ಹುಬ್ಬಳ್ಳಿ: ಯಾವುದೇ ಷರತ್ತಿಲ್ಲದೆ ಕಟ್ಟಿದ ಪಕ್ಷಕ್ಕೆ ವಾಪಸ್ಸು ಬಂದಿದ್ದೇನೆ. ಹೈಕಮಾಂಡ್ ಸೂಚಿಸಿದರೆ ಧಾರವಾಡ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಲು ಸಿದ್ಧ. ರಾಷ್ಟ್ರೀಯ ನಾಯಕರ ಅಭಿಮತದ ಮೇರೆಗೆ ಪಕ್ಷಕ್ಕೆ ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ತಿ ಜಗದೀಶ ಶೆಟ್ಟರ ತಿಳಿಸಿದರು.
ಬಿಜೆಪಿಗೆ ಮರು ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರನ್ನು ಬೆಂಬಲಿಗರು, ಹಿತೈಷಿಗಳು ಅದ್ದೂರಿ ಸ್ವಾಗತ ಹಾಗೂ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ನಿವಾಸಕ್ಕೆ ಕರೆದುಕೊಂಡು ಬಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೂ ಪಕ್ಷಕ್ಕೆ ವಾಪಸ್ಸು ಬರುವಂತೆ ಒತ್ತಾಯಗಳಿದ್ದವು. ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ನಂತರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ನಾಯಕರು ಮಾತುಕತೆ ಮಾಡಿ ಆಹ್ವಾನಿಸಿದ್ದರು. ಮೂರ್ನಾಲ್ಕು ದಶಕಳಿಂದ ಕಟ್ಟಿದ ನನ್ನ ಮನೆಗೆ ವಾಪಸ್ಸು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಸೂಚಿಸುವ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು.
ಕಳೆದ ವಿಧನಾಸಭೆ ಚುನಾವಣೆ ಸಂದರ್ಭದಲ್ಲಿ ನೋವಿನಿಂದ ಮಾತನಾಡಿದ್ದೆ. ಇದೀಗ ಕೆಲ ಬದಲಾವಣೆಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ರಾಷ್ಟ್ರೀಯ ನಾಯಕರು ಹಿಂದೆ ಆಗಿರುವುದನ್ನು ಮರೆತುಬಿಡಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಬಿಡುವಾಗ ಅವರ ವಿರುದ್ಧ ಒಂದೇ ಒಂದು ಮಾತನಾಡಿಲ್ಲ. ಅವರಿಗೆ ಧನ್ಯವಾದಗಳನ್ನು ಹೇಳಿದ್ದೇನೆ. ಜಿಲ್ಲೆಯಲ್ಲಿ ಯಾವುದೇ ಬಣಗಳಿಲ್ಲ. ಕೊನೆಗೆ ಬಿಜೆಪಿ ಪಕ್ಷ ಮಾತ್ರ. ವಾಪಸ್ಸು ಬಂದಿರುವುದಕ್ಕೆ ಸ್ಥಳೀಯ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ನಾಯಕರಲ್ಲೂ ಒಳ್ಳೆಯ ಭಾವನೆ ಮೂಡಿದೆ ಎಂದರು.