ಸಿಂಧನೂರು: ಸಮಾಜಕ್ಕಾಗಿ ಏನಾದರೂ ಸಹಾಯ ಮಾಡಬೇಕೆನ್ನುವ ಮನಸ್ಸು ಬರುತ್ತಿದ್ದಂತೆ ಬಹುತೇಕರು ಅಶೋಕ ನಲ್ಲಾ ಅವರನ್ನು ನೆನಪಿಸಿಕೊಳ್ಳುತ್ತಾರೆ. ಆ ಮಟ್ಟಿಗೆ ಸಮಾಜಮುಖೀಯಾಗಿರುವ ಇವರು ಹೊಟ್ಟೆಪಾಡಿಗೆ ಹಾಲಿನ ವ್ಯಾಪಾರ ನಿರ್ವಹಿಸುತ್ತಲೇ ಕೊರಳಲ್ಲಿ ಅನ್ನದ ಜೋಳಿಗೆ ಹಾಕಿಕೊಂಡೇ ಸಂಚರಿಸುತ್ತಾರೆ.
ಹೌದು. ತಾಲೂಕಿನ ಹೊಸಳ್ಳಿ (ಇಜೆ) ಕ್ಯಾಂಪಿನ ನಿವಾಸಿ ಅಶೋಕ ನಲ್ಲಾ ತಮ್ಮ ವೈಯಕ್ತಿಕ ಬದುಕಿನೊಟ್ಟಿಗೆ ಹಸಿದವರ ಪಾಲಿಗೂ ಅಕ್ಷಯ ಜೋಳಿಗೆಯಾಗಿ ಮಾರ್ಪಟ್ಟಿದ್ದಾರೆ. ಬೆಳಗ್ಗೆ ಮತ್ತು ಸಾಯಂಕಾಲ ನಗರದ 150ಕ್ಕೂ ಹೆಚ್ಚು ಮನೆಗಳಿಗೆ ಹಾಲು ತಲುಪಿಸುವ ಅವರು, ಅಷ್ಟೇ ಪ್ರಮಾಣದಲ್ಲಿ ದಾನಿಗಳ ನೆರವು ಪಡೆದು ನೂರಾರು ಜನರಿಗೆ ಆಹಾರದ ಪ್ಯಾಕೇಟ್‌ಗಳನ್ನು ಮುಟ್ಟಿಸುವ ಕೆಲಸವನ್ನು ತಮ್ಮ ನಿತ್ಯದ ಕೆಲಸದೊಂದಿಗೆ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಭೂಮಿಯೂ ಇಲ್ಲ, ಆಸ್ತಿಯೂ ಇಲ್ಲ: ಹೊಸಳ್ಳಿ ಕ್ಯಾಂಪಿನ ಅಶೋಕ ನಲ್ಲಾ ಅವರಿಗೆ ಸ್ವಂತ ಭೂಮಿಯೇ ಇಲ್ಲ. ಅವರಿಗೆ ಹಾಲಿನ ವ್ಯಾಪಾರವೇ ಆಧಾರ. ಅಂದಿನ ದುಡಿಮೆಯೇ ಬದುಕಿಗೆ ಆಸರೆ. ನಿತ್ಯ ಬೆಳಗ್ಗೆ 4ಗಂಟೆ ಏಳುವ ಅವರು ಮನೆ-ಮನೆಗೆ ತೆರಳಿ ಹಾಲು ಸಂಗ್ರಹಿಸುತ್ತಾರೆ. ಬಳಿಕ ಬೆಳಗ್ಗೆ 7 ಗಂಟೆಯೊತ್ತಿಗೆ ದ್ವಿಚಕ್ರ ವಾಹನಕ್ಕೆ ಎರಡು ಕ್ಯಾನ್ ನೇತುಹಾಕಿಕೊಂಡು ಮನೆ-ಮನೆಗೂ ತೆರಳಿ, ಹಾಲು ಹಾಕುತ್ತಾರೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ತಪ್ಪದ ದಿನಚರಿಯಿದು.
ಈ ಮಧ್ಯೆಯೂ ತಮ್ಮ ಕೆಲಸದೊಟ್ಟಿಗೆ ಹಸಿದವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಇವರು ಸಂಚಾರಿ ಸೇವಕರಾಗಿದ್ದಾರೆ. ಕೊರಳಲ್ಲಿ ಜೋಳಿಗೆ: ಹೊಟ್ಟೆ ಪಾಡಿಗೆ ಹಾಲಿನ ಕ್ಯಾನ್ ಹೊತ್ತು ತರುವ ಅಶೋಕ ನಲ್ಲಾ ಅವರು, ತಮ್ಮೊಟ್ಟಿಗೆ ನಿತ್ಯವೂ ಬೆಳಗ್ಗೆ ಹಾಗೂ ಸಂಜೆ 20ಕ್ಕೂ ಹೆಚ್ಚು ಅನ್ನದ ಪ್ಯಾಕೇಟ್ ತಂದಿರುತ್ತಾರೆ. ಅವುಗಳನ್ನು ದಾರಿಯಲ್ಲಿ ಕಣ್ಣಿಗೆ ಬೀಳುವ ನಿರ್ಗತಿಕರು, ಅನಾಥರು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ತಲುಪಿಸುತ್ತಲೇ ಸಾಗುತ್ತಾರೆ.
ಸತ್ಯನಾರಾಯಣ ದಾಸರಿ, ನೆಕ್ಕಂಟಿ ಸುರೇಶ್ ಸೇರಿದಂತೆ ಅನೇಕರು ಅನ್ನ ದಾಸೋಹ ನಡೆಸುತ್ತಿದ್ದು, ಅವರೆಲ್ಲರಿಗೂ ಕೂಡ ಅಶೋಕ ನಲ್ಲಾ ಅವರ ನೆರವು ಅಪಾರ. ಅವರ ಸೇವಾ ಕಾರ್ಯದಲ್ಲೂ ಪಾಲ್ಗೊಳ್ಳುವ ಇವರು, ಸತತ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಹಸಿದವರು, ಅನಾಥರ ಕಷ್ಟವನ್ನು ಅರಿತಿರುವ ಅಶೋಕ ನಲ್ಲಾ ಅವರ ಸೇವಾ ವೈಖರಿ, ಬಹುಮುಖೀ ಸೇವೆ ದಾನಿಗಳಿಗೂ ಸೂ #ರ್ತಿಯಾಗಿದ್ದು ಸುಳ್ಳಲ್ಲ.