ತಾಳಿಕೋಟೆ: ಪಟ್ಟಣದ ಪುರಸಭೆ ಚುನಾವಣೆಗೆ ಸಂಬಂಧಿಸಿ ಮೇ 29ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗೆ ಸಂಬಂಧಿಸಿ ರವಿವಾರ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮತ್ತು ಚಿಹ್ನೆಗಳನ್ನು ಅಳವಡಿಸುವುದರೊಂದಿಗೆ ಅಭ್ಯರ್ಥಿಗಳಿಂದ ಅಣಕು ಮತದಾನ ಮಾಡಿಸಲಾಯಿತು.
ಪಟ್ಟಣದ ಎಸ್.ಕೆ. ಕಾಲೇಜ್‌ನಲ್ಲಿ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರು ಪುರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿರುವ 23 ವಾರ್ಡ್‌ಗಳ ಅಭ್ಯರ್ಥಿಗಳ ಸಭೆ ನಡೆಸಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಇವಿಎಂನಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮತ್ತು ಚಿಹ್ನೆ ಅಳವಡಿಸಿ ಅವರಿಂದಲೇ ಅಣಕು ಮತದಾನ ಮಾಡಿಸುವ ಮೂಲಕ ಇವಿಎಂ ಭದ್ರಗೊಳಿಸಿ ಸ್ಟ್ರಾಂಗ್ ರೂಂಗೆ ಕಳುಹಿಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ತಹಶೀಲ್ದಾರ್ ನಿಂಗಪ್ಪ ಬಿರಾದಾರ, ಪುರಸಭೆ 23 ವಾರ್ಡ್‌ಗಳ ಮತದಾನಕ್ಕೆ 28 ಮತಗಟ್ಟೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಅದರಲ್ಲಿ ವಾರ್ಡ್ ನಂ. 9, 19, 20, 22ಕ್ಕೆ ಅವಿರೋಧ ಆಯ್ಕೆಗೊಂಡಿದ್ದರಿಂದ ಇವುಗಳನ್ನು ಹೊರತು ಪಡಿಸಿ 24 ಮತಗಟ್ಟೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ.
ಚುನಾವಣೆಗೆ ಸಂಬಂಧಿಸಿ ಈಗಾಗಲೇ ಎಲ್ಲ ರೀತಿಯಿಂದಲೂ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ ಪಿಆರ್‌ಒ ಸಿಬ್ಬಂದಿಗಳಿಗೆ ತರಬೇತಿಯನ್ನೂ ಸಹ ನೀಡಲಾಗಿದೆ. ಮೇ 29ರಂದು ಮತದಾನದ ದಿನ ಬೆಳಗ್ಗೆ 7ಕ್ಕೆ ಮೊದಲು ಮತದಾನಕ್ಕೂ ಮುಂಚೆ ಅಭ್ಯರ್ಥಿಗಳಿಗೆ ಇವಿಎಂತಿಳಿವಳಿಕೆ ನೀಡಿ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು.
ಮತದಾನ ಸಮಯದಲ್ಲಿ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗದಂತೆ ನೊಡಿಕೊಳ್ಳಬೇಕು. ಇವಿಎಂ ಮುಂದೆ ಒಬ್ಬರು ಮತದಾನ ಮಾಡುವ ಸಮಯದಲ್ಲಿ ಮತ್ತೂಬ್ಬರು ಹೋಗದಂತೆ ನೋಡಿಕೊಳ್ಳಬೇಕು ಎಂದು ಕಾರ್ಯ ನಿರ್ವಹಿಸುವ 130 ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಮಯದಲ್ಲಿ ಚುನಾವಣಾಧಿಕಾರಿಗಳಾದ ವಿನೋದ ನಾಯಕ, ಜಿ.ವೈ. ಮುರಾಳ, ಎ.ಜಿ. ಗುಜರಿ, ಸೆಕ್ಟರ್ ಆಫಿಸರ್ ಎನ್.ಆರ್. ಉಂಡಿಗೇರಿ, ಪ್ರಶಾಂತ ಶೇವಳಕರ, ಮಾಸ್ಟರ್ ಟ್ರೈನರ್ ನಾಗರಾಜ ಕ್ಷತ್ರಿ ಇದ್ದರು.