Advertisement

ಜಿಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಸಿದ್ಧತೆ

12:52 PM May 19, 2018 | Team Udayavani |

ಮೈಸೂರು: ಅತಂತ್ರ ವಿಧಾನಸಭೆ ಸೃಷ್ಟಿಯಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಬೇಷರತ್‌ ಆಗಿ ಜೆಡಿಎಸ್‌ ಬೆಂಬಲಿಸಿರುವಂತೆ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲೂ ಜೆಡಿಎಸ್‌-ಕಾಂಗ್ರೆಸ್‌ ಹೊಂದಾಣಿಕೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಜೊತೆಗೆ ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಅಧ್ಯಕ್ಷೆ ನಯೀಮಾ ಸುಲ್ತಾನರ ವಿರುದ್ಧ ಅವಿಶ್ವಾ ನಿರ್ಣಯ ಮಂಡಿಸಲು ಸಿದ್ಧತೆ ನಡೆದಿದೆ.

Advertisement

ಜೆಡಿಎಸ್‌-ಬಿಜೆಪಿ ಹೊಂದಾಣಿಕೆ: 49 ಸದಸ್ಯ ಬಲದ ಜಿಪಂನಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ತೀರ್ಮಾನದಂತೆ 18 ಸದಸ್ಯರನ್ನು ಹೊಂದಿರುವ ಜೆಡಿಎಸ್‌ ಅಧ್ಯಕ್ಷ ಸ್ಥಾನ ಹಾಗೂ ಒಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಮತ್ತು 8 ಮಂದಿ ಸದಸ್ಯರನ್ನು

ಹೊಂದಿರುವ ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಹಾಗೂ 2 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಂಚಿಕೆಯ ಮಾತುಕತೆ ನಡೆದು ಹೊಂದಾಣಿಕೆ ಮಾಡಿಕೊಂಡಿವೆ. ಕಾಂಗ್ರೆಸ್‌ 22 ಸದಸ್ಯರನ್ನು ಹೊಂದಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಜೆಡಿಎಸ್‌-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ.

ಸಂಖ್ಯಾಬಲ ಕುಸಿತ: ಈ ಚುನಾವಣೆಯಲ್ಲಿ ಶಾಸಕರಾಗಿ ಚುನಾಯಿತರಾಗಿರುವ ಜೆಡಿಎಸ್‌ನ ಇಬ್ಬರು ಜಿಲ್ಲಾ ಪಂಚಾಯ್ತಿ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುವುದರಿಂದ ಜೆಡಿಎಸ್‌ನ ಸಂಖ್ಯಾಬಲ 16ಕ್ಕೆ ಇಳಿಯಬೇಕಿತ್ತಾದರೂ ಪಕ್ಷೇತರ ಸದಸ್ಯರಾಗಿದ್ದ ದಯಾನಂದಮೂರ್ತಿ, ಜೆಡಿಎಸ್‌ ಸೇರಿ ನಂಜನಗೂಡು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಎದುರಿಸಿ ಪರಾಭವಗೊಂಡಿದ್ದಾರೆ.

ಇನ್ನು ಅಡಗೂರು ಎಚ್‌.ವಿಶ್ವನಾಥ್‌ ಪುತ್ರ ತಾಂತ್ರಿಕವಾಗಿ ಕಾಂಗ್ರೆಸ್‌ ಸದಸ್ಯರಾಗಿದ್ದರೂ ತಂದೆಯ ಕಾರಣದಿಂದ ಮಾನಸಿಕವಾಗಿ ಜೆಡಿಎಸ್‌ ಜೊತೆಗೇ ಇದ್ದಾರೆ. ಹೀಗಾಗಿ ಜೆಡಿಎಸ್‌ನ ಸಂಖ್ಯಾಬಲ 18 ಆಗಲಿದೆ. ಇನ್ನು ಹುಣಸೂರು ತಾಲೂಕಿನ ಹನಗೋಡು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಜಿಪಂ ಚುನಾವಣೆ ಗೆದ್ದಿದ್ದ ಅನಿಲ್‌ ಚಿಕ್ಕಮಾದು,

Advertisement

ಜಿಪಂ ಸದಸ್ಯ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿ ಎಚ್‌.ಡಿ.ಕೋಟೆ ಕ್ಷೇತ್ರದಿಂದ ಶಾಸಕರಾಗಿ ಆರಿಸಿ ಬಂದಿದ್ದಾರೆ. ತಿ.ನರಸೀಪುರ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿರುವ ಸೋಮನಾಥ ಪುರ ಕ್ಷೇತ್ರದ ಜಿಪಂ ಸದಸ್ಯರಾಗಿದ್ದ ಅಶ್ವಿ‌ನ್‌ ಕುಮಾರ್‌, ಶನಿವಾರ ಜಿಪಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಕುರ್ಚಿ ಬಿಡದ ಅಧ್ಯಕ್ಷೆ: ಮೊದಲ 20 ತಿಂಗಳು ಎಚ್‌.ಡಿ.ಕೋಟೆ ತಾಲೂಕಿನ ನಯೀಮಾ ಸುಲ್ತಾನ, ಉಳಿದ ಅವಧಿಗೆ ಅದೇ ತಾಲೂಕಿನ ಪರಿಮಳಾ ಶ್ಯಾಂ ಅವರನ್ನು ಅಧ್ಯಕ್ಷರನ್ನಾಗಿಸಲು ಜೆಡಿಎಸ್‌ ಪಕ್ಷದಲ್ಲಿ ಆಂತರಿಕವಾಗಿ ಒಪ್ಪಂದವಾಗಿತ್ತು.

