Advertisement

ಕನ್ನಡದಲ್ಲಿ ನಟಿಸಲು ರೆಡಿ

06:01 AM Jan 21, 2019 | |

ಆ ಹುಡುಗಿ ಒಂದು ಬಾರಿ ಎಡ ಮತ್ತು ಬಲ ಭಾಗದ ಹುಬ್ಬೇರಿಸಿದ್ದಷ್ಟೇ ಅಲ್ಲ, ಎಡಗಣ್ಣು ಮಿಟುಕಿಸಿ, ಹಾಗೊಂದು ಪ್ಲೇನ್‌ ಕಿಸ್‌ ಕೊಟ್ಟಿದ್ದೇ ತಡ, ದೇಶಾದ್ಯಂತ ಇಡೀ ಪಡ್ಡೆ ಹುಡುಗರು ಆ ಹುಡುಗಿಗೆ ಫಿದಾ ಆಗಿದ್ದಂತೂ ಸುಳ್ಳಲ್ಲ. ರಾತ್ರೋ ರಾತ್ರಿ ಆ ಹುಡುಗಿ ಸ್ಟಾರ್‌ ಆಗಿದ್ದೂ ಅಷ್ಟೇ ನಿಜ. ಹುಬ್ಬೇರಿಸಿ, ಕಿಕ್ಕೇರಿಸಿದ ಆ ಹುಡುಗಿಯ ಫೋಟೋ ಇಟ್ಟುಕೊಂಡ ಹುಡುಗರಿಗೆ ಲೆಕ್ಕವಿಲ್ಲ.

Advertisement

ಆ ಹುಡುಗಿಯ ಫೇಸ್‌ಬುಕ್‌, ಟ್ವಿಟ್ಟರ್‌ ಮತ್ತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸಾಲುಗಟ್ಟಿದ ಮಂದಿಯ ಲೆಕ್ಕ ಲಕ್ಷ ಲಕ್ಷ..! ಹೌದು, ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಆ ಮಲಯಾಳಿ ಬೆಡಗಿ ಪ್ರಿಯಾ ವಾರಿಯರ್‌. ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಬಿಡುಗಡೆಗೆ ರೆಡಿಯಾಗಿರುವ ಮಲಯಾಳಂ ಭಾಷೆಯ “ಒರು ಆಡಾರ್‌ ಲವ್‌’ ಚಿತ್ರದ ನಾಯಕಿಯೇ ಪ್ರಿಯಾ ವಾರಿಯರ್‌.

ಇಷ್ಟಕ್ಕೂ ಆ ಮಲಯಾಳಿ ಬೆಡಗಿ ಬಗ್ಗೆ ಯಾಕೆ ಇಷ್ಟೊಂದು ಪೀಠಿಕೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ, ಮಲಯಾಳಂನ “ಒರು ಆಡಾರ್‌ ಲವ್‌’ ಚಿತ್ರ ಕನ್ನಡದಲ್ಲೂ ಡಬ್‌ ಆಗಿ “ಕಿರಿಕ್‌ ಲವ್‌ ಸ್ಟೋರಿ’ ಹೆಸರಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ನಾಯಕಿ ಪ್ರಿಯಾ ವಾರಿಯರ್‌ “ಉದಯವಾಣಿ’ಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆ ಮಾತುಕತೆಯ ಇಲ್ಲಿದೆ.

