Advertisement

ಪ್ರವಾಹ ಎದುರಿಸಲು ಸನ್ನದ್ದರಾಗಿ: ಡಿಸಿ

12:12 PM May 06, 2022 | Team Udayavani |

ಬೆಳಗಾವಿ: ಪ್ರವಾಹದ ತುರ್ತು ಸಂದರ್ಭದಲ್ಲಿ ಜನರು ಮತ್ತು ಜಾನುವಾರುಗಳ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪರಿಸ್ಥಿತಿ ಉದ್ಭವಿಸಿದರೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ವರ್ಗಾವಣೆಯಾಗುವ ಮುನ್ನ ವಿಡಿಯೋ ಸಂವಾದದ ಮೂಲಕ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೆರೆಹಾವಳಿ, ಬರ, ಸಂಭವನೀಯ ಕೋವಿಡ್‌ ನಾಲ್ಕನೇ ಅಲೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆ ರೂಪಿಸಬೇಕು ಎಂದರು.

ತಹಶೀಲ್ದಾರರು ಕೂಡಲೇ ಆಯಾ ತಾಲೂಕು ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ವಿಪತ್ತು ನಿರ್ವಹಣೆಯ ಸಿದ್ಧತೆಗಳನ್ನು ಪರಿಶೀಲಿಸಬೇಕು. ಅದರಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹ ಸಭೆ ನಡೆಸಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.

ಪ್ರವಾಹ ಸಂದರ್ಭದಲ್ಲಿ ನದಿತೀರದ ಗ್ರಾಮಗಳ ಜನರ ರಕ್ಷಣೆಗೆ ಅಗತ್ಯವಿರುವ ಬೋಟ್‌ ಗಳ ಬಗ್ಗೆ ಮುಂಚಿತವಾಗಿಯೇ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು. ಅಗತ್ಯವಿರುವ ಬೋಟ್‌ಗಳು ಲಭ್ಯವಿಲ್ಲದಿದ್ದರೆ ಕೂಡಲೇ ಬೋಟ್‌ ಒದಗಿಸಲಾಗುವುದು. ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ಆರೋಗ್ಯ, ಪೊಲೀಸ್‌, ಗೃಹರಕ್ಷಕ ಸೇರಿದಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ತುರ್ತು ಸಂದರ್ಭದಲ್ಲಿ ತಕ್ಷಣವೇ ಕಂಟ್ರೋಲ್‌ ರೂಮ್‌ ಆರಂಭಿಸಬೇಕಾಗುತ್ತದೆ. ಆದ್ದರಿಂದ ಕಂಟ್ರೋಲ್‌ ರೂಂ ಸ್ಥಾಪನೆ, ಅದಕ್ಕೆ ಅಗತ್ಯವಿರುವ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆಯನ್ನು ಮೊದಲೇ ಮಾಡಿಕೊಳ್ಳಬೇಕು. ಪರಿಸ್ಥಿತಿ ಆಧರಿಸಿ ಕೂಡಲೇ ನಿಯಂತ್ರಣ ಕೊಠಡಿ ಆರಂಭಿಸಬೇಕು. ಪ್ರವಾಹ ಸಂದರ್ಭದಲ್ಲಿ ಅಗತ್ಯವಾದ ಔಷಧ ಹಾಗೂ ಇತರೆ ಸಾಮಗ್ರಿಗಳ ದಾಸ್ತಾನು ಇಟ್ಟುಕೊಳ್ಳಬೇಕು. ತಕ್ಷಣವೇ ನಿಯೋಜಿಸಲು ಅನುಕೂಲವಾಗುವಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ತಂಡಗಳನ್ನು ರಚಿಸಬೇಕು ಎಂದು ಸೂಚನೆ ನೀಡಿದರು.

ಪರಸ್ಪರ ಮಾಹಿತಿ ವಿನಿಮಯ: ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಜಲಾಶಯಗಳ ಹಿರಿಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ನೆರೆಯ ಮಹಾರಾಷ್ಟ್ರದ ಮಳೆಯ ಪ್ರಮಾಣ ಮತ್ತು ಕೊಯ್ನಾ ಸೇರಿದಂತೆ ಇತರೆ ಜಲಾಶಯಗಳಿಂದ ನೀರು ಬಿಡುಗಡೆ ಸಂದರ್ಭದಲ್ಲಿ ಮುಂಚಿತವಾಗಿ ಮಾಹಿತಿಯನ್ನು ಪರಸ್ಪರವಾಗಿ ವಿನಿಮಯ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

Advertisement

ಮಾನವ ಜೀವಹಾನಿ, ಜಾನುವಾರು ಜೀವಹಾನಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೂಡಲೇ ಕುಟುಂಬದ ವಾರಸುದಾರರಿಗೆ ಪರಿಹಾರದ ಬಗ್ಗೆ ತುರ್ತಾಗಿ ವಿವರಿಸಬೇಕು. ವಿನಾಕಾರಣ ವಿಳಂಬ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್‌.ವಿ ಮಾತನಾಡಿ, ಪ್ರತಿ ತಾಲೂಕುವಾರು ಗುರುತಿಸಲಾಗಿರುವ ಕಾಳಜಿ ಕೇಂದ್ರಗಳ ಪಟ್ಟಿ, ಎಷ್ಟು ಜನರಿಗೆ ಅಲ್ಲಿ ಅವಕಾಶ ಕಲ್ಪಿಸಬಹುದು ಎಂಬುದು ಸೇರಿದಂತೆ ಎಲ್ಲ ಬಗೆಯ ಮಾಹಿತಿಯನ್ನು ಹೊಂದಿರುವ ಕಿರುಪುಸ್ತಿಕೆಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಬೇಕು ಎಂದು ಹೇಳಿದರು.

ತುರ್ತು ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ ಖಾಸಗಿ ಬೋರ್‌ ವೆಲ್‌ ಹಾಗೂ ಟ್ಯಾಂಕರ್‌ ಗಳನ್ನು ಗುರುತಿಸಬೇಕು ಎಂದು ಅವರು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಂದಗಾವಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next