Advertisement

ದೇಗುಲಗಳು, ಆರ್‌ಎಸ್‌ಎಸ್‌ ಕಚೇರಿ ಮೇಲೆ 26/11 ಮಾದರಿ ದಾಳಿಗೆ ಐಸಿಸ್‌ ಸಂಚು

10:10 PM Oct 09, 2023 | Team Udayavani |

ನವದೆಹಲಿ: ಪ್ರಸಿದ್ಧ ದೇಗುಲಗಳು ಹಾಗೂ ಆರ್‌ಎಸ್‌ಎಸ್‌ ಸೇರಿದಂತೆ ಬಲಪಂಥೀಯ ಸಂಘಟನೆಗಳ ಕಚೇರಿಗಳ ಮೇಲೆ 26/11 ಮಾದರಿ ದಾಳಿ ನಡೆಸಲು ಐಸಿಸ್‌ ಉಗ್ರರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರ ತಿಳಿದುಬಂದಿದೆ.

Advertisement

ದೆಹಲಿ ಪೊಲೀಸರಿಂದ ಬಂಧಿತನಾದ ಐಸಿಸ್‌ ಉಗ್ರ ಶಹನವಾಜ್‌ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ. “ದೆಹಲಿ, ಲಕ್ನೋ, ರುದ್ರಪ್ರಯಾಗ, ನೂಹ್‌ ಮತ್ತು ಮೇವತ್‌ನಲ್ಲಿ ಬಾಂಬ್‌ ಸ್ಫೋಟದ ಪರೀಕ್ಷೆ ನಡೆಸಿದ್ದೆವು. ಆದರೆ ನಮ್ಮ ಯೋಜನೆ ಜಾರಿಗೊಳಿಸುವ ಮುನ್ನ ಪೊಲೀಸರಿಂದ ಬಂಧನಕ್ಕೆ ಒಳಗಾದೆವು’ ಎಂದು ವಿಚಾರಣೆ ವೇಳೆ ಶಹನವಾಜ್‌ ತಿಳಿಸಿದ್ದಾನೆ.

“ಆಹಮದಾಬಾದ್‌, ಸೂರತ್‌, ಬರೋಡಾ, ಹೀಗೆ ಆರ್‌ಎಸ್‌ಎಸ್‌ ಸೇರಿದಂತೆ ಹಿಂದೂ ಸಂಘಟನೆಗಳ 15 ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದೆ. ಬಲಪಂಥೀಯ ಸಂಘಟನೆಗಳು ಮತ್ತು ನಾಯಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದೆವು’ ಎಂದಿದ್ದಾನೆ.

ಶಹನವಾಜ್‌ ದೆಹಲಿ ನಿವಾಸಿಯಗಿದ್ದು, ಎನ್‌ಐಟಿ ನಾಗ್ಪುರದಿಂದ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾನೆ. ಈತನ ತಂದೆ ಹಜಾರಿಬಾಗ್‌ನಲ್ಲಿ ಶಿಕ್ಷಕರಾಗಿದ್ದಾರೆ.

“ಧಾರ್ಮಿಕ ಉಪನ್ಯಾಸಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೆ. ಈ ವೇಳೆ ಉಗ್ರ ರಿಜ್ವಾನ್‌ನ ಭೇಟಿಯಾಯಿತು. ನಂತರ ಐಸಿಸ್‌ ಸಂಘಟನೆ ಪರ ಒಲವು ಬೆಳೆಸಿಕೊಂಡೆ. 2019-20ರಲ್ಲಿ ವಿದೇಶಿ ಉಗ್ರನಿಂದ ಆನ್‌ಲೈನ್‌ ತರಗತಿಗಳ ಮೂಲಕ ನಾನು ಮತ್ತು ರಿಜ್ವಾನ್‌ ಸುಧಾರಿತ ಸ್ಫೋಟಕ ಸಾಧನ(ಐಇಡಿ) ತಯಾರಿಕೆ ಕಲಿತೆವು. ನಂತರ ಇದರ ಪರೀಕ್ಷೆಯನ್ನು ಐದು ಸ್ಥಳಗಳಲ್ಲಿ ನಡೆಸಿದೆವು’ ಎಂದು ವಿಚಾರಣೆ ವೇಳೆ ಶೆಹನವಾಜ್‌ ತಿಳಿಸಿದ್ದಾನೆ.

Advertisement

“ಸುರಕ್ಷಿತ ಅಡಗುತಾಣಗಳಿಗಾಗಿ ಹುಡುಕಾಟ ನಡೆಸಿದೆವು. ನಮ್ಮ ಸಹ ಉಗ್ರರು ಪುಣೆಯಲ್ಲಿ ಬಂಧಿತರಾದಾಗ, ನಾನು ಮತ್ತು ರಿಜ್ವಾನ್‌ ದೆಹಲಿಗೆ ಪರಾರಿಯಾದೆವು. ಇನ್ನೊಂದೆಡೆ, ಭಾರತದಲ್ಲಿ ಐಸಿಸ್‌ ತರಬೇತಿ ಶಿಬಿರಗಳನ್ನು ನಡೆಸಲು ಸುರಕ್ಷಿತ ಸ್ಥಳವನ್ನು ಹುಡುಕುವ ಟಾಸ್ಕ್ ನನಗೆ ನೀಡಲಾಗಿತ್ತು. ಐಸಿಸ್‌ಗೆ ನೇಮಕಾತಿಯನ್ನು ನನ್ನ ಮೇಲಿನವರು ನಡೆಸುತ್ತಿದ್ದರು’ ಎಂದು ವಿವರಿಸಿದ್ದಾನೆ.

“ಹಬ್ಬದ ಸಂದರ್ಭದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದೆವು. ಇದಕ್ಕಾಗಿ ಸ್ಥಳಗಳ ಮಾಹಿತಿ ಕಲೆ ಹಾಕಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಹಿಂದೂ ನಾಯಕರು ಹಾಗೂ ಯಹೂದಿಯರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದವು. ಅಲ್ಲದೇ ಉಗ್ರ ಸಂಘಟನೆಯಾದ ಇಂಡಿಯನ್‌ ಮುಜಾಹಿದ್ದೀನ್‌ನೊಂದಿಗೆ ಸಂಪರ್ಕದಲ್ಲಿ ಇದ್ದೆವು’ ಎಂದು ಪೊಲೀಸರ ವಿಚಾರಣೆ ವೇಳೆ ಶಹನವಾಜ್‌ ಬಾಯ್ಬಿಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next