Advertisement

ಲೋಪ ನೇರ್ಪುಗೊಳಿಸಲು ಆಯ್ಕೆ ಸಿದ್ಧ

07:31 AM Oct 23, 2019 | Team Udayavani |

ಸುಳ್ಯ: ಸಾಲ ಮನ್ನಾ ಹಣ ಬಿಡುಗಡೆಗೊಂಡು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಉಳಿತಾಯ ಖಾತೆ ಸಮರ್ಪಕವಾಗಿಲ್ಲದೆ ಹಣ ವಾಪಸಾಗಿರುವ ಫಲಾನುಭವಿಗಳ ಖಾತೆಗೆ ಅಗತ್ಯ ಮಾಹಿತಿ ಸೇರ್ಪಡೆಗೊಳಿಸಲು ಸಾಲಮನ್ನಾ ಸಂಬಂಧಿತ ಸುಧಾರಿತ ಆನ್‌ಲೈನ್‌ ಸಾಫ್ಟ್ವೇರ್‌ ಆಯ್ಕೆ ಮಂಗಳವಾರದಿಂದ ತೆರೆದುಕೊಳ್ಳಲಿದೆ. ಉಭಯ ಜಿಲ್ಲೆಯಲ್ಲಿ ಸಾಲಮನ್ನಾ ಹಣ ಬಿಡುಗಡೆಗೊಂಡರೂ ಉಳಿತಾಯ ಖಾತೆಗೆ ಬಾರದೆ 22,687 ಫಲಾನುಭವಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಈಗ ಖಾತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ಸಿಗಲಿದೆ.

Advertisement

ಒಂದು ವಾರ ನಿಗದಿ
ಆಯಾ ಸಹಕಾರ ಬ್ಯಾಂಕ್‌ ವ್ಯಾಪ್ತಿಯಲ್ಲಿನ ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಅ.22ರಿಂದ ಒಂದು ವಾರ ಖಾತೆಗೆ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ. ಆನ್‌ಲೈನ್‌ ಆಪ್ಶನ್‌ ತೆರೆದು ಸಾಲಮನ್ನಾ ಹಣ ಜಮೆ ಆಗಬೇಕಿರುವ ಉಳಿತಾಯ ಖಾತೆಗೆ ಸಮರ್ಪಕ ಮಾಹಿತಿ ಸೇರಿಸಲಾಗುತ್ತದೆ. ಫಲಾನುಭವಿಗಳಿಂದ ದಾಖಲೆಗಳನ್ನು ಆಯಾ ಸಹಕಾರ ಸಂಘಗಳು ಈಗಾಗಲೇ ಕ್ರೋಡೀಕರಿಸಿವೆ. ಹೀಗಾಗಿ ಆಯಾ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‌ ಅಧಿಕಾರಿಗಳೇ ದಾಖಲಾತಿ ನಡೆಸಲಿದ್ದು, ಫಲಾನುಭವಿಗಳು ಬ್ಯಾಂಕ್‌ಗೆ ಬರಬೇಕಿಲ್ಲ ಎನ್ನುತ್ತಾರೆ ಅಧಿಕಾರಿಗಳು.

52,472 ಮಂದಿಗೆ ಮನ್ನಾ ಹಣ ಪಾವತಿ
ಉಭಯ ಜಿಲ್ಲೆಗಳಲ್ಲಿ 97,750 ಮಂದಿ ಫಲಾನುಭವಿಗಳ 705.10 ಕೋ.ರೂ. ಮನ್ನಾ ಹಣ ಪಾವತಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಇದರಲ್ಲಿ 80,768 ಮಂದಿಯ 597.1 ಕೋ.ರೂ. ಪಾವತಿಗೆ ಮಂಜೂರಾತಿ ಸಿಕ್ಕಿತ್ತು. 75,159 ಮಂದಿಯ 541.83 ಕೋ.ರೂ. ಬಿಡುಗಡೆಗೊಂಡಿತ್ತು. ಮಂಜೂರಾತಿ (ಗ್ರೀನ್‌ ಲಿಸ್ಟ್‌) ಪೈಕಿ 52,472 ಫಲಾನುಭವಿಗಳ ಮನ್ನಾ ಹಣ ಜಮೆ ಆಗಿದೆ ಎನ್ನುತ್ತದೆ ಡಿಸಿಸಿ ಬ್ಯಾಂಕ್‌ ಅಂಕಿಅಂಶ.

3 ಹಂತಗಳಲ್ಲಿ 39,278 ಅರ್ಜಿ ತಿರಸ್ಕಾರ
ಆಯಾ ಸಹಕಾರ ಸಂಘದಿಂದ ಸಾಲಮನ್ನಾಕ್ಕೆ ಅರ್ಹರನ್ನು ಪಟ್ಟಿ ಮಾಡಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಮಂಜೂರಾತಿ ದೊರೆತು, ಅನಂತರ ಹಣ ಬಿಡುಗಡೆ ಆಗುವುದು ಪ್ರಕ್ರಿಯೆ. ಉಭಯ ಜಿಲ್ಲೆಗಳ 97,750 ಫಲಾನುಭವಿಗಳ ಬೇಡಿಕೆ ಪೈಕಿ ಮಂಜೂರಾತಿ ಹಂತದಲ್ಲಿ 10,982 ಮಂದಿಯನ್ನು ಕೈ ಬಿಡಲಾಯಿತು.

