ಥಿಯೇಟರ್‌ಗಳಲ್ಲಿ 100% ಪ್ರೇಕ್ಷಕರ ಪ್ರವೇಶಾತಿ ಸಿಗುತ್ತಿದ್ದಂತೆ, ಸಹಜವಾಗಿಯೇ ಚಿತ್ರರಂಗದ ಚಿತ್ತ ಬಿಡುಗಡೆಯಾಗಲಿರುವ ಬಿಗ್ ಬಜೆಟ್ ಮತ್ತು ಬಿಗ್ ಸ್ಟಾರ್ ಸಿನಿಮಾಗಳತ್ತ ನೆಟ್ಟಿತ್ತು. ಅದರಂತೆ ಅಕ್ಟೋಬರ್ ತಿಂಗಳಿನಲ್ಲಿ ಮೊದಲು “ಸಲಗ’ ಆನಂತರ “ಕೋಟಿಗೊಬ್ಬ-3′ ಈಗ “ಭಜರಂಗಿ-2′ ತೆರೆಗೆ ಬರುತ್ತಿದೆ.
ನಿರೀಕ್ಷೆಯಂತೆ ಈಗಾಗಲೇ ಬಿಡುಗಡೆಯಾಗಿರುವ ಎರಡೂ ಬಿಗ್ ಬಜೆಟ್‌ನ ಬಿಗ್ ಸ್ಟಾರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸೌಂಡ್ ಮಾಡುತ್ತಿದ್ದು, ಸದ್ಯ ಬಿಡುಗಡೆಯ ಹೊಸ್ತಿಲಲ್ಲಿರುವ “ಭಜರಂಗಿ-2′ ಕೂಡ ರಿಲೀಸ್‌ಗೂ ಮುನ್ನವೇ ಕಮಾಲ್ ಮಾಡುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡುವ ಎಲ್ಲ ಸೂಚನೆಗಳನ್ನು ಮೊದಲೇ ಕೊಟ್ಟಿದೆ. ಹೀಗಿರುವಾಗ ಇನ್ನೇನಿದ್ದರೂ ಚಿತ್ರೋದ್ಯಮದ ಮಂದಿಯ ಚಿತ್ತ ನವೆಂಬರ್ ತಿಂಗಳ ಕಡೆಗೆ.
ಹೌದು, ಅಕ್ಟೋಬರ್ ತಿಂಗಳು ಸ್ಟಾರ್ ಸಿನಿಮಾಗಳಿಂದ ಥಿಯೇಟರ್‌ಗಳು ಜಾಮ್‌ಪ್ಯಾಕ್ ಆಗುವಂತೆ ಮಾಡಿದ್ದು ಸುಳ್ಳಲ್ಲ. ಸ್ಟಾರ್ ಸಿನಿಮಾಗಳ ನಡುವೆಯೇ ಒಂದಷ್ಟು ಹೊಸಬರ ಸಿನಿಮಾಗಳಿಗೂ ಬಿಡುಗಡೆ ಭಾಗ್ಯ ಸಿಕ್ಕಿತ್ತು. ದಸರಾ ಹಬ್ಬದ ಸಂಭ್ರಮ, ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳ ರಿಲೀಸ್, ಥಿಯೇಟರ್ ಲಭ್ಯತೆಯಿಲ್ಲದಿರುವುದು… ಹೀಗೆ ಹಲವು ಕಾರಣಗಳಿಂದ ತಮ್ಮ ಸಿನಿಮಾಗಳನ್ನು ತೆರೆಗೆ ತರಲಾಗದ ಅನೇಕ ನಿರ್ಮಾಪಕರು ನವೆಂಬರ್ ಎರಡನೇ ವಾರದತ್ತ ದೃಷ್ಟಿ ಹರಿಸಿದ್ದಾರೆ.
