ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಜೆಡಿಎಸ್‌ನ ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್ ಭೇಟಿ ಮಾಡಿರುವುದು ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ನಡೆದಿರುವ ಈ ಭೇಟಿ ಚರ್ಚೆಗೆ ಗ್ರಾಸವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಜಿ.ಟಿ.ದೇವೇಗೌಡರು ಸಿದ್ದರಾಮಯ್ಯನವರ ಜೊತೆ ಮುನಿಸಿಕೊಂಡು ಜೆಡಿಎಸ್ ಸೇರಿರುವ ಎಚ್.ವಿಶ್ವನಾಥ್ ಜತೆಗೂಡಿ ಶ್ರೀನಿವಾಸಪ್ರಸಾದ್ ಅವರ ಜತೆ ಮೈಸೂರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದು, ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದರೆ ಬೆಂಬಲಿಸುವುದಾಗಿಯೂ ಶ್ರೀನಿವಾಸಪ್ರಸಾದ್
ಭರವಸೆ ನೀಡಿದ್ದಾರೆ. ನಾವು ಮೂವರೂ ಒಂದಲ್ಲಾ ಒಂದು ರೀತಿ ಸಿದ್ದರಾಮಯ್ಯ ಅವರಿಂದ ತೊಂದರೆಗೊಳಗಾಗಿರುವವರೇ. ಎಲ್ಲರೂ ಒಗ್ಗಟ್ಟಾಗಿ ಸಿದ್ದರಾಮಯ್ಯನವರ ಸೋಲಿಗೆ ಪ್ರಯತ್ನಿಸೋಣ ಎಂದು ಹೇಳಿದರು ಎನ್ನಲಾಗಿದೆ.
ಮತ್ತೂಂದು ಮೂಲಗಳ ಪ್ರಕಾರ, ಶ್ರೀನಿವಾಸಪ್ರಸಾದ್ ಅವರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನವಾಗಿ ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್ ಹೋಗಿದ್ದರು. ಚರ್ಚೆ ಸಂದರ್ಭದಲ್ಲಿ ಆ ವಿಚಾರವೂ ಪ್ರಸ್ತಾಪವಾಯಿತು. ಆದರೆ, ಶ್ರೀನಿವಾಸಪ್ರಸಾದ್ ಬಿಜೆಪಿ ಬಿಟ್ಟು ಬರುವ ಮನಸ್ಸಿಲ್ಲ ಎಂದರೆಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಅವರು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದರು. ಮತ್ತೂಂದೆಡೆ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ತಾರೆ ಎಂಬ ವದಂತಿ ಹಬ್ಬಿತ್ತು. ಸುದ್ದಿಗೋಷ್ಠಿ ನಡೆಸಿದ ಜಿ.ಟಿ.ದೇವೇಗೌಡ ಸಿಎಂ ವಿರುದ್ಧ ಹರಿಹಾಯ್ದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬನ್ನಿ ಸೋಲಿಸಿ ಕಳುಹಿಸುತ್ತೇನೆ ಎಂದು ಸವಾಲು ಹಾಕಿದ್ದರು. ಇದಾದ ನಂತರ ಎಚ್.ವಿಶ್ವನಾಥ್ ಜತೆಗೂಡಿ ವಿ.ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ
ನೀಡಿ ಮೂವರೂ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.