ಬೆಳಗಾವಿ: ಸಮರ್ಥವಾಗಿದ್ದವರಿಗೆ ಪಕ್ಷ ಗುರುತಿಸಿ ಜವಾಬ್ದಾರಿ ನೀಡುತ್ತದೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿಲ್ಲ. ಯಾರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಯಾರೇ ಕೆಪಿಸಿಸಿ ಅಧ್ಯಕ್ಷರಾದರೂ ಅವರಿಗೆ ಸಹಕಾರ ನೀಡಲಾಗುವುದು. ಹೈಕಮಾಂಡ್ ಮೇಲೆ ಎಲ್ಲ ಜವಾಬ್ದಾರಿ ಇದೆ. ಪಕ್ಷ ಸಂಘಟನೆಗೆ ಎಲ್ಲರೂ ಒಟ್ಟಾಗಿ ಹೋಗಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಉಪಚುನಾವಣೆ ಸೋಲಿನಿಂದ ಆತಂಕ ಪಡುವ ಅಗತ್ಯ ಇಲ್ಲ. ನಮ್ಮಲ್ಲಿ ಬಹಳಷ್ಟು ಜನ ಅಧ್ಯಕ್ಷರಾಗಲು ಸಮರ್ಥರಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ ಯಾರ ಹೆಸರೂ ಚರ್ಚೆ ಆಗಿಲ್ಲ. ಎಐಸಿಸಿ ವೀಕ್ಷಕರು ಬಂದು ಸಮೀಕ್ಷೆ ಮಾಡಿ ಅಭಿಪ್ರಾಯ ಸಂಗ್ರಹಿಸಿಕೊಂಡು ಹೋಗಿದ್ದಾರೆ ಎಂದರು.
ನಾಲ್ಕು ಕಾರ್ಯಾಧ್ಯಕ್ಷರ ನೇಮಕ ಕುರಿತು ಹೈಕಮಾಂಡ್ ದೆಹಲಿಯಲ್ಲಿ ಚರ್ಚೆಗೆ ಕರೆಯಲಿದೆ. ಪ್ರಾದೇಶಿಕವಾರು, ಜಾತಿವಾರು ಚರ್ಚೆ ನಡೆಯಲಿದೆ. ನಾನು ದೆಹಲಿಯಲ್ಲಿ ಕೆಲ ಮುಖಂಡರನ್ನು ಭೇಟಿ ಮಾಡಿದ್ದೇನೆ. ನಾಲ್ಕೈದು ಜನ ಪ್ರಮುಖರು ಸಭೆಗೆ ಬಂದಿಲ್ಲ. ರಾಜೀನಾಮೆ ಇತ್ಯರ್ಥವಾದ ಬಳಿಕ ಮತ್ತಷ್ಟು ಪ್ರಬಲವಾಗಿ ಪ್ರತಿಪಕ್ಷ ಕೆಲಸ ಮಾಡಲಿದೆ. ಪಕ್ಷ ಅಧಿ ಕಾರದಲ್ಲಿಲ್ಲ. ಎಲ್ಲರನ್ನೂ ಒಗ್ಗಟಾಗಿ ಒಯ್ಯಬೇಕು. ಸಂಘಟನೆ ಮಾಡಿ ಮುಂಬರುವ ಜಿಪಂ, ಗ್ರಾಪಂ ಚುನಾವಣೆಯಲ್ಲಿ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ಇರಬೇಕು. ಇಂಥವರನ್ನು ಹೈಕಮಾಂಡ್ ಹುಡುಕುತ್ತಿದೆ ಎಂದರು.
ನಾನು ಜೀವಂತ ಇರುವವರೆಗೆ ಯಮಕನಮರಡಿಯಲ್ಲಿ ನಾನೇ ಶಾಸಕ. ಸೋಲು ಮತ್ತು ಗೆಲುವಿನ ಭಯ ಯಾವುದೂ ಇಲ್ಲ. ಮುಂದಿನ ಬಾರಿ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇನೆ ಎನ್ನುವ ರಮೇಶ ಆಸೆ ಈಡೇರಲ್ಲ. ನಾನು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅನುಯಾಯಿ. ನಾನು ಯಾರಿಗೂ ಹೆದರುವ ವ್ಯಕ್ತಿ ಅಲ್ಲವೇ ಅಲ್ಲ.
– ಸತೀಶ ಜಾರಕಿಹೊಳಿ, ಶಾಸಕ