* ಹುಬ್ಬೇರಿಸಿ, ಕಣ್‌ ಹೊಡೆದು ರಾತ್ರೋ ರಾತ್ರಿ ಸ್ಟಾರ್‌ ಆಗಿಬಿಟ್ರಾಲ್ಲಾ ..?
ನಾನು ಸ್ಟಾರ್‌ ಅನ್ನೋದನ್ನೆಲ್ಲಾ ನಂಬುವುದಿಲ್ಲ. ಹಾಗೆಲ್ಲಾ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಆದರೆ, ಅದೊಂದು ಸೀನ್‌ ಸಿಕ್ಕಾಪಟ್ಟೆ ವೈರಲ್‌ ಆಗೋಯ್ತು. ಯುಟ್ಯೂಬ್‌, ಫೇಸ್‌ಬುಕ್‌, ಟ್ವಿಟ್ಟರ್‌, ಇನ್ಸ್‌ಸ್ಟಾಗ್ರಾಮ್‌ ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಯ್ತು. ಜನರು ನನ್ನನ್ನು ಆ ರೀತಿ ಗುರುತಿಸಿದ್ದಕ್ಕೆ ಖುಷಿ ಇದೆ. ನನ್ನ ಮೊದಲ ಚಿತ್ರವದು. ನಾನೇನು ಸ್ಟಾರ್‌ ಅಲ್ಲ. ಆದರೆ, ಲಕ್ಕೆ ಅನ್ನೋದಂತೂ ನಿಜ.

* ಚಿತ್ರದಲ್ಲಿ ನಿಮ್ಮ  ಪಾತ್ರ ಹೇಗಿದೆ?
ನಾನು 12 ನೇ ತರಗತಿ ಓದುವ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ. ಅದೊಂದು ರೀತಿ ಸದಾ ಜಾಲಿಯಾಗಿ, ಖುಷಿಯಾಗಿರುವ ಪಾತ್ರ. ಆಗಾಗ ಎಮೋಷನಲ್‌ ಆಗಿಯೂ ಇರುವಂತಹ ಪಾತ್ರ. ಇಡೀ ಚಿತ್ರದುದ್ದಕ್ಕೂ ಫ‌ನ್ನಿ ಎನಿಸುವ ಪಾತ್ರವದು.

Advertisement

* ಪ್ರೇಮಿಗಳ ದಿನದಂದು ಚಿತ್ರ ಬರುತ್ತಿದೆ, ಹೇಗನಿಸುತ್ತೆ?
ಸಹಜವಾಗಿಯೇ ನನಗೆ ಭಯ ಮತ್ತು ಖುಷಿ ಇದೆ. ಭಯ ಯಾಕೆಂದರೆ, ಜನ ಹೇಗೆ ಸ್ವೀಕರಿಸುತ್ತಾರೋ ಅಂತ. ಖುಷಿ ಯಾಕೆಂದರೆ, ಅಷ್ಟೊಂದು ಕ್ರೇಜ್‌ ಹುಟ್ಟಿಸಿರುವುದರಿಂದ ಜನರು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆಂಬ ಖುಷಿ ಇದೆ.

* ಎಲ್ಲಾ ಸರಿ, ನೀವಿನ್ನೂ ಓದುತ್ತಿದ್ದೀರಂತೆ?
ಹೌದು, ನಾನು ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದೇನೆ. ಓದು ಸಮಯದಲ್ಲೇ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಹೆಮ್ಮೆ ಇದೆ.

* ಮೊದಲ ಚಿತ್ರದ ಅನುಭವ ಹೇಗಿತ್ತು?
ಮೊದಲ ಚಿತ್ರವಾದ್ದರಿಂದ ಆರಂಭದಲ್ಲಿ ಕಷ್ಟ ಎನಿಸಿತು. ಆ ನಂತರ ಎಲ್ಲವೂ ಖುಷಿ ಕೊಟ್ಟಿತು. ಒಂದು ವರ್ಷದಿಂದಲೂ ಆ ಚಿತ್ರಕ್ಕೆ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ನಾನು ಸಾಕಷ್ಟು ಕಲಿತುಕೊಂಡೆ. ಸಿನಿಮಾ ಹೇಗೆ, ಏನು, ಎತ್ತ ಎಂಬುದನ್ನು ಅರಿತೆ. ಒಳ್ಳೆಯ ಜನರ ಒಡನಾಟ ಬೆಳೆಯಿತು. ಒಂದಷ್ಟು ಮಂದಿ ಫ್ರೆಂಡ್ಸ್‌ ಸಿಕ್ಕರು. ಅದೊಂದು ಮರೆಯದ ಅನುಭವ.

