Advertisement

ಬಿಜೆಪಿ ಸೋಲಿಸಲು ಯಾವ ಮೈತ್ರಿಗೂ ಸಿದ್ಧ

02:08 PM Oct 16, 2018 | |

ಬೆಂಗಳೂರು: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸುವುದೇ ಮೈತ್ರಿ ಪಕ್ಷದ ಗುರಿ, ಅದಕ್ಕಾಗಿ ಕಾಂಗ್ರೆಸ್‌ ಯಾವ ಮೈತ್ರಿಗೂ ಸಿದ್ಧವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿಯ ದುರಾಡಳಿತವನ್ನು ತಡೆಯಲು ರಾಜ್ಯದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೊಂದೆ ನಮ್ಮ ಗುರಿ ಹೀಗಾಗಿ ಶಿವಮೊಗ್ಗದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಸಮರ್ಥಿಸಿಕೊಂಡರು. 

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 4.5 ಲಕ್ಷ ಮತ ಪಡೆದು ಎರಡನೇ ಸ್ಥಾನದಲ್ಲಿತ್ತು. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಮತದಾರರಿದ್ದಾರೆ. ಆದರೆ, ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪುತ್ರನನ್ನು ಸೋಲಿಸಲು ಎರಡೂ ಪಕ್ಷಗಳ ಒಮ್ಮತದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವುದು ಮುಖ್ಯವಾಗಿತ್ತು. ಹೀಗಾಗಿ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ಒಪ್ಪಂದ ಉಪ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಕ್ಷೇತ್ರ ಹಂಚಿಕೆ ಕುರಿತು ಯಾವುದೇ ಮಾತುಕತೆಯಾಗಿಲ್ಲ. ಲೋಕಸಭಾ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಇರುವುದರಿಂದ ಆ ಸಂದರ್ಭದಲ್ಲಿಯೇ ಕ್ಷೇತ್ರಗಳ ಹಂಚಿಕೆ ಮಾಡಿಕೊಳ್ಳಲಾಗುವುದು.

ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡುವುದರಿಂದ ಕಾಂಗ್ರೆಸ್‌ ಅಸ್ಥಿತ್ವಕ್ಕೆ ಯಾವುದೇ ಧಕ್ಕೆಯಿಲ್ಲ. ದೇಶದ ಸಧ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಹೀಗಾಗಿ ಕಾರ್ಯಕರ್ತರೂ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.

Advertisement

ಇದೇ ವೇಳೆ, ಐದು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಕಾಂಗ್ರೆಸ್‌ನಿಂದ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಶಿವಮೊಗ್ಗಕ್ಕೆ ಆರ್‌.ವಿ.ದೇಶಪಾಂಡೆ, ಮಂಡ್ಯಕ್ಕೆ ಕೆ.ಜೆ. ಜಾರ್ಜ್‌, ಬಳ್ಳಾರಿಗೆ ಡಿ.ಕೆ.ಶಿವಕುಮಾರ್‌, ಜಮಖಂಡಿಗೆ ಡಿಸಿಎಂ ಪರಮೇಶ್ವರ್‌, ರಾಮನಗರಕ್ಕೆ ಸಂಸದ ಡಿ.ಕೆ.ಸುರೇಶ್‌ ಅವರನ್ನು ನೇಮಿಸಲಾಗಿದೆ. ಅವರೊಂದಿಗೆ ಪಕ್ಷದ ಸಚಿವರು, ಶಾಸಕರು ಹಾಗೂ ಸಂಸದರನ್ನೂ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next