Advertisement
ಮಹದಾಯಿ ನದಿಯಿಂದ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡುಗಡೆ ಮಾಡಲು ಮಾತುಕತೆಗೆ ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪರಿಕ್ಕರ್‌ಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಇದು ತುರ್ತು ವಿಚಾರವಾಗಿರುವುದರಿಂದ ಮಾತುಕತೆಗೆ ಆದಷ್ಟು ಬೇಗ ದಿನಾಂಕ ಮತ್ತು ಸ್ಥಳ ನಿಗದಿಪಡಿಸಿ. ಅಲ್ಲಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸೋಣ ಎಂದಿದ್ದಾರೆ.
ಇದರೊಂದಿಗೆ ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಿಚಾರ ಮತ್ತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಮುಂದೆ ನಿಂತಂತಾಗಿದೆ. ಮುಖ್ಯಮಂತ್ರಿ ಪತ್ರದಲ್ಲಿ ಏನಿದೆ?
ಮಹದಾಯಿ ವಿವಾದ ಬಗೆಹರಿಸಿಕೊಳ್ಳಲು 2017ರ ಜೂನ್‌ನಲ್ಲಿ ಬೆಂಗಳೂರಿನಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸೋಣವೆಂದು 2017ರ ಮೇ 24ರಂದು ತಮಗೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಇದಾದ ಬಳಿಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಪತ್ರದ ಬೆನ್ನು ಹತ್ತಿದ್ದರಾದರೂ ಗೋವಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
Related Articles
Advertisement
ಅದೇನೇ ಇರಲಿ, ನಾನು ನಿಮ್ಮಲ್ಲಿ ಮತ್ತೂಮ್ಮೆ ವಿನಂತಿಸಿಕೊಳ್ಳುತ್ತೇನೆ, ಮಹದಾಯಿ ಕೊಳ್ಳದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ನಿರ್ದಿಷ್ಟ ದಿನ ಮತ್ತು ಸಮಯದಂದು ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡೋಣ. ಸ್ಥಳವನ್ನು ನೀವೇ ನಿರ್ಧರಿಸಿ. ಈ ಪ್ರಸ್ತಾಪವನ್ನು ನಾನು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೂ ಕಳುಹಿಸುತ್ತಿದ್ದೇನೆ. ಮಹದಾಯಿ ನ್ಯಾಯಾಧಿಕರಣದ ಮುಂದೆ 2018ರ ಫೆ. 6ರಿಂದ 22ರವರೆಗೆ ವ್ಯಾಜ್ಯದ ಅಂತಿಮ ವಿಚಾರಣೆ ನಡೆಯಲಿರುವುದರಿಂದ ತುರ್ತಾಗಿ ಮಾತುಕತೆಗೆ ನೀವೇ ಸ್ಥಳ ನಿಗದಿಮಾಡಿ.
ಮಹದಾಯಿ ನದಿಯ ಒಟ್ಟು 199 ಟಿಎಂಸಿ ನೀರಿನ ಪೈಕಿ ಶೇ. 75ರ ಅವಲಂಬನೆ ಪ್ರಕಾರ ಕರ್ನಾಟಕ ಒಟ್ಟು 14.98 ಟಿಎಂಸಿ ನೀರು ಕೇಳಿದೆ. ಈ ಪೈಕಿ ಹುಬ್ಬಳ್ಳಿ-ಧಾರವಾಡ ಮತ್ತಿತರ ಪ್ರದೇಶಗಳ ಕುಡಿಯುವ ನೀರಿಗಾಗಿ 7.56 ಟಿಎಂಸಿ ಮತ್ತು ಮಹದಾಯಿ ಕೊಳ್ಳದ ಬರಪೀಡಿತ ಪ್ರದೇಶಗಳಿಗೆ ಪೂರೈಸಲು ಹೆಚ್ಚುವರಿ ನೀರಿಗಾಗಿ 7 ಟಿಎಂಸಿ ಕೇಳಲಾಗಿದೆ ಎಂಬುದನ್ನು ನಾನು ಮತ್ತೂಮ್ಮೆ ಸ್ಪಷ್ಟಪಡಿಸುತ್ತೇನೆ.
