Advertisement

ನೀರು ಕೊಡಿ ಹೋರಾಟಕ್ಕೆ ಬಾಬುಗೌಡ ಬಾದರ್ಲಿ ಧ್ವನಿ

12:07 PM Oct 25, 2021 | Team Udayavani |

ಸಿಂಧನೂರು: ಬಾದರ್ಲಿ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಅವರು ಇತ್ತೀಚೆಗೆ ನೀರಾವರಿ ಸಮಸ್ಯೆಗಳತ್ತ ಚಿತ್ತ ಹರಿಸಲಾರಂಭಿಸಿದ್ದು, ರೈತ ವಲಯದಲ್ಲಿ ಹೊಸ ಆಕಾಂಕ್ಷೆ ಗರಿಗೆದರಿದೆ.

Advertisement

ಕಳೆದ ಎರಡು ವರ್ಷಗಳಿಂದ ಹೈಬ್ರಿಡ್‌ ಜೋಳಕ್ಕೆ ಉತ್ತಮ ಬೆಲೆ ಸಿಕ್ಕ ಹಿನ್ನೆಲೆಯಲ್ಲಿ ಬಹುತೇಕ ರೈತರು ಜೋಳದ ಬೆಳೆ ಹಾಕಿದ್ದು, ನೀರಿನ ಸಮಸ್ಯೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಕೈ ಕೊಟ್ಟಿರುವ ಬಹುಕೋಟಿ ರೂ. ವೆಚ್ಚದ ಏತನೀರಾವರಿ ಯೋಜನೆಗಳು ಹಾಗೂ ಕಾಲುವೆ ಕೊನೆ ಭಾಗದ ರೈತರ ಪರ ಬಾಬುಗೌಡ ಬೀದಿಗಿಳಿಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ­

ಹೋರಾಟಕ್ಕೂ ಸೈ

ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಟ್ಟಿರುವ ಏಷ್ಯಾದಲ್ಲೇ ಅತಿದೊಡ್ಡ ಉಪಕಾಲುವೆ 54ರ ವ್ಯಾಪ್ತಿಗೆ ಒಳಪಡುವ 9ಆರ್‌ ಕಾಲುವೆಯಿಂದ ಕೊನೆಭಾಗಕ್ಕೆ ನೀರು ದೊರೆಯದಿರುವ ಬಗ್ಗೆ ಧ್ವನಿ ಎತ್ತ ರೈತರೊಟ್ಟಿಗೆ ತಹಶೀಲ್‌ ಕಚೇರಿ ಎದುರೇ ಪ್ರತಿಭಟನೆ ನಡೆಸಿದ್ದರು. ರೈತರೇ ಈ ಹಿಂದೆ ಹೈಕೋರ್ಟ್‌ ಮೆಟ್ಟಿಲೇರಿ ಕೊನೆಭಾಗಕ್ಕೆ ನ್ಯಾಯ ಕಲ್ಪಿಸುವಂತೆ ಹೋರಾಟ ಮಾಡಿದ್ದು ಇತಿಹಾಸ. ಆಗಲೂ ಬಹುತೇಕರು ಮೇಲ್ಭಾಗ-ಕೆಳಭಾಗ ರೈತರ ಒತ್ತಡಕ್ಕೆ ಮಣಿದು ಬಹಿರಂಗವಾಗಿ ಧ್ವನಿ ಎತ್ತಲು ಮೀನಮೇಷ ಎಣಿಸಿದ್ದರು. ಆದರೆ, ಬಾಬುಗೌಡ ಬಾದರ್ಲಿ ಅವರು ಎರಡು ದಿನದ ಹಿಂದೆ ತಹಶೀಲ್‌ ಕಚೇರಿ ಎದುರು ಧರಣಿಗೆ ಕುಳಿತು ಕೆಳಭಾಗದ ಜೋಳವನ್ನು ಉಳಿಸುವಂತೆ ಹೋರಾಟ ನಡೆಸಿದ್ದು, ರೈತರಲ್ಲಿ ನಿರೀಕ್ಷೆ ಮೂಡಿಸಿದೆ.

