ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಕಳೆದ ವರ್ಷ ಪ್ರವಾಹದಿಂದ ಭೀಕರ ಸಮಸ್ಯೆ ಎದುರಿಸುತ್ತಿದ್ದು, ಈ ಬಾರಿ ಪ್ರವಾಹ ಎದುರಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು.
ಜಿ.ಪಂ ಸಭಾ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಪ್ರವಾಹ ಪೂರ್ವ ಹಾಗೂ ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹಕ್ಕೆ ಒಳಗಾಗುವ ಗ್ರಾಮಗಳಿಗೆ ತೆರಳಿ ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು. ಆಯಾ ತಾಲೂಕಿನ ತಹಶೀಲ್ದಾರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರವಾಹ ನಿಯಂತ್ರಿಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಕಾರ್ಯಪ್ರವೃತ್ತರಾಗುವಂತೆ ಆಧಿಕಾರಿಗಳಿಗೆ ತಿಳಿಸಿದರು.
ಬೆಳೆ ಹಾನಿ ಸಮೀಕ್ಷೆಗೆ ತಂಡ ರಚನೆ, ಮನೆ ಹಾನಿ ಕುರಿತು ತಂಡ ರಚನೆ, ಮೇವು ಪೂರೈಕೆ, ಸಹಾಯವಾಣಿ ಕೇಂದ್ರ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸ್ಥಾಪಿಸಲು ಸೂಚಿಸಿದರು. ಜನರ ಆರೋಗ್ಯ, ಜಾನುವಾರು ಆರೋಗ್ಯಕ್ಕೆ ಅಗತ್ಯ ಔಷಧಿಗಳ ದಾಸ್ತಾನು, ಮೇವು ಹಾಗೂ ಮುಂತಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಮೂಲಭೂತ ಸೌಲಭ್ಯ, ಗಂಜಿ ಕೇಂದ್ರ, ಗೋ ಶಾಲೆ ಕುರಿತು ಕ್ರಮವಹಿಸಲು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 27 ನಾವೆಗಳಿದ್ದು, ಈ ಪೈಕಿ 19 ಸುಸ್ಥಿತಿಯಲ್ಲಿರುವುದಾಗಿ ತಿಳಿಸಿದರು.
ಅವುಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಳ್ಳಲು ಸೂಚಿಸಿದರು. ಹಿಪ್ಪರಗಿ ಜಲಾಶಯದಲ್ಲಿ ಕೃಷ್ಣಾ ನದಿಯ ಗರಿಷ್ಠ ಮಟ್ಟ 524.87 ಮೀಟರ್ ಇದ್ದು, ಇಂದಿನ ಮಟ್ಟ 520.90 ಮೀಟರ್ ಇದೆ. ಒಳ ಹರಿವು 65000 ಕ್ಯೂಸೆಕ್ ಇದ್ದು, ಹೊರ ಹರಿವು 64000 ಕ್ಯೂಸೆಕ್ ಇದೆ. ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 519.60 ಮೀಟರ ಇದ್ದು, ಇಂದಿನ ಮಟ್ಟ 517 ಮೀಟರ್ ಇದೆ. ಒಳ ಹರಿವು 72030 ಕ್ಯೂಸೆಕ್ ಇದ್ದು, ಹೊರ ಹರಿವು 16545 ಕ್ಯೂಸೆಕ್ ಇದೆ. ಹಿಡಕಲ್ ಜಲಾಶಯದಲ್ಲಿ ಫಟಪ್ರಭಾ ನದಿಯ ಗರಿಷ್ಠ ಮಟ್ಟ 2175 ಮೀಟರ್ ಇದ್ದು, ಇಂದಿನ ಮಟ್ಟ 2120.33 ಮೀಟರ್ ಇದೆ. ಒಳಹರಿವು 17984 ಕ್ಯೂಸೆಕ್ ಇದ್ದು, ಹೊರ ಹರಿವು 103 ಕ್ಯೂಸೆಕ್ ಇದೆ. ಅದೇ ರೀತಿ ನವೀಲು ತೀರ್ಥ ಜಲಾಶಯದಲ್ಲಿ ಮಲಪ್ರಭಾ ನದಿಯ ಗರಿಷ್ಠ ಮಟ್ಟ 2079.50 ಮೀಟರ್ ಇದ್ದು, ಇಂದಿನ ಮಟ್ಟ 13.896 ಮೀಟರ್ ಇದೆ. ಒಳ ಹರಿವು 19095 ಕ್ಯೂಸೆಕ್ ಇದ್ದು, ಹೊರ ಹರಿವು 1364 ಕ್ಯೂಸೆಕ್ ಇದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಪ್ರವಾಹ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಪಂ ಸಿಇಒ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವಮುರಗಿ, ಉಪ ವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಮುಂತಾದವರು ಉಪಸ್ಥಿತರಿದ್ದರು.