ಇದನ್ನೂ ಓದಿ:- ದೇಶದಲ್ಲೇ ಆರೆಸ್ಸೆಸ್ ಬಲಿಷ್ಠ ಸಂಘಟನೆ: ದಿಲೀಪ್
ಸದ್ಯದ ಮಟ್ಟಿಗೆ ಅಕ್ಟೋಬರ್ 29ಕ್ಕೆ “ಭಜರಂಗಿ-2′ ರಿಲೀಸ್ ಆಗುತ್ತಿರುವುದರಿಂದ, ನವೆಂಬರ್ ಮೊದಲವಾರ ಕನ್ನಡದಲ್ಲಿ ಯಾವುದೇ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ. ಹಬ್ಬದ ಮೂಡ್ ಜೊತೆಗೆ “ಭಜರಂಗಿ-2′ ಅಬ್ಬರ ಜೋರಾಗಿರುವುದರಿಂದ ಉಳಿದ ಕೆಲವು ಸ್ಟಾರ್ ಮತ್ತು ಬಹುತೇಕ ಹೊಸಬರು ನವೆಂಬರ್ 12ಕ್ಕೆ ಹಾಗೂ 19ಕ್ಕೆ ತಮ್ಮ ಚಿತ್ರವನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಸಖತ್’ ಚಿತ್ರ ನ. 12ಕ್ಕೆ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ.
ಇದಲ್ಲದೆ ಹೊಸಬರ “ಟಾಮ್ ಅಂಡ್ ಜೆರ್ರಿ’, “ಪ್ರೇಮಂ ಪೂಜ್ಯಂ’ ಕೂಡ ಇದೇ ದಿನ ತೆರೆಗೆ ಬರುತ್ತಿವೆ. ಇದಲ್ಲದೆ ಇನ್ನೂ ಕೆಲವು ಚಿತ್ರಗಳ ನಿರ್ಮಾಪಕರು, ವಿತರಕರು ಕೂಡ ನ. 12ಕ್ಕೆ ತಮ್ಮ ಚಿತ್ರಗಳನ್ನು ತೆರೆಗೆ ತರುವ ಯೋಚನೆಯಲ್ಲಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ. ಹಾಗೇನಾದರೂ ನ. 12ಕ್ಕೆ ರಿಲೀಸ್ ಸಾಧ್ಯವಾಗದಿದ್ದರೆ, ನ. 19ರಂದು ಅನೇಕ ನಿರ್ಮಾಪಕರು ಮತ್ತೂಂದು ಆಯ್ಕೆಯನ್ನಾಗಿ ಇಟ್ಟುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಈಗಾಗಲೇ ನ. 19ಕ್ಕೆ ಕನ್ನಡದಲ್ಲಿ “ಗರುಡ ಗಮನ ವೃಷಭ ವಾಹನ’, “100′ ಮತ್ತು “ಮುಗಿಲ್‌ಪೇಟೆ’ ಮೂರು ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.
ಈ ಸಂಖ್ಯೆ ಕೂಡ ಹೆಚ್ಚಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಚಿತ್ರರಂಗದ ಮೂಲಗಳ ಪ್ರಕಾರ ಒಂದಷ್ಟು ಸ್ಟಾರ್, ಮೀಡಿಯಂ ಬಜೆಟ್ ಮತ್ತು ಹೊಸಬರ ಸುಮಾರು ನಲವತ್ತಕ್ಕೂ ಹೆಚ್ಚು ಸಿನಿಮಾಗಳು ನವೆಂಬರ್ ಕೊನೆಗೆ ತೆರೆಗೆ ಬರಬಹುದು ಎಂಬ ಅಂದಾಜಿದೆ. ಈ ಮೂಲಕ ನವೆಂಬರ್ ತಿಂಗಳು ಪೂರ್ತಿ ಸಿನಿರಂಗ ಮತ್ತಷ್ಟು ಆ್ಯಕ್ಟಿವ್ ಆಗಿರಲಿದೆ.