Advertisement

ಪ್ರಥಮ ಅರೆಭಾಷೆ ನಾಟಕ ಪ್ರದರ್ಶನಕ್ಕೆ ಸಿದ್ಧ

01:04 AM Mar 10, 2020 | Sriram |

ವಿಶೇಷ ವರದಿಸುಳ್ಯ: ಪ್ರಪ್ರಥಮ ಬಾರಿಗೆ ಅರೆಭಾಷೆ ನಾಟಕವೊಂದು ಪ್ರದರ್ಶನಕ್ಕೆ ಸಿದ್ಧಗೊಂಡಿದೆ.ಒಟ್ಟು 40 ದಿನಗಳ ರಾಜ್ಯಮಟ್ಟದ ರಂಗ ಕಮ್ಮಟದ ಮೂಲಕ ಈ ನಾಟಕ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಬೇರೆ ಬೇರೆ ಭಾಷೆ ಮಾತನಾಡುವ ವಿವಿಧ ಜಿಲ್ಲೆಗಳ ಐದು ಮಂದಿ ಅರೆಭಾಷೆಯನ್ನು ಅಭ್ಯಸಿಸಿ ಅಭಿನಯಿಸುತ್ತಿದ್ದಾರೆ. ತಂಡದಲ್ಲಿ ಒಟ್ಟು ಹದಿನೈದು ಮಂದಿ ಇದ್ದಾರೆ.

Advertisement

ಸಾಹೇಬರು ಬಂದವೆ
ಪ್ರಸಿದ್ಧ ನಾಟಕಕಾರ ನಿಕೊಲಾಮ್‌ ಗೊಗೊಲ್‌ನ “ದಿ ಇನ್‌ಸ್ಪೆಕ್ಟರ್‌ ಜನರಲ್‌’ ನಾಟಕವನ್ನು ಕೆ.ವಿ. ಸುಬ್ಬಣ್ಣ ಮತ್ತು ಕೆ.ವಿ. ಅಕ್ಷರ ಅವರು ಕನ್ನಡಕ್ಕೆ “ಸಾಹೇಬರು ಬರುತ್ತಾರೆ’ ಶೀರ್ಷಿಕೆಯಲ್ಲಿ ಅನುವಾದಿಸಿದ್ದರು. ಈ ನಾಟಕವನ್ನು ಪತ್ರಕರ್ತ ಜಯಪ್ರಕಾಶ್‌ ಕುಕ್ಕೇಟಿ ಅವರು ಅರೆಭಾಷೆಗೆ ಅನುವಾದಿಸಿದ್ದಾರೆ. ಅರೆಭಾಷೆಯಲ್ಲಿ “ಸಾಹೇಬರು ಬಂದವೆ’ ನಾಟಕ ರಂಗ ಮಾಂತ್ರಿಕ ಜೀವನ್‌ರಾಮ್‌ ಸುಳ್ಯ ಅವರ ನಿರ್ದೇಶನದಲ್ಲಿ ರಂಗದ ಮೇಲೆ ಬರಲಿದೆ.

ಯಾವನೋ ಒಬ್ಬನನ್ನು ಇನ್ನೊಬ್ಬ ಎಂದು ಭಾವಿಸಿ ಗೊಂದಲ ಪಡುವ, ತಾನಲ್ಲದ್ದನ್ನು ತಾನು ಎಂದು ತೋರಿಸುವ, ಕೊನೆಗೆ ಯಾರೋ ಹೋಗಿ ಯಾರೋ ಆಗುವ ದೃಶ್ಯಗಳಿಂದ ಹೆಣೆದುಕೊಂಡಿದೆ ನಾಟಕದ ಚಿತ್ರಣ. ಐದು ದಶಕಗಳ ಹಿಂದಿನ ಸಮಯ, ಸಂದರ್ಭದ ಕಥಾ ವಸ್ತುವಾದರೂ ಈಗಲೂ ಪ್ರಸ್ತುತ ಎನ್ನುವಂತೆ ಪ್ರಚುರಪಡಿಸಲಾಗುತ್ತಿದೆ.

