Advertisement

ಟ್ವೆಂಟಿ ಟ್ವೆಂಟಿ ಸ್ವಾಗತಕ್ಕೆ ಕಡಲತೀರ ಸಜ್ಜು

02:57 PM Dec 30, 2019 | Suhan S |

ಅಂಕೋಲಾ: ಹೊಸವರ್ಷದ ಸಂಭ್ರಮಾಚರಣೆಗೆ ಆರಂಭವಾಗುತ್ತಿದ್ದಂತೆ ಕರಾವಳಿ ತೀರದ ರೆಸಾರ್ಟ್‌, ಹೋಟೆಲ್‌ಗ‌ಳು ಭರ್ತಿಯಾಗಿವೆ. ರಾಜ್ಯ, ಹೊರರಾಜ್ಯ, ವಿದೇಶಗಳಿಂದ ಜನತೆ ಕರಾವಳಿಯತ್ತ ಹರಿದು ಬರುತ್ತಿದ್ದು, ಹುರುಪಿನಿಂದ ನವ ವರ್ಷ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

Advertisement

ಈಗಾಗಲೇ ಮುಡೇಶ್ವರ, ಅಂಕೋಲಾ, ಗೋಕರ್ಣ ಹಾಗೂ ಕಾರವಾರದ ಬಹುತೇಕ ಲಾಡ್ಜ್ಗಳು, ರೆಸಾರ್ಟ್‌ಗಳು ಭರ್ತಿಯಾಗಿವೆ. ತಿಂಗಳ ಹಿಂದಿನಿಂದಲೇ ಬುಕಿಂಗ್‌ ಆಗಿವೆ. ಇತ್ತೀಚೆಗೆ ರೂಮ್‌ ಕೇಳಿ ಬಂದವರೆಲ್ಲ ನಿರಾಶರಾಗಿ ಮರಳುತ್ತಿದ್ದಾರೆ.

ಮುಂಗಡ ಬುಕ್ಕಿಂಗ್‌: ಗೋವಾದಲ್ಲಿ ಹೊಸ ವರ್ಷ ಆಚರಣೆಗೆ ಎಲ್ಲಿಲ್ಲದ ಬೇಡಿಕೆ. ಕೇವಲ ದೇಶದ ಜನತೆಯಷ್ಟೆ ಅಲ್ಲ, ಬೇರೆ ಬೇರೆ ದೇಶಗಳ ಜನತೆ ಸಹ ಹೊಸ ವರ್ಷದ ಆಚರಣೆಗಾಗಿ ಗೋವಾಕ್ಕೆ ಲಗ್ಗೆ ಇಡುತ್ತಾರೆ. ಆದರೆ ಗೋವಾದಲ್ಲಿ ಆನ್‌ಲೈನ್‌ ಬುಕಿಂಗ್‌ ಇರುವ ಕಾರಣ ಕಳೆದ 2-3 ತಿಂಗಳ ಹಿಂದೆಯೇ ರೂಮ್‌ಗಳನ್ನು ಮುಂಗಡವಾಗಿ ಬುಕಿಂಗ್‌ ಮಾಡಲಾಗಿದೆ. ಇದರಿಂದ ರೂಮ್‌ ಬಯಸಿದವರು ಅಲ್ಲಿ ಲಭ್ಯವಾಗದೇ ಕಾರವಾರದಲ್ಲಿ ರೂಮ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ. ಇದರಿಂದ ಕಾರವಾರದಲ್ಲೂ ರೂಮ್‌ಗಳು ಭರ್ತಿಯಾಗಿದೆ.

