Advertisement

ನೆಡುತೋಪು ನಿರ್ಮಾಣಕ್ಕೆ ಸಜ್ಜು

12:42 PM May 26, 2019 | Team Udayavani |

ಕಾರವಾರ: ಪ್ರಸಕ್ತ ಸಾಲಿನಲ್ಲಿ 1185 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ನೆಡುತೋಪು ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಜ್ಜಾಗಿದೆ ಎಂದು ಕಾರವಾರ ವಲಯದ ಡಿಎಫ್‌ಓ ವಸಂತ ರೆಡ್ಡಿ ಹೇಳಿದರು.

Advertisement

ಅವರು ಕಾರವಾರದ ಸಾಲುಮರದ ತಿಮ್ಮಕ್ಕ ವನದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಕಾರವಾರ ವಲಯದಲ್ಲಿ 2018-19ನೇ ಸಾಲಿನಲ್ಲಿ ಮುಂಗಡ ಕಾಮಗಾರಿ ಕೈಗೊಂಡು ನರ್ಸರಿಗಳಲ್ಲಿ 13,743 ಲಕ್ಷ ಪಾಲಿಥಿನ್‌ ಚೀಲಗಳಲ್ಲಿ ಸಸಿಗಳನ್ನು ಬೆಳಸಿಕೊಳ್ಳಲಾಗಿದೆ. ಈ ಸಸಿಗಳನ್ನು ಎಂಎಂಎಸ್‌ವಿ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಗೂ ಶಾಲೆಗಳಿಗೆ ವಿತರಿಸಲಾಗುವುದು. 4200 ಸಸಿಗಳನ್ನು ಆರ್‌ಎಸ್‌ಪಿ ಯೋಜನೆಯಡಿ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ರೈತರಿಗೆ ವಿತರಿಸಲು 29700 ಸಸಿಗಳನ್ನು ಮತ್ತು ಹಸಿರು ಕರ್ನಾಟಕ ಯೋಜನೆಯಡಿ ವನಮಹೋತ್ಸವ ಕಾರ್ಯಕ್ರಮಗಳಿಗೆ ಬಳಸಲಾಗುವುದು. 71500 ಸಸಿಗಳನ್ನು ವಿತರಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ 4.92 ಕಿ.ಮೀ. ಉದ್ದದ ರಸ್ತೆ ಬದಿ ಮಾನ್ಸೂನ್‌ ನೆಡುತೋಪು ಹಾಗೂ 3.03 ಕಿ.ಮೀ. ನಗರ ಪ್ರದೇಶದಲ್ಲಿ ಮಾನ್ಸೂನ್‌ ನೆಡುತೋಪು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

2018-19 ಸಾಲಿಗೆ ಸಿಎಸ್‌ಎಸ್‌ ಮ್ಯಾಂಗ್ರೋವ್‌ ಯೋಜನೆಯಡಿ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ 10 ಸೋಲಾರ್‌ ವಾಟರ್‌ ಹೀಟರ್‌, 60 ಎಲ್ಪಿಸಿ ಸೌಲಭ್ಯ ಹಾಗೂ ಮೀನುಗಾರರಿಗೆ ಆದಾಯ ಚಟುವಟಿಕೆಗೆ ಬಲೆಗಳನ್ನು ವಿತರಿಸಲಾಗಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡಗಳ ಫಲಾನುಭವಿಗಳಿಗೆ 395 ಜೇನು ಪೆಟ್ಟಿಗೆಗಳನ್ನು ಹಾಗೂ 130 ಫಲಾನುಭವಿಗಳಿಗೆ ಎಲ್ಪಿಜಿ ರೀಫಿಲ್ಲಿಂಗ್‌ ಸೌಲಭ್ಯ ಒದಗಿಸಲಾಗಿದೆ. ಅವರಿಗೆ ಬಳಕೆಯ ತರಬೇತಿ ಸಹ ಹಮ್ಮಿಕೊಳ್ಳಲಾಗಿತ್ತು ಎಂದು ವಸಂತ ರೆಡ್ಡಿ ವಿವರಿಸಿದರು.

