Advertisement

ಮೋದಿ ಜೊತೆ ಮಾತುಕತೆಗೆ ಸಿದ್ಧ: ಇಮ್ರಾನ್‌

11:53 AM Nov 30, 2018 | Team Udayavani |

ಇಸ್ಲಾಮಾಬಾದ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಪಾಕ್‌‌ ಪ್ರಧಾನಿ ಇಮ್ರಾನ್‌ ಖಾನ್‌ ಗುರುವಾರ ಹೇಳಿದ್ದಾರೆ. ಹೊರದೇಶದಲ್ಲಿ ಉಗ್ರ ಚಟುವಟಿಕೆ ನಡೆಸಲು ನಮ್ಮ ನೆಲವನ್ನು ನಾವು ನೀಡುವುದು ನಮಗೆ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ. ಬುಧವಾರ ಕರ್ತಾರ್ಪುರ ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಿದ್ದ ಇಮ್ರಾನ್‌, ಭಾರತದ ಜೊತೆಗೆ ಸ್ನೇಹ ವೃದ್ಧಿಗೆ ಬಯಸಿದ್ದೇನೆ ಎಂದಿದ್ದರು.

Advertisement

ಪಾಕಿಸ್ಥಾನದ ಜನರ ಮನಸ್ಥಿತಿ ಬದಲಾಗಿದೆ. ಕಾಶ್ಮೀರ ವಿಚಾರದಲ್ಲಿ ಸೇನೆ ಮೂಲಕ ಪರಿಹಾರ ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯ ನಂತರ ನಾವು ಭಾರತ ಸ್ನೇಹ ಹಸ್ತ ಚಾಚಬಹುದು ಎಂದು ನಿರೀಕ್ಷಿಸಿ ದ್ದೇವೆ. ಅಲ್ಲಿಯವರೆಗೆ ನಾವು ಕಾಯುತ್ತೇವೆ ಎಂದು ಭಾರತೀಯ ಪತ್ರಕರ್ತರೊಂದಿಗೆ ಮಾತುಕತೆ ವೇಳೆ ಹೇಳಿದ್ದಾರೆ. ಈ ಮಧ್ಯೆ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ವಿರುದ್ಧ ಪಾಕಿಸ್ಥಾನ ಕ್ರಮ ಕೈಗೊಳ್ಳದ ಬಗ್ಗೆ ಕೇಳಿದ ಪ್ರಶ್ನೆಗೆ, ಹಫೀಜ್‌ ಸಯೀದ್‌ ವಿರುದ್ಧ ವಿಶ್ವಸಂಸ್ಥೆ ನಿಷೇಧ ಹೇರಿದೆ. ಈಗಾಗಲೇ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ. ಮುಂಬೈ ದಾಳಿಯ ಇತರ ಆರೋಪಿಗಳಿಗೆ ಸಂಬಂಧಿಸಿದಂತೆ ವಿಷಯ ನ್ಯಾಯಾಲಯದಲ್ಲಿದೆ. ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

ಉಗ್ರನೊಂದಿಗೆ ಸಿಧು ಫೋಟೋ!: ಖಲಿಸ್ತಾನಿ ಉಗ್ರ ಗೋಪಾಲ್‌ ಸಿಂಗ್‌ ಚಾವ್ಲಾ ಜೊತೆಗೆ ಪಂಜಾಬ್‌ ಸಚಿವ ನವ್‌ಜೋತ್‌ ಸಿಧು ಕರ್ತಾರ್ಪುರ ಕಾರಿಡಾರ್‌ ಶಂಕು ಸ್ಥಾಪನೆ ವೇಳೆ ಫೋಟೋ ತೆಗೆಸಿಕೊಂಡಿದ್ದು ಈಗ ವಿವಾದವಾಗಿದೆ. ಅಲ್ಲಿನ ಜನರು ಪ್ರೀತಿ ತೋರಿಸಿದ್ದಾರೆ. ಪ್ರತಿ ನಿಮಿಷವೂ ಸಾವಿರಾರು ಫೋಟೋ ಕ್ಲಿಕ್ಕಿಸಲಾಗುತ್ತಿತ್ತು. ಈ ಮಧ್ಯೆ ಯಾರು ಚಾವ್ಲಾ ಎಂಬುದು ನನಗೆ ಗೊತ್ತೂ ಆಗಲಿಲ್ಲ ಎಂದು ಸಿಧು ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ಥಾನದ ಸಿಖ್‌ ಗುರುದ್ವಾರ ಪ್ರಬಂಧಕ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಾವ್ಲಾ ತನ್ನ ಫೇಸ್‌ಬುಕ್‌ ಪುಟದಲ್ಲಿ ಈ ಫೋಟೋವನ್ನು ಪ್ರಕಟಿಸಿದ್ದರು. ಕೆಲವೇ ದಿನಗಳ ಹಿಂದೆ ಅಮೃತ ಸರದ ನಿರಂಕಾರಿ ಭವನದಲ್ಲಿ ನಡೆದ ದಾಳಿಯಲ್ಲಿ ಚಾವ್ಲಾ ಪಾತ್ರವೂ ಇತ್ತು ಎಂಬ ಶಂಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next