧನ- ಸಲಕರಣೆ, ಮಾನವ ಸಂಪನ್ಮೂಲ, ತಾಂತ್ರಿಕ ನೆರವನ್ನು ಮೊದಲೇ ಗುರ್ತಿಸಿಟ್ಟುಕೊಳ್ಳಬೇಕಿದೆ. ಜಿಲ್ಲೆಯ ಈ ಹಿಂದಿನ ಘಟನಾವಳಿ ಅವಲೋಕಿಸಿದಾಗ ಸಕಲೇಶ ಪುರ, ಬೇಲೂರು, ಆಲೂರು ಮತ್ತು ಅರಕಲಗೂಡು ಹಾಗೂ ಹೊಳೆನರಸೀಪುರ ತಾಲೂಕುಗಳಲ್ಲಿ ಮಳೆ ಸಂದರ್ಭದಲ್ಲಿ ಹಲವು ರೀತಿಯ ವಿವಿಧ ಸಮಸ್ಯೆಗಳು ಎದುರಾಗಿವೆ. ಈ ಬಾರಿ ಯಾವುದೇ ಗೊಂದಲಗಳಿ ಲ್ಲದಂತೆ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

ಕಾಮಗಾರಿಗಳು ಚುರುಕಾಗಲಿ: ಸರ್ಕಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ್‌ ಖತ್ರಿ ಮಾತನಾಡಿ, ಕಳೆದ ಮುಂಗಾರಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನ ಸಂಪೂರ್ಣ ಸದ್ಬಳಕೆಯಾಗಲಿ. ಎಲ್ಲಾ ಕಾಮಗಾರಿ ಬೇಗ ಪೂರ್ಣಗೊಳಿಸಲು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ನಗರಾ ಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

Advertisement

ಕುಡಿವ ನೀರಿನ ಟ್ಯಾಂಕರ್‌ ಹಾಗೂ ಖಾಸಗಿ ಬೋರ್‌ವೆಲ್ಗಳ ಬಿಲ್ಗಳನ್ನು ಪ್ರತಿ 15 ದಿನಗಳಿ ಗೊಮ್ಮೆ ಜಿಲ್ಲಾಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಸಣ್ಣ ನೀರಾವರಿ, ಅರಣ್ಯ ಇಲಾಖೆ, ಪಶುಸಂಗೋಪನೆ ಇಲಾಖೆ, ಹಾಗೂ ಆರೋಗ್ಯ ಇಲಾಖೆಗಳು ತಮ್ಮ ಇಲಾಖೆ ಮಟ್ಟದ ಸನ್ನದ್ಧತೆ ಪುನರ್‌ ಅವಲೋಕನ ಮಾಡಿ ವ್ಯವಸ್ಥಿತವಾಗಿ ಸಜ್ಜಾಗಿರಬೇಕು ಎಂದರು.

ಬರ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ತುರ್ತು ಅಗತ್ಯಗಳಿದ್ದರೆ, ಕ್ರಮ ಕೈಗೊಳ್ಳಬೇಕು, ಜಾನು ವಾರುಗಳ ಮೇವಿನ ಪರಿಸ್ಥಿತಿ ಗಮನಿಸಿ ಮೇವು ಬ್ಯಾಂಕ್‌, ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ , ಪ್ರಾದೇಶಿಕ ಆಯುಕ್ತ‌ ಟಿ.ಕೆ.ಅನಿಲ್ಕುಮಾರ್‌ ಹಲವು ಸಲಹೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್‌, ಅತಿವೃಷ್ಠಿ ಹಾಗೂ ಅನಾವೃಷ್ಠಿ ಪರಿಹಾರಕ್ಕೆ ಈವರೆಗೆ ಬಿಡುಗಡೆಯಾಗಿರುವ ಅನುದಾನ, ಕೈಗೊಂಡಿರುವ ಕ್ರಮ, ಮುಂಗಾರು ವೇಳೆ ಸಂಭವನೀಯ ಅಪಾಯ ಎದುರಿಸಲು ಮಾಡಿಕೊಂಡಿರುವ ಸಿದ್ಧತಾ ಯೋಜನೆ, ತಾಲೂಕುವಾರು ಸಮಿತಿಗಳ ರಚನೆ, ಕುಡಿವ ನೀರಿನ ಸ್ಥಿತಿ ಗತಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್‌ ಪ್ರಕಾಶ್‌, ಕುಡಿವ ನೀರಿನ ಕ್ರಮ, ಗ್ರಾಪಂ ಹಂತಗಳ ಸಿದ್ಧತೆಗಳ ಬಗ್ಗೆ ವಿವರಿಸಿದರು.

ದಕ್ಷಿಣ ವಲಯ ಐಜಿಪಿ ಉಮೇಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸ್‌ ರೆಡ್ಡಿ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜು, ಕವಿತಾ ರಾಜರಾಂ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next