Advertisement

ಮತದಾರರ ನಕಲಿ ಗುರುತಿನ ಚೀಟಿ ತಯಾರಿ?

01:04 AM Apr 16, 2019 | Lakshmi GovindaRaju |

ಬೆಂಗಳೂರು: ಮತದಾರರ ನಕಲಿ ಗುರುತಿನ ಚೀಟಿ ತಯಾರಿಸುತ್ತಿದ್ದರು ಎನ್ನಲಾದ ಗಾಂಧಿನಗರದ ಕೆ.ಜಿ.ರಸ್ತೆಯಲ್ಲಿರುವ ಪ್ರಭಾತ್‌ ಕಾಂಪ್ಲೆಕ್ಸ್‌ ಮೇಲೆ ಸೋಮವಾರ ರಾತ್ರಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ.

Advertisement

ರಾಜ್ಯ ಚುನಾವಣಾ ಸಹಾಯಕ ಆಯುಕ್ತ ಮನೋಜ್‌ ಕುಮಾರ್‌ ಮೀನಾ ಅವರ ನೇತೃತ್ವದಲ್ಲಿ, ಪ್ರಭಾತ್‌ ಕಾಂಪ್ಲೆಕ್ಸ್‌ನಲ್ಲಿರುವ ಇಬ್ರಾಹಿಂ ಖಲೀಲುಲ್ಲಾ ಎಂಬುವರಿಗೆ ಸೇರಿದ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮತದಾರರ ಮಾಹಿತಿ ಹೊಂದಿರುವ ನೂರಕ್ಕೂ ಹೆಚ್ಚು ಯಂತ್ರಗಳು ಹಾಗೂ 20 ಹೆಚ್ಚು ಕಂಪ್ಯೂಟರ್‌ಗಳು, ಪ್ರಿಂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 18ಕ್ಕೂ ಹೆಚ್ಚು ಮಂದಿ ಯುವಕ-ಯುವತಿಯರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೂರು ನೀಡಿದ ಬಿಜೆಪಿ: ಮತ್ತೂಂದೆಡೆ ಅಕ್ರಮ ಬಯಲಾಗುತ್ತಿದ್ದಂತೆ ರಾಜ್ಯ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕೃತ್ಯ ಎಸಗಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಅಲ್ಲದೆ, “ನಕಲಿ ಗುರುತಿನ ಚೀಟಿ ತಯಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮಖಂಡ ಇಬ್ರಾಹಿಂ ಖಲೀಲುಲ್ಲಾ ಹಾಗೂ ಅವರ ಕಚೇರಿಯಲ್ಲಿ ನಕಲಿ ಗುರುತಿನ ಚೀಟಿಗಳನ್ನು ಮುದ್ರಿಸುತ್ತಿದ್ದ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಟ್ವೀಟ್ ಮಾಡಿದೆ. ಆದರೆ, ಈ ಬಗ್ಗೆ ಚುನಾವಣಾಧಿಕಾರಿಗಳಾಗಲಿ, ಪೊಲೀಸರಾಗಲಿ ಖಚಿತ ಪಡಿಸಲಿಲ್ಲ.

Advertisement

ಮತ್ತೂಂದು ಮೂಲದ ಪ್ರಕಾರ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಟ್ಟಿಯಲ್ಲಿರುವ ಮತದಾರರ ಪೈಕಿ ಕಳೆದ 2-3 ಚುನಾವಣೆಯಲ್ಲಿ ಮತದಾನ ಮಾಡದಿರುವವರನ್ನು ಪತ್ತೆಹಚ್ಚಿ, ಈ ಬಾರಿ ಮತಗಟ್ಟೆಗೆ ಕರೆ ತರುವ ಉದ್ದೇಶದಿಂದ ಮಾಹಿತಿ ಸಂಗ್ರಹಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಒಟ್ಟಾರೆ ಪ್ರಕರಣದ ಬಗ್ಗೆ ಉಪ್ಪಾರಪೇಟೆ ಪೊಲೀಸರು, “ಗಂಭೀರ ಸ್ವರೂಪದ್ದಲ್ಲದ ಪ್ರಕರಣ’ ದಾಖಲಿಸಿಕೊಂಡು, ಎಸಿಪಿ ನೇತೃತ್ವದಲ್ಲಿ ತನಿಖೆಗೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭೇಟಿ ನೀಡಿದ್ದಾರೆ.

ಬೆಂಗಳೂರು ನಗರ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್‌ ಪ್ರತಿಕ್ರಿಯೆ ನೀಡಿದ್ದು, ಸ್ಥಳದಲ್ಲಿ ಮತದಾರರ ಪಟ್ಟಿ ಪತ್ತೆಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಕ್ಷೇತ್ರ ಬಿಟ್ಟು ಹೊರ ಹೋಗಿರುವ ಮತದಾರರ ಬಗ್ಗೆ ವಿವರ ಸಂಗ್ರಹಿಸಿ, ಸರ್ವೆ ಮಾಡುತ್ತಿದ್ದರು ಎಂಬ ಮಾಹಿತಿ ಇದೆ ಎಂದರು.

ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಪ್ರತಿಕ್ರಿಯೆ ನೀಡಿ, ಫಾರ್ಮ್ ನಂ.21 ಅರ್ಜಿ ಇಟ್ಟುಕೊಂಡು ಎಲ್ಲಾ ಪ್ರದೇಶಗಳಿಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದರು.

ಕಳೆದ ಹಲವು ವರ್ಷಗಳಿಂದ ಯಾರು ಮತದಾನ ಮಾಡಿಲ್ಲವೋ, ಅಂತಹವರನ್ನು ಪತ್ತೆ ಮತದಾನ ಮಾಡಿಸಲು ಪಟ್ಟಿ ತಯಾರಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. 14 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಸಂಬಂಧ ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next