ಈಗಿನ ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಚಿತ್ರಿಸುತ್ತದೆ. ಹಣ, ಅಂತಸ್ತು, ಭ್ರಷ್ಟ ವ್ಯವಸ್ಥೆಗಳ ಹಿಂದೆ ಓಡಾಡುವ ಇಂದಿನ ಒಂದು ವರ್ಗವೇ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆಯಲ್ಲ ಅದರ ಅಣಕು ಈ ನಾಟಕದಲ್ಲಿ ನಿರೂಪಿತವಾಗಿದೆ. ಹಿಂದೆಲ್ಲ ಪತ್ರದ ಮೂಲಕವೇ ಮಾಹಿತಿ ರವಾನೆ ಆಗಿ ವಿಚಾರಗಳು ದೊರಕುತ್ತಿದ್ದವು. ಆದರೆ ಇಂದಿನ ತಂತ್ರಜ್ಞಾನದಿಂದ ಉದ್ಭವಿಸಿರುವ ವಾಟ್ಸ್‌ಆ್ಯಪ್‌ ಸಹಿತ ಇತರ ಮಾಹಿತಿ ರವಾನಿಸುವ ಮೂಲಗಳಿಂದ ಮಾಹಿತಿ ಸೋರಿಕೆ ಆಗುವ ಬಗ್ಗೆಯೂ ಇರುವ ಕಾಳಜಿ, ಕಳಕಳಿಯನ್ನು ನಿರ್ದೇಶಕರು ಸೇರಿಸಿಕೊಂಡಿದ್ದಾರೆ. ಸುಮಾರು 105 ನಿಮಿಷಗಳ ಅವಧಿಯ ನಾಟಕದಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ತಕ್ಕನಾದ ಕೆಲವು ಬದಲಾವಣೆಗಳೊಂದಿಗೆ ಪ್ರೇಕ್ಷಕರನ್ನು ಸಂಪೂರ್ಣ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಅರೆಭಾಷೆ ಅಭ್ಯಾಸ
ಬಾಂಜಾರ ಭಾಷೆ ಮಾತನಾಡುವ ಬಳ್ಳಾರಿಯ ಚಂದ್ರ ನಾಯಕ, ಹುಬ್ಬಳ್ಳಿ – ಧಾರವಾಡದ ವಿಲಾಸ್‌ ರಾವ್‌, ಮರಾಠಿ ಮಾತನಾಡುವ ಗಂಗಾವತಿಯ ರಮೇಶ್‌ ಬಣಕಾರ್‌, ಕುಂದ ಕನ್ನಡದ ಕುಂದಾಪುರದ ಶ್ರೀಧರ್‌, ಕುಶಾಲನಗರದ ಪ್ರಥನ್‌ ಅಳುವಾರ, ಅರೆಭಾಷಿಗರಾದ ಕೊಡಗು ಜಿಲ್ಲೆಯ ವಿನೋದ್‌ ಮೂಡಗದ್ದೆ, ಯತೀನ್‌ ಹಾರಂಬಿ, ಜಯಪ್ರಕಾಶ್‌ ಪೆರುಮುಂಡ, ಭುವನ್‌ ಕುಂಬಳಚೇರಿ, ರಾಜ್‌ ಮುಖೇಶ್‌ ಸುಳ್ಯ, ಶ್ರುತಿ ಮೆದು, ಮಮತಾ ಕಲ್ಮಕಾರ್‌, ನಂದಿನಿ ಕುತ್ತೇಡಿ, ನಿತ್ಯಾನಂದ ಮಲೆಯಾಳ, ಹವಿನ್‌ ಗುಂಡ್ಯ ತಂಡದಲ್ಲಿದ್ದಾರೆ. ಅರೆಭಾಷೆ ಏನೂ ತಿಳಿಯದ ಉತ್ತರ ಕರ್ನಾಟದ ಐವರು ಕಮ್ಮಟದ ಆರಂಭದಲ್ಲಿ ಭಾಷೆಯನ್ನು, ಅದರ ಅರ್ಥವನ್ನು ತಿಳಿದು ಅಭಿನಯಕ್ಕೆ ಮುಂದಡಿಯಿಟ್ಟಿದ್ದಾರೆ.