* ನಿಮ್ಮನ್ನು ಹುಡುಕಿ ಬಂದ ಅವಕಾಶಗಳೆಷ್ಟು?
ಸಾಕಷ್ಟು ಅವಕಾಶ ಬಂದವು. ಆದರೆ, ನಾನು ಮಾತ್ರ ಯಾವುದನ್ನೂ ಒಪ್ಪಿಕೊಳ್ಳಲಿಲ್ಲ. ಕಾರಣ, ಮೊದಲು ನನ್ನ ಈ ಚಿತ್ರ ಬಿಡುಗಡೆಯಾಗಬೇಕು. ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು. ಎಲ್ಲರ ಅಭಿಪ್ರಾಯ ಕೇಳಿದ ಬಳಿಕ ಮುಂದಿನ ಅವಕಾಶಗಳ ಬಗ್ಗೆ ಯೋಚನೆ.

* ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದೀರಂತಲ್ಲ?
ಹೌದು, ಅದರ ಹೆಸರು “ಶ್ರೀದೇವಿ ಬಂಗ್ಲೋ’. ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿದೆ. ಇನ್ನೂ ಒಂದಷ್ಟು ಚಿತ್ರೀಕರಣ ಬಾಕಿ ಇದೆ. ಈಗಾಗಲೇ ಟೀಸರ್‌ ಕೂಡ ಬಂದಿದ್ದು, ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಆ ಚಿತ್ರವನ್ನು ಮಲಯಾಳಂ ನಿರ್ದೇಶಕ ಪ್ರಶಾಂತ್‌ ನಿರ್ದೇಶಿಸಿದ್ದಾರೆ. ಅದು ಬಿಟ್ಟರೆ ಬೇರೆ ಮಾತುಕತೆ ನಡೆಯುತ್ತಿದೆಯಷ್ಟೆ. 

* ಮಲಯಾಳಂ ಸಿನಿಮಾ ಹುಡುಕಿ ಬರಲಿಲ್ಲವೇ?
ಬಂದಿದ್ದೇನೋ ನಿಜ. ಆದರೆ, ಮೊದಲ ಚಿತ್ರ ಹೊರಬಂದ ಮೇಲೆ ನಾನು ಯಾವ ಚಿತ್ರ ಮಾಡಬೇಕು ಅಂತ ನಿರ್ಧರಿಸುತ್ತೇನೆ.

* ಕನ್ನಡದಿಂದ ಅವಕಾಶ ಬರಲಿಲ್ಲವೇ?
ಖಂಡಿತ ಬಂದಿದೆ. ಹಾಗಂತ ಯಾವುದನ್ನೂ ನಾನು ಒಪ್ಪಿಲ್ಲ. ಕಾರಣ, ಕಥೆ, ಪಾತ್ರ ಇಷ್ಟವಾಗಬೇಕು. ಒಳ್ಳೆಯ ಕಂಟೆಂಟ್‌ ಇರುವ ಪಾತ್ರಕ್ಕೆ ಸ್ಕೋಪ್‌ ಇರುವಂತಹ ಸಿನಿಮಾ ಸಿಕ್ಕರೆ ಖಂಡಿತ ಮಾಡ್ತೀನಿ.

* ಕನ್ನಡ ಚಿತ್ರರಂಗ ಮತ್ತು ಇಲ್ಲಿನ ಸಿನಿಮಾಗಳ ಬಗ್ಗೆ ಎಷ್ಟು ಗೊತ್ತು?
ಇಲ್ಲಿನ ಚಿತ್ರರಂಗ ಬಗ್ಗೆ ಕೇಳಿದ್ದೇನೆ. ಇತ್ತೀಚೆಗೆ “ಕೆಜಿಎಫ್’ ಚಿತ್ರದ ಬಗ್ಗೆ ಮಾತಾಡಿದ್ದು ಗೊತ್ತು. ಮಲಯಾಳಂ ಭಾಷೆಯಲ್ಲೂ ಬಂದಿದೆ. ನಾನಿನ್ನೂ ನೋಡಿಲ್ಲ.

