– ಸಾಮಾನ್ಯವಾಗಿ ಯಾವುದೇ ಸಿನಿಮಾ ಇರಲಿ. “ಚೇಸ್’ ಆನ್ನೋ ಸೀನ್ ಕಾಮನ್ ಆಗಿ ಇದ್ದೇ ಇರುತ್ತೆ. ಈಗ ಇಲ್ಲೇಕೆ “ಚೇಸ್’ ವಿಷಯ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಕಾರಣ, “ಚೇಸ್’ ಎಂಬ ಹೆಸರಿನ ಸಿನಿಮಾ ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದೆ. ಇದೊಂದು ಪಕ್ಕಾ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಹೊಸ ಬಗೆಯ ಕಥೆ ಹೊಂದಿರುವ ಈ ಚಿತ್ರಕ್ಕೆ ವಿಲೋಕ್ ಶೆಟ್ಟಿ ನಿರ್ದೇಶಕರು. ಅವರಿಗೆ ಇದು ಮೊದಲ ಅನುಭವ. ಕಥೆ, ಚಿತ್ರಕಥೆ ಜೊತೆ ಸಂಭಾಷಣೆಯ ಜವಾಬ್ದಾರಿಯನ್ನೂ ವಿಲೋಕ್ ಶೆಟ್ಟಿ ಹೊತ್ತಿದ್ದಾರೆ. ಹೊಸ ವರ್ಷಕ್ಕೆ ದರ್ಶನವಾಗಲಿರುವ “ಚೇಸ್’ ಕಮರ್ಷಿಯಲ್ ಅಂಶಗಳೊಂದಿಗೆ ಮೂಡಿಬರುತ್ತಿರುವ ಸಿನಿಮಾ ಆಗಿದ್ದು, ಲವ್, ಎಮೋಷನ್ಸ್, ಥ್ರಿಲ್ ಹಾಗು ಫ್ಯಾಮಿಲಿ ಅಂಶಗಳು ತುಂಬಿವೆ. ಸಿಂಫ್ಲಿಫನ್ ಮೀಡಿಯ ನೆಟ್‌ವರ್ಕ್ ಪ್ರೈ. ಲಿಮಿಟೆಡ್ ಸಂಸ್ಥೆ ಮೂಲಕ ತಯಾರಾಗಿರುವ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಹಾಗು ಪ್ರಶಾಂತ್ ಶೆಟ್ಟಿ ನಿರ್ಮಾಪಕರು.
Advertisement
ಇಲ್ಲಿ ಕಥೆಯೇ ನಾಯಕ, ನಾಯಕಿ ಎಂದು ನಂಬಿರುವ ಚಿತ್ರತಂಡ, ಹೊಸ ಆಶಯಗಳೊಂದಿಗೆ ಒಂದಷ್ಟು ವಿಷಯಗಳನ್ನು ಹೇಳುವ ಮೂಲಕ ಪ್ರೇಕ್ಷಕರಿಗೊಂದು ಹೊಸ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡಿದೆ. ಇನ್ನು, ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು ವಿಶೇಷ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಒಂದು ತನಿಖೆ ವಿಷಯ ಇಟ್ಟುಕೊಂಡು ಮಾಡಿರುವ ಕಥೆಯಲ್ಲಿ ಅವಿನಾಶ್ ನರಸಿಂಹರಾಜು ಅವರಿಗೆ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಅವಿನಾಶ್ ನರಸಿಂಹರಾಜು ಅವರು, ಚಿತ್ರದಲ್ಲಿ ನಟನೆಯ ಜೊತೆಯಲ್ಲಿ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ತೆರೆಯ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಕೊಡಲಾಗಿದೆ.