Advertisement
ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಫೆ.18ರಂದು ಬೆಳಗ್ಗೆ 11.30ಕ್ಕೆ ಪಾಲಿಕೆಯ 2019-20ನೇ ಸಾಲಿನ ಆಯವ್ಯಯ ಮಂಡನೆಯಾಗಲಿದ್ದು, ಪ್ರಮುಖವಾಗಿ ಪಾಲಿಕೆ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ ಎಂದು ಹೇಳಲಾಗಿದೆ.
Related Articles
Advertisement
ಮಹಿಳಾ ಪರ ಕಾರ್ಯಕ್ರಮಗಳಿಗೆ ಒತ್ತು: ಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧಕ್ಷರು ಇಬ್ಬರೂ ಮಹಿಳೆಯರೇ ಆಗಿರುವುದರಿಂದ ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಕಾರ್ಯಕ್ರಮಗಳು ಘೋಷಣೆಯಾಗಲಿವೆ. ಪ್ರಮುಖವಾಗಿ ಮಹಿಳೆಯರನ್ನು ಸ್ವವಲಂಬಿಗಳನ್ನಾಗಿಸುವ ಉದ್ದೇಶದಿಂದ ಪ್ರತಿವಾರ್ಡ್‌ನಲ್ಲಿ 20 ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್, ಮಹಿಳಾ ಉದ್ಯಮಿಗಳಿಗೆ ಕಿರು ಸಾಲದಂತ ಯೋಜನೆಗಳು ಬಜೆಟ್‌ನಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ.
ಸಿದ್ಧಗಂಗಾ ಶ್ರೀಗಳ ಹೆಸರಲ್ಲಿ ಯೋಜನೆ: ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ ಹೆಸರಿನಲ್ಲಿ ಅನ್ನ ಅಥವಾ ಶಿಕ್ಷಣ ದಾಸೋಹಕ್ಕೆ ಸಂಬಂಧಿಸಿದಂತೆ ಶಾಶ್ವತವಾದ ಯೋಜನೆ ಬಜೆಟ್‌ನಲ್ಲಿ ಘೋಷನೆಯಾಗಲಿದೆ. ಜತೆಗೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆಯೊಂದಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಅನುದಾನ ನೀಡುವ ಬಗ್ಗೆಯೂ ಯೋಜನೆ ಘೋಷನೆಯಾಗುವ ನಿರೀಕ್ಷೆಯಿದೆ.
ಹೆಚ್ಚಿನ ಕಲ್ಯಾಣ ಕಾರ್ಯಕ್ರಮಗಳಿಲ್ಲ?: ಕಳೆದ ನಾಲ್ಕು ವರ್ಷಗಳಲ್ಲಿ ಮೈತ್ರಿ ಆಡಳಿತವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹತ್ತಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದರೆ, ಪರಿಣಾಮಕಾರಿಯಾಗಿ ಯೋಜನೆಗಳು ಜಾರಿಯಾಗಿಲ್ಲ ಎಂಬ ದೂರುಗಳು ಪ್ರತಿವರ್ಷ ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಶೀಘ್ರ ಜಾರಿಯಾಗುವ ಕಲ್ಯಾಣ ಕಾರ್ಯಕ್ರಮಗಳನ್ನು ಮಾತ್ರ ಘೋಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರಿ ಯೋಜನೆಗಳ ಘೋಷಣೆ: ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಅನುಷ್ಟಾನಗೊಳಿಸುವ ಯೋಜನೆಗಳನ್ನು ಬಿಬಿಎಂಪಿ ಬಜೆಟ್‌ನಲ್ಲಿ ಸೇರಿಸಲಾಗಿದೆ. ರಾಜ್ಯ ಸರ್ಕಾರದ ನವ ಬೆಂಗಳೂರು ನಿರ್ಮಾಣ ಕ್ರಿಯಾ ಯೋಜನೆ ಜಾರಿ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖೀಸಲಾಗುತ್ತಿದೆ. ವೈಟ್‌ಟಾಪಿಂಗ್, ಟೆಂಡರ್‌ಶ್ಯೂರ್ ರಸ್ತೆಗಳ ನಿರ್ಮಾಣ, ಪ್ರಮುಖ ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್‌ಗಳ ನಿರ್ಮಾಣ ಸೇರಿ ಇನ್ನಿತರ ಭಾರಿ ಯೋಜನೆಗಳು ಘೋಷಣೆಯಾಗಲಿವೆ.