* ಯಾವ ರೀತಿ ಪಾತ್ರ ಬಯಸುತ್ತೀರಿ?
ಮೊದಲು ಕಥೆ ಚೆನ್ನಾಗಿರಬೇಕು. ಪಾತ್ರದಲ್ಲಿ ವಿಭಿನ್ನತೆ ಇರಬೇಕು. ಚಾಲೆಂಜ್‌ ಆಗಿರುವಂತಹ ಪಾತ್ರ ಬೇಕು.

* ನಿಮ್ಮ ರೋಲ್‌ ಮಾಡೆಲ್‌?
ದೀಪಿಕಾ ಪಡುಕೋಣೆ

* ತೆಲುಗು, ತಮಿಳು ಭಾಷೆಯಿಂದ ಅವಕಾಶ?
ಬರುತ್ತಿವೆಯಾದರೂ, ಅತ್ತ ಗಮನಹರಿಸಿಲ್ಲ. ಕಾರಣ, ಈ ಚಿತ್ರ ಬಿಡುಗಡೆಯಾಗಲಿ ಅಂತ.

* ಓದು ಮತ್ತು ಸಿನಿಮಾ ಹೇಗೆ ಬ್ಯಾಲೆನ್ಸ್‌ ಮಾಡ್ತೀರಿ?
ಮೊದಲು ಓದಿನ ಕಡೆ ಹೆಚ್ಚು ಗಮನ. ಆ ನಂತರ ಸಿನಿಮಾ. ಆದರೆ, ಎರಡನ್ನೂ ಬ್ಯಾಲೆನ್ಸ್‌ ಮಾಡ್ತೀನಿ.

* ಮನೆಯವರ ಸಹಕಾರ ಹೇಗಿದೆ?
ಅಪ್ಪ, ಅಮ್ಮ ಎಲ್ಲರ ಪ್ರೋತ್ಸಾಹದಿಂದಲೇ ನಾನು ನಟಿಯಾಗಿದ್ದೇನೆ. 

* ನಟನೆ ತರಬೇತಿ ಎಲ್ಲಿ ಮಾಡಿದ್ದು?
ನಿಜ ಹೇಳ್ಲಾ, ನಾನು ಎಲ್ಲೂ ನಟನೆ ತರಬೇತಿ ಕಲಿತಿಲ್ಲ. ನೇರ ಆಡಿಷನ್‌ಗೆ ಹೋಗಿ ಆಯ್ಕೆಯಾಗಿದ್ದು. 

* ಈ ಚಿತ್ರದ ಮೇಲೆ ನಿರೀಕ್ಷೆ ಹೇಗಿದೆ?
ಸಹಜವಾಗಿಯೇ ದೊಡ್ಡ ನಿರೀಕ್ಷೆ ಇದೆ. ಯಾಕೆಂದರೆ, ಈಗಾಗಲೇ ಕಣ್‌ ಹೊಡೆಯೋದೇ ವೈರಲ್‌ ಆಗಿದೆ. ಮಲಯಾಳಂ ಜೊತೆ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ನಿರೀಕ್ಷೆ ಜಾಸ್ತಿ ಇದೆ. 

* ಚಿತ್ರದ ಹೈಲೈಟ್ಸ್‌ ಏನು?
ಲವ್‌ ಇದೆ, ಗೆಳೆತನವಿದೆ. ಚೈಲ್ಡ್‌ವುಡ್‌ ಫ್ರೆಂಡ್‌ಶಿಪ್‌ಗೆ ಹೆಚ್ಚು ಸ್ಕೋಪ್‌ ಇದೆ. ಪಕ್ಕಾ ಯೂಥ್‌ಗೆ ಕನೆಕ್ಟ್ ಆಗುವ ಸಿನಿಮಾ. ಸೆಂಟಿಮೆಂಟ್‌, ಎಮೋಷನಲ್‌ಗ‌ೂ ಜಾಗವಿದೆ.

Advertisement

Udayavani is now on Telegram. Click here to join our channel and stay updated with the latest news.

Next