ಅದರಂತೆ ಈಗಾಗಲೇ 20 ತಿಂಗಳು ಅಧಿಕಾರಾವಧಿ ಪೂರೈಸಿರುವ ನಯೀಮಾ ಸುಲ್ತಾನ, 2017ರ ಡಿಸೆಂಬರ್‌ನಲ್ಲೇ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಆದರೆ, ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಅಧಿಕಾರದಲ್ಲಿ ಮುಂದುವರಿದಿರುವುದರಿಂದ ಅವಿಶ್ವಾಸ ನಿರ್ಣಯ ಮಂಡಿಸಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಿದ್ಧತೆಗಳು ನಡೆದಿವೆ.

ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಜಿಪಂ ಸಾಮಾನ್ಯ ಸಭೆ ನಡೆದಿಲ್ಲ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಘಟನಾವಳಿಗಳೆಲ್ಲ ಕಳೆದ ನಂತರ ನಡೆಯುವ ಜಿಪಂ ಸಾಮಾನ್ಯ ಸಭೆಯಲ್ಲಿ ನಯೀಮಾ ಸುಲ್ತಾನ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ, ಅವಿಶ್ವಾಸ ನಿರ್ಣಯದ ಮೂಲಕ ಕೆಳಗಿಳಿಸಲು ಜೆಡಿಎಸ್‌ ಸದಸ್ಯರೇ ತೀರ್ಮಾನಿಸಿದ್ದಾರೆ.

ಜಿಪಂನಲ್ಲೂ ಹೊಂದಾಣಿಕೆ: ರಾಜ್ಯಮಟ್ಟದ ತೀರ್ಮಾನದಂತೆ ಜಿಲ್ಲಾ ಪಂಚಾಯ್ತಿಯಲ್ಲೂ ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಂಚಿಕೊಂಡರೆ, ಉಪಾಧ್ಯಕ್ಷ ಸ್ಥಾನ ಹಾಗೂ 2 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹೊಂದಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ.

ಈ ಬಗ್ಗೆ ಉದಯವಾಣಿ ಜೊತೆಗೆ ಮಾತನಾಡಿದ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಜಿಪಂ ಅಧ್ಯಕ್ಷರಿಗೆ ಸರ್ಕಾರ ರಾಜ್ಯ ಸಚಿವರ ಸ್ಥಾನಮಾನ ನೀಡಿ, ಎಲ್ಲ ಸವಲತ್ತು ನೀಡಿದ್ದರೂ ನಯೀಮಾ ಸುಲ್ತಾನ, ಅದನ್ನು ಬಳಸಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ವಿಫ‌ಲರಾಗಿದ್ದಾರೆ. ಅಧ್ಯಕ್ಷರಾಗಿ ಜಿಲ್ಲೆಯ ಯಾವುದೇ ತಾಲೂಕಿಗೆ ಭೇಟಿ ನೀಡಲಿಲ್ಲ.

ಅಲ್ಲಿ ಕೆಡಿಪಿ ಸಭೆಗಳನ್ನು ಮಾಡಲಿಲ್ಲ. ಜೊತೆಗೆ ಪಕ್ಷದ ಆಂತರಿಕ ಒಪ್ಪಂದದಂತೆ ನಡೆದುಕೊಳ್ಳದೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸಲೇ ಬೇಕಾಗುತ್ತದೆ. ಇದು ನನ್ನೊಬ್ಬನ ತೀರ್ಮಾನವಲ್ಲ. ಪಕ್ಷದ ತೀರ್ಮಾನದಂತೆ ನಡೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ.

ಜಿಪಂ ವಿರೋಧ ಪಕ್ಷದ ನಾಯಕರಾಗಿರುವ ಡಿ.ರವಿಶಂಕರ್‌, ರಾಜ್ಯಮಟ್ಟದ ಹೊಂದಾಣಿಕೆ ಸ್ಥಳೀಯವಾಗಿಯೂ ಅನ್ವಯವಾಗಬೇಕು. ಆದರೆ, ಜೆಡಿಎಸ್‌ ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಜೊತೆಗಿದೆ. ಮೈಸೂರು ಮಹಾ ನಗರಪಾಲಿಕೆ, ಮೈಸೂರು ಜಿಪಂನಲ್ಲಿ ಬಿಜೆಪಿ ಜೊತೆಗಿದೆ. ಹೀಗಾಗಿ ಜೆಡಿಎಸ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next