Advertisement

ಸುಭಿಕ್ಷ-ಸಮೃದ್ಧ ರಾಜ್ಯ ನಿರ್ಮಾಣಕ್ಕೆ ಕಟಿಬದ್ಧ

11:45 PM Aug 15, 2019 | Team Udayavani |

ಬೆಂಗಳೂರು: ಅಭಿವೃದ್ಧಿಯಲ್ಲಿ ಸ್ಥಿರತೆ ಕಾಯ್ದುಕೊಂಡು ಸುಭಿಕ್ಷ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಕಟಿಬದ್ಧವಾಗಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸರ್ಕಾರದ ಧ್ಯೇಯ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

73ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಬಹುಜನ ಹಿತಾಯ, ಬಹುಜನ ಸುಖಾಯ’ ಎಂಬಂತೆ ಜನರ ಹಿತಕ್ಕಾಗಿ, ಸಮೃದ್ಧಿ, ಶಾಂತಿಗಾಗಿ ನಮ್ಮ ಸರ್ಕಾರ ಶ್ರಮಿಸಲಿದೆ. ಅಧಿಕಾರ ಸ್ವೀಕಾರದ ಬಳಿಕ ಮೊದಲ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸರ್ಕಾರ ಕೈಗೊಂಡ ನಿರ್ಣಯಗಳೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಕರ್ನಾಟಕ ರಾಜ್ಯ 2 ಸಾವಿರ ವರ್ಷಗಳಿಗೂ ಹೆಚ್ಚಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ಹಿನ್ನೆಲೆಯುಳ್ಳ ಶ್ರೀಮಂತ ಇತಿಹಾಸದ ವಿಶಿಷ್ಠ ಸಂಸ್ಕೃತಿಯ ತವರೂರು. ಅಪಾರ ನೈಸರ್ಗಿಕ-ಅಸಾಧಾರಣ ಮಾನವ ಸಂಪನ್ಮೂಲದಿಂದ ತುಂಬಿರುವ ಕರ್ನಾಟಕ ಭಾರತದ ಅಭಿವೃದ್ಧಿ ನಕ್ಷೆಯಲ್ಲಿ ಮೇರುಸ್ಥಾನದಲ್ಲಿದೆ ಎಂದರು. ಹೆಚ್ಚು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ, ತೋಟಗಾರಿಕೆ ಉತ್ಪನ್ನಗಳ ರಫ್ತಿನಲ್ಲಿ ಇನ್ನಷ್ಟು ಸುಧಾರಣೆ, ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ಕನಸು ಸಾಕಾರ, ಆನ್‌ಲೈನ್‌ ಮಾರಾಟ ವೇದಿಕೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.

ಮೂಲ ಸೌಕರ್ಯ ಅಭಿವೃದ್ಧಿ: ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರು, ತ್ಯಾಜ್ಯ ವಿಲೇವಾರಿ, ಇತರೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. ನಗರ ಪ್ರದೇಶಗಳ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸುವುದು ಅತಿ ಅಗತ್ಯ. ಈ ನಿಟ್ಟಿನಲ್ಲಿ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಪ್ರಮುಖ ನಗರಗಳ ಮೂಲಸೌಕರ್ಯ ಅಭಿವೃದ್ಧಿ, ನಿರ್ವಹಣೆಗೆ ವ್ಯವಸ್ಥಿತ ರೂಪ ನೀಡಲಿದೆ ಎಂದು ಹೇಳಿದರು.