­ಏತನೀರಾವರಿಗೆ ಹೊಸ ಹರಿ

Advertisement

ಸರಕಾರ ಬರೋಬ್ಬರಿ 30 ಕೋಟಿ ರೂ. ವ್ಯಯಿಸಿ ವಳಬಳ್ಳಾರಿ ಚನ್ನಬಸವೇಶ್ವರ ಏತನೀರಾವರಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ. ಇಂತಹ ಯೋಜನೆಯಿಂದ ಇತ್ತೀಚೆಗೆ ಮೋಟರ್‌ ಸಮಸ್ಯೆಯಿಂದ ನೀರು ದೊರೆಯುತ್ತಿರಲಿಲ್ಲ. ಬರೋಬ್ಬರಿ ಆರು ಸಾವಿರ ಎಕರೆ ಜಮೀನಿಗೆ ಪ್ರಯೋಜನ ಇಲ್ಲದಂತಾಗಿತ್ತು. ಬಾದರ್ಲಿ, ಗಿಣಿವಾರ, ಆರ್‌ಎಚ್‌5, ವಳಬಳ್ಳಾರಿ, ಹರೇಟನೂರು ಗ್ರಾಮಸ್ಥರು ನೀರಿಲ್ಲದೇ ಜೋಳದ ಬೆಳೆ ಬಾಡುವ ಭೀತಿಗೆ ಸಿಲುಕಿದ್ದರು. ಶನಿವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಏತನೀರಾವರಿ ಯೋಜನೆಯ ಹಳ್ಳಕ್ಕೆ ಪ್ರತ್ಯೇಕ ಹರಿಯನ್ನು ತೆಗೆದು ನೀರು ಲಿಫ್ಟ್‌ ಮಾಡಿಸಲು ಶ್ರಮಿಸಿದ್ದಾರೆ.

ಇದನ್ನೂ ಓದಿ: ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

ಪಕ್ಷದ ನಡುವೆಯೂ ಪೈಪೋಟಿ

ಬಾಬುಗೌಡ ಬಾದರ್ಲಿ ರೈತರ ಸಮಸ್ಯೆಯನ್ನು ಕೇಂದ್ರೀಕರಿಸಿಕೊಂಡು ಹೋರಾಟಕ್ಕೆ ಮುಂದಾಗುತ್ತಿದ್ದಂತೆ ರಾಜಕೀಯ ವಲಯವೂ ಚುರುಕಾಗಿದೆ. ಮುಂದಿನ ಚುನಾವಣೆ ತಯಾರಿ ಎಂಬ ಮುನ್ಸೂಚನೆಯೂ ರಾಜಕೀಯ ಗದ್ದಲ ಎಬ್ಬಿಸಿದೆ. ಈ ನಡುವೆ ಶಾಸಕರ ಸಹೋದರ ಚಂದ್ರಭೂಪಾಲನಾಡ ಗೌಡ ಅವರು ಕೂಡ ವಳಬಳ್ಳಾರಿಗೆ ಧಾವಿಸಿ ರೈತರ ಸಂಕಷ್ಟ ಆಲಿಸಿದ್ದಾರೆ.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸಹೋದರನ ಪುತ್ರ ಬಾಬುಗೌಡ ಬಾದರ್ಲಿ ಅವರ ರಾಜಕೀಯ ಸಕ್ರಿಯತೆ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ. ನಮ್ಮ ರೈತರು ತುಂಬಾ ಸಮಸ್ಯೆಯಲ್ಲಿದ್ದಾರೆ. ಅವರು ದಿನಾ ಬಂದು ಸಮಸ್ಯೆ ಹೇಳುತ್ತಿದ್ದರೆ, ಏನು ಮಾಡಬೇಕೋ ಗೊತ್ತಾಗದಷ್ಟು ಸಂಕಷ್ಟವಾಗುತ್ತದೆ. ಹೀಗಾಗಿ, ನೇರವಾಗಿ ಹೋರಾಟ ಮತ್ತು ಏತನೀರಾವರಿ ಯೋಜನೆ ಸ್ಥಳಗಳಿಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿರುವೆ. -ಬಾಬುಗೌಡ ಬಾದರ್ಲಿ, ಸಿಂಧನೂರು

ತಪ್ಪಬೇಕಿದೆ ನೀರಿನ ಫಜೀತಿ

ತುಂಗಭದ್ರಾ ಜಲಾಶಯದಿಂದ ನೀರಾವರಿಗೆ ಒಳಪಟ್ಟಿರುವ ಪ್ರದೇಶದಲ್ಲೂ ಒಂದೆರಡು ನೀರಿನ ಮೂಲಕ ಬೆಳೆಯುವ ಮಿತ ನೀರಾವರಿಗೂ ಇತ್ತೀಚೆಗೆ ಸಮಸ್ಯೆಯಾಗಿದೆ. ರೈತರು ಹೈಬ್ರಿಡ್‌ ಜೋಳ ಹಾಕಿದ್ದು, ನೀರು ದೊರಕದ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಿಲುಕಿದ್ದಾರೆ. ಅವರಿಗೆ ಧ್ವನಿಯಾಗಿ ಹೋರಾಟಕ್ಕಿಳಿಯುವ ಮೂಲಕ ರೈತ ಪರ ಬಾಬುಗೌಡ ಬಾದರ್ಲಿ ಕೆಲಸ ಆರಂಭಿಸಿದ್ದು, ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next