ಮಂಜೂರಾತಿ ಸಿಕ್ಕಿ ಹಣ ಬಿಡುಗಡೆ ಹಂತ
ದಲ್ಲಿ 5,609 ಮಂದಿ ಹೊರಗುಳಿದರು. ಫಲಾನುಭವಿ ಖಾತೆಗೆ ಜಮೆ ಆಗುವ ಹಂತದಲ್ಲಿ 22,687 ಮಂದಿಯ ಹಣ ಹಿಂದೆ ಹೋಯಿತು. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ಒಟ್ಟು 39,278 ಮಂದಿ ಫಲಾನುಭವಿಗಳಿಗೆ ವಿವಿಧ ಕಾರಣಕ್ಕೆ ವಿವಿಧ ಹಂತದಲ್ಲಿ ಸಾಲ ಮನ್ನಾ ಸೌಲಭ್ಯ ಸಿಗಲಿಲ್ಲ.

Advertisement

ಮಂಜೂರಾದವರಿಗೆ ಮನ್ನಾ ಸೌಲಭ್ಯ ಸಿಗಲಿದೆ
ಈಗಾಗಲೇ ಹಣ ಬಿಡುಗಡೆಗೊಂಡು ತಾಂತ್ರಿಕ ಕಾರಣದಿಂದ ವಾಪಸಾತಿ ಆಗಿರುವ 22,687 ಮಂದಿಯ ಹಣ ಉಳಿತಾಯ ಖಾತೆ ದಾಖಲೆ ಸಮರ್ಪಕ ನಮೂದು ಆದ ಕೆಲವೇ ದಿನಗಳಲ್ಲಿ ಮರು ಪಾವತಿ ಆಗಲಿದೆ. ಮಂಜೂರಾತಿ ಸಿಕ್ಕಿ ಹಣ ಬಿಡುಗಡೆ ಹಂತದಲ್ಲಿ ತಿರಸ್ಕೃತಗೊಂಡ 5,609 ಮಂದಿಯ ಉಳಿತಾಯ ಖಾತೆ ಸಹಿತ ಇನ್ನಿತರ ದಾಖಲೆ ಸರಿಪಡಿಸಿದ ಬಳಿಕ ಹಂತ ಹಂತವಾಗಿ ದೊರೆಯಬಹುದು. ಆದರೆ ಬೇಡಿಕೆ ಸಲ್ಲಿಕೆಯಾಗಿ ಮಂಜೂರಾತಿ ಹಂತದಲ್ಲಿ ತಿರಸ್ಕೃತವಾದವರಿಗೆ ಸೌಲಭ್ಯ ಸಿಗುವುದು ಅನುಮಾನ. ಸಾಲ ಮನ್ನಾ ಘೋಷಣೆ ಅನಂತರ ಫಲಾನುಭವಿಗಳು ಪಡಿತರ ಚೀಟಿ ತಿದ್ದುಪಡಿ ಮಾಡಿರುವುದು ಕೂಡ ಸೌಲಭ್ಯ ದೊರೆಯಲು ಅಡ್ಡಿಯಾಗಿದೆ.

161.75 ಕೋ.ರೂ. ಹಣ ವಾಪಸ್‌!
ಅಪೂರ್ಣ ಉಳಿತಾಯ ಖಾತೆ ಕಾರಣದಿಂದ ದ. ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 22,687 ಫಲಾನುಭವಿಗಳ 161.75 ಕೋ.ರೂ. ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್‌ ಬ್ಯಾಂಕ್‌ಗೆ ವಾಪಸಾ ಗಿದೆ. ದ.ಕ. ಜಿಲ್ಲೆಯಲ್ಲಿ 17,744 ಮಂದಿಯ 128.22 ಕೋ.ರೂ., ಉಡುಪಿ ಜಿಲ್ಲೆಯ 4,934 ಮಂದಿಯ 33.53 ಕೋ.ರೂ. ಹಣ ವಾಪಸಾಗಿದೆ.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಉಳಿ ತಾಯ ಖಾತೆ ಸಮರ್ಪಕ ವಾಗಿಲ್ಲದೆ ಹಣ ವಾಪಸ್‌ ಆಗಿರುವ ಫಲಾನುಭವಿಗಳ ಖಾತೆಗೆ ಅಗತ್ಯ ಇರುವ ಮಾಹಿತಿಯನ್ನು ಸೇರಿಸಲು ಸುಧಾರಿತ ಆನ್‌ಲೈನ್‌ ಸಾಫ್ಟ್ವೇರ್‌ ಆಪ್ಶನ್‌ ಮಂಗಳವಾರದಿಂದ ಕಾರ್ಯಾರಂಭಿಸಲಿದೆ. ಆಯಾ ಸಹಕಾರ ಸಂಸ್ಥೆ ವ್ಯಾಪ್ತಿಯ ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಅಪ್‌ಡೇಟ್‌ ಕಾರ್ಯ ನಡೆಯಲಿದೆ.
– ಸಂತೋಷ್‌ ಕುಮಾರ್‌ ಮರಕ್ಕಡ, ಮಾರಾಟಾಧಿಕಾರಿ, ಡಿಸಿಸಿ ಬ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next