ನೇಕಾರರು, ಮೀನುಗಾರರ ಸಾಲ ಮನ್ನಾ: ನೇಕಾರರು ಸಹಕಾರ ಬ್ಯಾಂಕು, ಸಹಕಾರ ಸಂಘಗಳಿಂದ ಪಡೆದ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಇದಕ್ಕೆ 98.29 ಕೋಟಿ ರೂ. ವೆಚ್ಚವಾಗಲಿದ್ದು, 29,621 ನೇಕಾರರಿಗೆ ಅನುಕೂಲವಾಗಲಿದೆ. ಅದೇ ರೀತಿ ಮೀನುಗಾರರು ವಾಣಿಜ್ಯ ಬ್ಯಾಂಕು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಶೇ.2ರ ಬಡ್ಡಿ ದರದಲ್ಲಿ ಪಡೆದಿರುವ 50 ಸಾವಿರ ರೂ.ವರೆಗಿನ ಸಾಲ ಮನ್ನಾಗೆ ಆದೇಶ ಹೊರಡಿಸಲಾಗಿದೆ. ಇದಕ್ಕೆ 60.58 ಕೋಟಿ ರೂ. ವೆಚ್ಚವಾಗಲಿದ್ದು, 23,507 ಮೀನುಗಾರರು, ಅದರಲ್ಲೂ ಬಹುಪಾಲು ಮೀನುಗಾರ ಮಹಿಳೆಯರು ಸಾಲದಿಂದ ಮುಕ್ತಿ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ಕನ್ನಡಿಗರ ಸ್ವಾಭಿಮಾನ, ಉದ್ಯೋಗಕ್ಕೆ ಧಕ್ಕೆ ತರಲ್ಲ: ಇತ್ತೀಚೆಗೆ ರಾಜ್ಯದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ ಎಂಬ ಕೂಗೂ ಎದ್ದಿದೆ. ಕನ್ನಡಿಗರ ಸ್ವಾಭಿಮಾನ, ಗೌರವ ಮತ್ತು ಉದ್ಯೋಗಾವಕಾಶಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಲು ಬದ್ಧ. ಜತೆಗೆ ಒಕ್ಕೂಟ ತತ್ವದಡಿ ಇತರರಿಗೂ ಅವಕಾಶ ಕಲ್ಪಿಸಲೂ ಸಿದ್ಧರಿದ್ದೇವೆ. ಪ್ರತಿಯೊಬ್ಬ ಕನ್ನಡಿಗ, ನೆಮ್ಮದಿ, ಸ್ವಾಭಿಮಾನದಿಂದ ಬದುಕುವಂತಾಗಬೇಕು ಎನ್ನುವುದು ನನ್ನ ಆಶಯ ಎಂದು ಸಿಎಂ ಹೇಳಿದರು.

ನೂತನ ಕೈಗಾರಿಕಾ ನೀತಿ ಜಾರಿ: ಪ್ರಸ್ತುತ ಚಾಲ್ತಿಯಲ್ಲಿರುವ 2014-19ರ ಕೈಗಾರಿಕಾ ನೀತಿ ಅವಧಿ 2019ರ ಸೆಪ್ಟೆಂಬರ್‌ಗೆ ಅಂತ್ಯಗೊಳ್ಳಲಿದೆ. ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿ ಗುರಿಯಾಗಿಸಿಕೊಂಡು, ವಿಶೇಷವಾಗಿ ಹಿಂದುಳಿದ ಪ್ರದೇಶ, 2ನೇ, 3ನೇ ಹಂತದ ಕೇಂದ್ರಗಳಿಗೆ ಬಂಡವಾಳ ಆಕರ್ಷಿಸುವ ಮತ್ತು ವಿನೂತನ ತಂತ್ರಜ್ಞಾನ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶವಿರುವ ವಲಯಕ್ಕೆ ಆದ್ಯತೆ ನೀಡಿ, ನೂತನ ಕೈಗಾರಿಕಾ ನೀತಿ ರೂಪಿಸಲಾಗುವುದು. ಹಾಲಿ 9 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ “ಉತ್ಪನ್ನ ಆಧಾರಿತ ಕೈಗಾರಿಕಾ ಕ್ಲಸ್ಟರ್‌ ಅಭಿವೃದ್ಧಿ ಯೋಜನೆ’ಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. 2019-24ರ ನೂತನ ಜವಳಿ-ಸಿದ್ಧ ಉಡುಪು ನೀತಿಯನ್ನು ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಭಾಷಣದ ಅಂಶಗಳು
-ಆರ್ಥಿಕ ಅಭಿವೃದ್ಧಿಗೆ ಪೂರಕ ಕೈಗಾರಿಕೆ, ಕೃಷಿ, ಅನಿರ್ಬಂಧಿತ ವಿದ್ಯುತ್‌ ಒದಗಿಸಲು ಶ್ರಮಿಸಲಾಗುವುದು.

-ಗುಣಮಟ್ಟ ವೃದ್ಧಿ, ಉದ್ಯೋಗ ಗಳಿಸಲು ಪೂರಕ ಶಿಕ್ಷಣ ವ್ಯವಸ್ಥೆ ರೂಪಿಸಲು ಸರ್ಕಾರ ಬದ್ಧ.

-ಪರಿಶಿಷ್ಟರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು ಗೌರವದ ಬದುಕು ನಡೆಸಲು ಕಾರ್ಯಕ್ರಮ ರೂಪಿಸಲಾಗುವುದು.

-ಉತ್ತಮ ಶಿಕ್ಷಣ, ಆರೋಗ್ಯ, ಮಹಿಳೆಯರು, ವಿಕಲಚೇತನರು, ದುರ್ಬಲರ ಸಬಲೀಕರಣ, ಸುರಕ್ಷತೆ, ಸುಭಿಕ್ಷೆ ಸರ್ಕಾರದ ಆದ್ಯತೆ.

Advertisement

Udayavani is now on Telegram. Click here to join our channel and stay updated with the latest news.

Next