ಬೆಂಗಳೂರು: “ವರಿಷ್ಠರು ಸೂಚಿಸಿದರೆ ನಾನು ಕೋಲಾರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಸಿದ್ಧª’ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನನ್ನ ಪಕ್ಷ ಎಲ್ಲಿ ಹೋಗು ಅಂದರೂ ಹೋಗಿ ಸ್ಪರ್ಧೆ ಮಾಡುತ್ತೇನೆ. ಪಕ್ಷ ದೊಡ್ಡದು. ಪಕ್ಷದ ಸೂಚನೆ ಪಾಲಿಸುತ್ತೇನೆಂದು ಹೇಳಿದರು. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಇನ್ನಷ್ಟ ಜನ ಬರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಎಲ್ಲಾ ಕಡೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಬುರುಡೆ ಬಿಡುತ್ತಿದ್ದಾರೆ. ಅಷ್ಟೊಂದು ಸ್ಥಾನ ಬರುತ್ತದೆ ಎಂದಾದರೆ ಯಾಕೆ ಬೇರೆಯವರನ್ನು ಪಕ್ಷಕ್ಕೆ ಕರೆಯಬೇಕು? ಈಗ ಸರ್ಕಾರ ಮಾಡೋಕೆ ಎಲ್ಲರನ್ನೂ ಕರ್ಕೊಂಡು ಹೋಗ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಎಲ್ಲಾ ಭಾಗ್ಯ ಕೊಟ್ರಾ 80 ಸೀಟು ಗೆಲ್ಲಿಸಿಕೊಂಡು ಬರಲಿಲ್ಲ. ನಾವೇನಾದರೂ ಆಪರೇಷನ್ ಮಾಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಅರ್ಧ ಜನರೂ ಉಳಿಯುವುದಿಲ್ಲ ಎಂದು ತಿರುಗೇಟು ನೀಡಿದರು.
ನನ್ನ ವಿರುದ್ದ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಇಬ್ಬರೂ ಬಂದು ಸ್ಪರ್ಧೆ ಮಾಡಲಿ. ಒಬ್ಬರು ಯಾಕೆ? ಇಬ್ಬರು ಬಂದು ಸ್ಪರ್ಧೆ ಮಾಡಲಿ. ಹಿಂದೊಮ್ಮೆ ಬಂದು ಎಷ್ಟು ಅಂತರದಿಂದ ಸೋತಿದ್ದಾರೆ ಎಂಬುದು ಗೊತ್ತಿದೆಯಲ್ಲ ಎಂದು ವ್ಯಂಗ್ಯವಾಡಿದರು.
ಡಬಲ್ ಇಂಜಿನ್ ಸರ್ಕಾರದ ಮೂಲಕ ಸಾರ್ವಜನಿಕರಿಗೆ ಸೇವೆ ತಲುಪಿಸುವ ಕೆಲಸ ಆಗಲಿದೆ. ಜನರಿಗೆ ಇನ್ನೂ ಹತ್ತಿರವಾಗಲು ಏನೆಲ್ಲಾ ಕಾರ್ಯಕ್ರಮ ರೂಪಿಸಬೇಕೆಂದು ಪಟ್ಟಿ ಮಾಡಿದ್ದೇವೆ. ಇಷ್ಟು ಹಣವನ್ನು ಯಾವ ಸರ್ಕಾರವೂ ನೀಡಿರಲಿಲ್ಲ. ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ 775 ಎಂಎಲ್ ಡಿ ನೀರು ತರಲು ಕ್ರಮ ಕೈಗೊಂಡಿದ್ದೇವೆ. ಬೆಂಗಳೂರು ನಗರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಲವೆಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಇದರಿಂದ ಅಪರಾಧ ಪ್ರಮಾಣ ಕಡಿಮೆ ಆಗಲಿದೆ. 1,600 ಸೂಕ್ಷ¾ ಪ್ರದೇಶ ಗುರುತಿಸಿ ಸಿಸಿ ಕ್ಯಾಮೆರಾ ಹಾಕಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಪೋಸ್ಟರ್ ಮೇಲೆ ಕಾಂಗ್ರೆಸ್ ಪೋಸ್ಟರ್ ಅಂಟಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅಂತ ಅವರು ಕಿವಿಗೆ ಹೂ ಇಟ್ಟುಕೊಂಡಿದ್ದಾರೆ.ಕಮಲದ ಹೂವಿಗೆ ಮತ ಹಾಕಿ ಎಂದು ಪರೋಕ್ಷವಾಗಿ ಕೇಳುತ್ತಿದ್ದಾರೆ. ಕಮಲದ ಹೂ ಇಟ್ಟುಕೊಂಡರೆ ಹೈಕಮಾಂಡ್ ಪ್ರಶ್ನಿಸುತ್ತದೆ ಎಂದು ಚೆಂಡು ಹೂವು ಇಟ್ಟುಕೊಂಡಿದ್ದಾರೆ.ಡಿ.ಕೆ. ಶಿವಕುಮಾರ್ ನಾಲ್ಕು ನಾಲ್ಕು ಹೂವು ಇಟ್ಟುಕೊಂಡಿರುವುದರಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವರಾತ್ರಿ ಕಾರ್ಯಕ್ರಮದಲ್ಲಿ ಕೆರೆ ಕಳ್ಳ ಬ್ಯಾನರ್ ಬಿಡುಗಡೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಚುನಾವಣೆ ಬಂದಾಗ ಇವೆಲ್ಲಾ ಬರುತ್ತವೆ. ಇನ್ನೂ ಅನೇಕ ವಿಚಾರಗಳು ಪ್ರಸ್ತಾಪವಾಗಬಹುದು. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಉದ್ಯೋಗ ಬೇಕಲ್ಲ ಎಂದರು. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕುಕ್ಕರ್ ಹಂಚುವ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ಕೊಡುವವರ ತಪ್ಪೋ ? ತೆಗೆದುಕೊಳ್ಳುವವರ ತಪ್ಪೋ ? ಈ ಬಗ್ಗೆ ಚುನಾವಣಾ ಆಯೋಗ ಮಾತಾಡಬೇಕು. ಪಕ್ಷಾತೀತವಾಗಿ ಈ ಗಿಫ್ಟ್ ಹಂಚಿಕೆ ನಡೆಯುತ್ತದೆ ಎಂದರು.