ಈ ವಿಚಾರದಲ್ಲಿ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಗೋವಾ ಮುಖ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ಸಭೆಯ ಕಾರ್ಯಸೂಚಿ ಮತ್ತಿತರೆ ವಿಚಾರಗಳನ್ನು ತೀರ್ಮಾನಿಸಲಿ ಎಂದು ಸಿದ್ದರಾಮಯ್ಯ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠೆ ಇಲ್ಲ, ಮಾತುಕತೆಗೆ ಸಿದ್ಧ: ಸಚಿವ ಪಾಟೀಲ್ಬೆಳವಣಿಗೆಗೆ ಸಂಬಂಧಿಸಿ ಇನ್ನೊಂದೆಡೆ ಪತ್ರಿಕಾ ಹೇಳಿಕೆ ನೀಡಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ರಾಜ್ಯದ ಹಿತದೃಷ್ಟಿಯಿಂದ ಯಾವ ಪ್ರತಿಷ್ಠೆ ಇಲ್ಲದೇ, ಯಾವುದೇ ಸ್ಥಳ ಮತ್ತು ದಿನಾಂಕದಂದು ಗೋವಾ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲು ರಾಜ್ಯದ ಮುಖ್ಯಮಂತ್ರಿಗಳು ಸಿದ್ಧವಿರುವುದಾಗಿ ಹೇಳಿದ್ದಾರೆ. ಶಿಷ್ಟಾಚಾರದ ಅನ್ವಯ ಗೋವಾ ಮುಖ್ಯಮಂತ್ರಿಗಳು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಿತ್ತು. ಆದರೆ, ರಾಜ್ಯವು ಈಗಾಗಲೇ ಸಾಕಷ್ಟು ಬಾರಿ ಗೋವಾ ರಾಜ್ಯದೊಂದಿಗೆ ಅಧಿಕೃತವಾಗಿ ಪತ್ರ ವ್ಯವಹಾರ ನಡೆಸಿದ್ದರೂ ಶಿಷ್ಟಾಚಾರದ ಅನ್ವಯ ಮುಖ್ಯಮಂತ್ರಿಗಳಿಗೆ ಪತ್ರ ಬರೆಯದೆ ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಆದರೂ ಪ್ರತಿಷ್ಠೆಗೆ ಒಳಗಾಗದೇ ಗೋವಾ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಗೆ ಸಿದ್ಧ. ಆದರೆ, ಈ ವಿಷಯವನ್ನು ಒಂದೇ ಸಭೆಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸದ್ಯಮಾತುಕತೆ ಮಾಡಲ್ಲ: ಪರೀಕ್ಕರ್
ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಷಯವನ್ನು ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ಣಗೊಂಡ ನಂತರ ಮಾತುಕತೆ ನಡೆಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕ್ಕರ್ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಗೂ ಮೊದಲು ಪೂರ್ಣಗೊಳ್ಳಲಿ. ನಂತರ ನಾನು ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಆಕ್ರೋಶ
ಕರ್ನಾಟಕಕ್ಕೆ ಕುಡಿಯಲು ಮಹದಾಯಿ ನೀರು ಕೊಡಲು ಸಿದ್ಧ ಎಂದು ಮನೋಹರ್ ಪರಿಕ್ಕರ್ ಹೇಳಿದ ಹಿನ್ನೆಲೆಯಲ್ಲಿ ಗೋವಾ ಕಾಂಗ್ರೆಸ್ ಪ್ರತಿಭಟನೆಗಿಳಿದಿದೆ. ರಾಜ್ಯದ ಜನತೆಗೆ ಅನ್ಯಾಯವಾಗಲು ಬಿಡೆವು ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಬೆಳವಣಿಗೆಯನ್ನು ನಿಭಾಯಿಸಬೇಕಾದ ಅನಿವಾರ್ಯತೆ ಈಗ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಎದುರಾಗಿದೆ.