Advertisement

ಲೋಕಸಮರ ಮತಬೇಟೆಯಲ್ಲಿ ವಾಗ್ಯುದ್ಧ

01:07 PM Mar 29, 2019 | Team Udayavani |

ಚಾಮರಾಜನಗರ: ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತಕ್ಕೆ ಬಂದರೆ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಧ್ರುವನಾರಾಯಣ ಅವರಿಗೆ ಸಚಿವರಾಗುವ ಅವಕಾಶ ಇರುವುದರಿಂದ ಕ್ಷೇತ್ರದ ಜನತೆ ಅತ್ಯಧಿಕ  ಮತಗಳಿಂದ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಶಾಸಕ ಡಾ.ಎಸ್‌ .ಯತೀಂದ್ರ ಮನವಿ  ಮಾಡಿದರು.

Advertisement

ತಾಲೂಕಿನ ಹರವೆಯಲ್ಲಿ ಬೇಗೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ನಡೆದ ಹರವೆ ಜಿಪಂ  ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಮೋದಿ ಅವರ ರೈತರ ಕಾಳಜಿ ಎಂತಹದ್ದೆಂದು ತಿಳಿದಿದೆ: ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್‌ ಅವರು 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ  ಮಾಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮ ಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹಕಾರ  ಸಂಘದಲ್ಲಿ ರೈತರ ಪಡೆದಿದ್ದ 50 ಸಾವಿರ ರೂ., ಸಾಲ ಮನ್ನಾ ಮಾಡಿದರು.

ಕಾಂಗ್ರೆಸ್‌,  ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು  ರೈತರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಡೆದಿರುವ 1 ಲಕ್ಷ ರೂ., ಸಾಲ ಮನ್ನಾ ಮಾಡಿದ್ದಾರೆ. ಇದು  ನಿಜವಾದ ರೈತರ ಕಾಳಜಿ. ಸುಳ್ಳು ಆಶ್ವಾಸನೆ ನೀಡಿ, ಸಾಲ ಮನ್ನಾ ಮಾಡದ ಮೋದಿ ಸರ್ಕಾರ  ಉದ್ಯಮಿಗಳ ಪರ ಹಾಗೂ ರೈತ ವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದರು.

ಕಾರ್ಯಕರ್ತರೇ ನಮಗೆ ಶಕ್ತಿ, ನರೇಂದ್ರ ಮೋದಿ ಅಲ್ಲ: ಸುಳ್ಳ ಅಶ್ವಾಸನೆ ನೀಡುವ ಹಾಗೂ  ಸಂವಿಧಾನ ವಿರೋಧಿ ಕೋಮುವಾದಿ ಬಿಜೆಪಿ ಯನ್ನು ದೂರವಿಡಬೇಕು. ನರೇಂದ್ರಮೋದಿ ಅವರು  ತಮ್ಮ ಸರ್ಕಾರದ ಸಾಧನೆಗಳನ್ನು 4500ಕೋಟಿ ರೂ. ವೆಚ್ಚ ಮಾಡಿ ಜಾಹೀರಾತುಗಳಲ್ಲಿ ಗಂಟೆಗಟ್ಟಲೇ ಗುಣಗಾನ ಮಾಡಿಸುತ್ತಿದ್ದಾರೆ.

Advertisement

ನಮಗೆ ಪಕ್ಷದ ಕಾರ್ಯಕರ್ತರೇ ನಮ್ಮ  ಶಕ್ತಿಯಾಗಿದ್ದಾರೆಂದರು. ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಸಂಸದ ಆರ್‌.ಧ್ರುವ ನಾರಾಯಣ  ಮಾತನಾಡಿ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಪಡಿಸುವುದು ನನ್ನ  ಗುರಿ.

ಅದಕ್ಕಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಜನತೆ ಮತ್ತೂಮ್ಮೆ ಅವಕಾಶ  ಮಾಡಿಕೊಡಬೇಕೆಂದರು. ಕಾಂಗ್ರೆಸ್‌ ಮುಖಂಡ ಗಣೇಶ್‌ಪ್ರಸಾದ್‌ ಮಾತನಾಡಿ, ಸರಳ,  ಸಜ್ಜನರಾದ ಕಾಂಗ್ರೆಸ್‌ ಅಭ್ಯರ್ಥಿಯಾದ ಧ್ರುವನಾರಾಯಣ ಅವರನ್ನು ಅತ್ಯಧಿಕ ಮತದಿಂದ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.

ಮತ ನೀಡಿ: ಜಿಪಂ ಸದಸ್ಯ ಕೆರೆಹಳ್ಳಿ ನವೀನ್‌ ಮಾತನಾಡಿ, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ದಿ. ಮಹದೇವ ಪ್ರಸಾದ್‌ ಹಾಗೂ ಸಂಸದ ಧ್ರುವನಾರಾಯಣ ಸಾಕಷ್ಟು ಅಬಿವೃದ್ಧಿ ಕೆಲಸ  ಮಾಡಿದರು. ಧ್ರುವನಾರಾಯಣ ಅವರನ್ನು ಮತ್ತೂಮ್ಮೆ ಕ್ಷೇತ್ರದಲ್ಲಿ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಸ್‌.ಸಿ.ಬಸವರಾಜು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ  ಪಿ.ಮರಿಸ್ವಾಮಿ, ಮಾಜಿ ಸಂಸದ ಸಿದ್ದರಾಜು, ಜಿಪಂ ಸದಸ್ಯರಾದ ಬೊಮ್ಮಯ್ಯ, ಚೆನ್ನಪ್ಪ, ಕಾಡಾ  ಮಾಜಿ ಅಧ್ಯಕ್ಷ ನಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುನಿರಾಜು, ಚಾಮುಲ್‌ ನಿರ್ದೇಶಕ  ನಂಜುಂಡ ಪ್ರಸಾದ್‌, ತಾಪಂ ಅಧ್ಯಕ್ಷ ಜಗದೀಶಮೂರ್ತಿ, ಜಿಪಂ ಮಾಜಿ ಅಧ್ಯಕ್ಷ  ಸಿ.ಎ.ಮಹದೇವಶೆಟ್ಟಿ, ಹರವೇ ಆನಂದ್‌, ಗುರು ಪಾದಸ್ವಾಮಿ, ರಾಮಚಂದ್ರ, ಎಂ.ಶಿವಮೂರ್ತಿ,  ಮುಕ್ಕಡ ಹಳ್ಳಿ ರವಿಕುಮಾರ್‌, ಉದಯಕುಮಾರ್‌, ಪು.ಶ್ರೀನಿವಾಸ ನಾಯಕ, ರೇವಣ್ಣ ಕಲ್ಮಳ್ಳಿ  ಶಿವಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next