ಕಾರವಾರ ಕೋಡಿಭಾಗ ವಲಯದಲ್ಲಿ 16 ಹೆಕ್ಟೇರ್‌ ಪ್ರದೇಶದಲ್ಲಿ ನಗರ ವಾಸಿಗಳಿಗೆ ಉತ್ತಮ ಪರಿಸರ ಮತ್ತು ಮಕ್ಕಳಿಗೆ ಅರಣ್ಯ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಸಾಲು ಮರದ ತಿಮ್ಮಕ್ಕ ವನ ರೂಪಿಸಲಾಗಿದೆ. ಇದಕ್ಕಾಗಿ 89.180 ಲಕ್ಷ ರೂ. ವೆಚ್ಚವಾಗಿದೆ. ಅಂಕೋಲಾ ತಾಲೂಕಿನಲ್ಲಿ ಸಸ್ಯೋದ್ಯಾನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರೆಡ್ಡಿ ವಿವರಿಸಿದರು. ಕಾರವಾರ ಅರಣ್ಯ ವಿಭಾಗ 1943ರಲ್ಲಿ ವೆಸ್ಟರನ್‌ ಡಿವಿಜನ್‌ ಆಗಿ ಅಸ್ತಿತ್ವಕ್ಕೆ ಬಂದಿದೆ. ಈ ವಿಭಾಗದ ಭೌಗೋಳಿಕ ಕ್ಷೇತ್ರ 1370.735 ಸ್ಕ್ವಯರ್‌ ಕಿ.ಮೀ.ಇದೆ. ಒಟ್ಟು ಅರಣ್ಯ ಪ್ರದೇಶ 1001.3117 ಸ್ಕ್ವಯರ್‌ ಕಿ.ಮೀ.ನಷ್ಟಿದೆ ಎಂದರು. ಕಾರವಾರ ಅಂಕೋಲಾ ತಾಲೂಕಿನಲ್ಲಿ 129 ಹಳ್ಳಿಗಳಿದ್ದು, ಕಾರವಾರ,ಗೋಪಿಶಿಟ್ಟಾ, ಕದ್ರಾ,ಅಂಕೋಲಾ, ಮಾಸ್ತಿಕಟ್ಟಾ, ರಾಮನಗುಳಿ ಸೇರಿ 6 ವಲಯಗಳಿವೆ. ಕೋಸ್ಟಲ್ ಏರಿಯಾ ವ್ಯಾಪ್ತಿಗೆ ಎರಡು ವಲಯ ಬರುತ್ತವೆ. ಉಳಿದವು ಪಶ್ಚಿಮಘಟ್ಟ ವಲಯದಲ್ಲಿ ಬರುತ್ತವೆ. ಕದ್ರಾ, ಹಟ್ಟಿಕೇರಿ ಮರ ಮಟ್ಟು ಸಂಗ್ರಹಾಲಯಗಳಾಗಿವೆ ಎಂದರು. ಇಲ್ಲಿ ಜನರು ಅರಣ್ಯ ರಕ್ಷಿಸಿದ್ದಾರೆ. ಅರಣ್ಯ ಜನರನ್ನು ರಕ್ಷಿಸಿದೆ. ಆದರೂ ಗಂಗಾವಳಿ ನದಿ ಬತ್ತಿದ ಸ್ಥಿತಿ ಇದೆ. 2000 ಮಿಲಿ ಮೀಟರ್‌ ಮಳೆ ಬರುವ ಪ್ರದೇಶದಲ್ಲಿ ನದಿ ಬತ್ತುವ ಸ್ಥಿತಿ ಬಂದದ್ದು ಯಾಕೆ ಎಂದು ಅಧ್ಯಯನ ಮಾಡಬೇಕಿದೆ ಎಂದರು. ಕೋಲಾರ ಜಿಲ್ಲೆಯಂತೆ ಇಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಕೊಡುವ ಸನ್ನಿವೇಶ ನಿರ್ಮಾಣವಾಗಿದೆ. ಇದನ್ನು ಗಂಭೀರವಾಗಿ ಯೋಚಿಸಬೇಕಿದೆ. ಅರಣ್ಯ ಬೆಳೆಸಬೇಕಿದೆ ಎಂದರು. ಎಸಿಎಫ್‌ ಮಂಜುನಾಥ ನಾವಿ, ಅಂಕೋಲಾ ಎಸಿಎಫ್‌ ನಂಜುಂಡಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next