ಕಟ್ಟಡಗಳು ಶಿಥಿಲಗೊಂಡು ಬಿದ್ದು ಹೋಗುವ ಪರಿಸ್ಥಿತಿಯಲ್ಲಿರುವ ಪಾಲಿಕೆಯ ಶಾಲ-ಕಾಲೇಜುಗಳ ದುರಸ್ಥಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷನೆಯಾಗುವ ಸಾಧ್ಯತೆಯಿದೆ. ಜತೆಗೆ ವಿದ್ಯಾರ್ಥಿಗಳ ಭದ್ರತೆಗಾಗಿ ವಿಶೇಷ ಯೋಜನೆ ರೂಪಿಸಿದ್ದು, ಮೈಕ್ರೋಸಾಫ್ಟ್ ಸಹಯೋಗದಲ್ಲಿ ಅನುಷ್ಠಾನವಾಗುತ್ತಿರುವ ಬಿಬಿಎಂಫಿ ರೋಶಿನಿ ಯೋಜನೆಗೆ ಪೂರಕವಾಗಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಸಿಗಲಿದೆಯೇ ಎಂಬುದು ನೋಡಬೇಕಿದೆ.
ಕ್ವಾರಿ ಸುತ್ತಲಿನ ಗ್ರಾಮಗಳಿಗೆ ಬಂಪರ್: ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕ್ವಾರಿಯ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಬೆಳ್ಳಹಳ್ಳಿ ಕ್ವಾರಿಯ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಭರಪೂರ ಅನುದಾನ ಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸುಧಾರಣಾ ಶುಲ್ಕ ಸಂಗ್ರಹಕ್ಕೆ ಆದ್ಯತೆ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಂದಾಯ ನಿವೇಶನಗಳಿಗೆ ಪಾಲಿಕೆಯಿಂದ ಖಾತಾ ಮಾಡಿಕೊಡುವ ಮೂಲಕ ಸುಧಾರಣಾ ಶುಲ್ಕ ಸಂಗ್ರಹಿಸುವ ಮಹತ್ವದ ಯೋಜನೆ ಘೋಷಣೆಯಾಗಲಿದ್ದು, ಇದರಿಂದಾಗಿ ಪಾಲಿಕೆಗೆ ನೂರಾರು ಕೋಟಿ ರೂ. ವರಮಾನ ಬರಲಿದೆ ಎಂದು ಅಂದಾಜಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳೆದ ಬಜೆಟ್ ಜಸ್ಟ್ ಪಾಸ್ ಆಗಿಲ್ಲ!: ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ನಿರ್ಲಕ್ಷ್ಯ ಹಾಗೂ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ 2018-19ನೇ ಸಾಲಿನ ಬಜೆಟ್‌ನಲ್ಲಿದ್ದ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಅಧಿಕಾರಿಗಳ ಮಾಹಿತಿಯಂತೆ ಶೇ.55ರಷ್ಟು ಬಜೆಟ್ ಮಾತ್ರ ಅನುಷ್ಠಾವಾಗಿದೆ ಎಂದು ಹೇಳಲಾಗಿದ್ದು, ಪಾಲಿಕೆಯ ಘೋಷಿಸಲು ಮುಂದಾಗಿರುವ ಬೃಹತ್ ಗಾತ್ರ ಬಜೆಟ್ ಸಮರ್ಪಕವಾಗಿ ಅನುಷ್ಠಾನವಾಗುವುದೇ ಕಾದು ನೋಡಬೇಕಿದೆ.