Advertisement

ನೀನಾಸಂನ ಗುರುಮೂರ್ತಿ ಅವರ ವಸ್ತ್ರಾಲಂಕಾರ, ಬೆಂಗಳೂರಿನ ಪ್ರಕಾಶ್‌ ಶೆಟ್ಟಿ ರಂಗ ವಿನ್ಯಾಸ ಮಾಡುತ್ತಿದ್ದಾರೆ. ಕಮ್ಮಟದಲ್ಲಿ ರಂಗಾಭಿನಯದ ಮೊದಲ ಹಂತದಲ್ಲಿ ಸ್ವರ ತಯಾರಿ, ಧ್ವನಿ ಪರೀಕ್ಷೆ, ಅಭಿನಯದ ಆರಂಭದ ಹಂತಗಳ ಮಾಹಿತಿಯೊಂದಿಗೆ ಯೋಗ, ಯಕ್ಷಗಾನ ಇತ್ಯಾದಿಗಳನ್ನು ಹೇಳಿ ಕೊಡಲಾಗುತ್ತದೆ.

ಮಾ. 14ಕ್ಕೆ ಮೊದಲ ಪ್ರದರ್ಶನ
ಅರೆಭಾಷೆಯ ಈ ನಾಟಕದ ಮೊದಲ ಪ್ರದರ್ಶನ ಮಾ. 14ರಂದು ರಂಗಮನೆಯಲ್ಲಿ ನಡೆಯಲಿದೆ. ಅನಂತರ ಪುತ್ತೂರು, ಮಂಗಳೂರಿನಲ್ಲಿಯೂ ಪ್ರದರ್ಶನಗೊಳ್ಳಲಿದೆ.

ಭಾಷೆ ವಿಸ್ತರಣೆ
ಅರೆಭಾಷೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಪ್ರಯೋಗ ಶ್ಲಾಘನೀಯ. ಭಾಷಾ ಅಕಾಡೆಮಿಗಳು ಈ ಕೆಲಸ ಮಾಡಬೇಕಿದೆ. ಅರೆಭಾಷೆ ಗೊತ್ತೇ ಇಲ್ಲದ ಕಲಾವಿದರಿಗೆ ಭಾಷೆಯ ಆರಂಭಿಕ ಜ್ಞಾನ ಮೂಡಿ ನಾಟಕ ಮಾಡಿಸಲಾಗುತ್ತದೆ. ಆ ಮೂಲಕ ಅವರ ಊರಿಗೆ ಭಾಷೆ ವಿಸ್ತರಣೆಗೊಳ್ಳಲಿದೆ.
– ಜೀವನ್‌ರಾಂ ಸುಳ್ಯ, ನಾಟಕ ನಿರ್ದೇಶಕ

ಕಮ್ಮಟಗಳಾಗಬೇಕು
ಭಾಷೆ ಬೆಳವಣಿಗೆಗೆ ಕಮ್ಮಟಗಳಾಗಬೇಕು ಎಂದು ಅಕಾಡೆಮಿ ನಿರ್ಧಾರ ಮಾಡಿದೆ. ನಾಟಕ ಜನರನ್ನು ತಲುಪುವ ಮಹತ್ವದ ಮಾಧ್ಯಮ. ಅದಕ್ಕಾಗಿ ನಾಟಕ ಕಮ್ಮಟ ನಡೆಸಲಾಗುತ್ತದೆ. ಇದರಲ್ಲಿ ತಯಾರಾದ ನಾಟಕ ರಾಜ್ಯದೆಲ್ಲೆಡೆ ಪ್ರದರ್ಶನ ಮಾಡುವ ಉದ್ದೇಶ ಇದೆ.
– ಲಕ್ಷ್ಮೀನಾರಾಯಣ ಕಜೆಗದ್ದೆ,
ಅಧ್ಯಕ್ಷ, ಅರೆಭಾಷೆ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next