ದುಬಾರಿ ದರ: ಕಾರವಾರದಲ್ಲಿ ವಾಸ್ತವ್ಯ ಮಾಡಿದರೆ ಗೋವಾಕ್ಕೆ ಹೋಗಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು. ಕಾರವಾರಕ್ಕೆ ಸಮೀಪದಲ್ಲಿ ಕಾಣಕೋಣ ಹಾಗೂ ಪೋಳೆಂ ಬೀಚ್‌ ಇರುವುದರಿಂದ ಆ ಬೀಚ್‌ ಗೆ ತೆರಳಬಹುದು ಎಂಬುದು ಪ್ರವಾಸಿಗರ ಲೆಕ್ಕಾಚಾರ. ಗೋವಾದ ಲಾಡ್ಜ್ ಹಾಗು ರೆಸಾರ್ಟ್  ಗಳಲ್ಲಿ ದುಬಾರಿ ದರ ತೆರಬೇಕು. ಕಾರವಾರದಲ್ಲಿ ಅದಕ್ಕಿಂತ ಕಡಿಮೆ ಖರ್ಚಿನಲ್ಲಿ ತಂಗಬಹುದು ಎನ್ನುವ ಕಾರಣದಿಂದಲೂ ಕೆಲವರು ಕಾರವಾರದಲ್ಲಿ ವಾಸ್ತವ್ಯ ಮಾಡುತ್ತಾರೆ. ಜಿಲ್ಲೆಯ ಕರಾವಳಿಯ ಬಹುತೇಕ ಲಾಡ್ಜ್ ಹಾಗು ರೆಸಾರ್ಟ್ ಗಳು ಈ ಸೀಸನ್‌ಗೆ ದುಬಾರಿಯಾಗಿದೆ. ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರು ಈಗಾಗಲೇ ಲಗ್ಗೆ ಇಟ್ಟಿದ್ದಾರೆ. ಗೋಕರ್ಣದ ರೆಸಾರ್ಟ್‌ಗಳು, ಲಾಡ್ಜ್ ಗಳು, ಕಾಟೇಜ್‌ ಗಳು, ಲಾಗ್‌ ಹಟ್ಸ್‌ಗಳನ್ನು ಈಗಾಗಲೇ ಜನರು ಕಾಯ್ದಿರಿಸಿದ್ದಾರೆ. ಗೋಕರ್ಣದ ಓಂ ಬೀಚ್‌, ಕುಡ್ಲೆ ಬೀಚ್‌, ಹಾಫ್‌ ಮೂನ್‌ ಬೀಚ್‌ ಹಾಗೂ ಮುಖ್ಯ ಬೀಚ್‌ನ ಸಮೀಪದಲ್ಲಿರುವ ಬಹುತೇಕ ರೆಸಾರ್ಟ್‌ಗಳಲ್ಲಿ ರೂಮ್‌ ಸಿಗುತ್ತಿಲ್ಲ.

ಹೊನ್ನೆಬೈಲ್‌ ಬೀಚ್‌ಗೆ ಜನಸಂದಣಿ: ಅಂಕೋಲಾದ ಹೊನ್ನೆಬೈಲ್‌ ಬೀಚ್‌ಗೆ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಿ ಪ್ರವಾಸಿಗರು ಹೊಸ ವರ್ಷದ ಸಂಭ್ರಮಾಚರಣೆಗೆ ಪಾದ ಬೆಳೆಸಿದ್ದಾರೆ. ಇಲ್ಲಿನ ಕಾಟೆಜ್‌ಗಳು ಸಹ ಭರ್ತಿಯಾಗಿದ್ದು, ಪ್ರವಾಸಿಗರ ಅನೂಕೂಲದಂತೆ ವಿವಿಧ ಮನರಂಜನಾ ಕಾರ್ಯಕ್ರಮ ಕೂಡಾ ಏರ್ಪಡಿಸಲಾಗಿದೆ. ಮುರ್ಡೇಶ್ವರ ಕೂಡಾ ನಾಡಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಸುಂದರವಾದ ಕಡಲ ತೀರ ಹಾಗೂ ಜಗದ್ವಿಖ್ಯಾತ ಶಿವನ ಮೂರ್ತಿ, ಬೃಹತ್‌ ಗಾಳಿಗೋಪುರ ಮತ್ತಿತರ ಆಕರ್ಷಣೆಗಳಿರುವುದರಿಂದ ಜನತೆ ದೌಡಾಯಿಸುತ್ತಿದ್ದಾರೆ. ಮುರ್ಡೇಶ್ವರದಲ್ಲೂ ವಸತಿಗಹಗಳು ಫುಲ್‌ ಆಗಿವೆ.

Advertisement

ಹೆಚ್ಚಿನ ವಹಿವಾಟು ನಿರೀಕ್ಷೆ: ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಪ್ರವಾಸಿ ತಾಣಗಳಲ್ಲಿ ವ್ಯಾಪಾರ ವಹಿವಾಟು ಕೂಡ ಹೆಚ್ಚುತ್ತಿದೆ. ತಾತ್ಕಾಲಿಕ ವ್ಯಾಪಾರಿ ಮಳಿಗೆಗಳೂ ತಲೆಯೆತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಭಧ್ರತೆ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಪ್ರವಾಸಿ ತಾಣಗಳಲ್ಲಿ ಎಸ್ಪಿ ಶಿವಪ್ರಕಾಶ ದೇವರಾಜ ಮಾರ್ಗದರ್ಶನದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಟ್ವೆಂಟಿ ಟ್ವೆಂಟಿ ಸಂಭ್ರಮಕ್ಕೆ ಕರಾವಳಿ ತೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

 

-ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next