ಹೂವಿನಹಡಗಲಿ: ವಿದ್ಯಾರ್ಥಿಗಳು ವಾಸ್ತವಿಕ ಪ್ರಜ್ಞೆ ಬೆಳೆಸಿಕೊಂಡು ಗುರು-ಹಿರಿಯರನ್ನು ಗೌರವಿಸಿ ಬದುಕು ಹಸನಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಎಂ.ಪಿ.ಎಂ. ದಯಾನಂದಸ್ವಾಮಿ ಹೇಳಿದರು. ಪಟ್ಟಣದ ಜಿಬಿಆರ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಂಘದ ಸಾಂಸ್ಕ್ರತಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ದತ್ತಿನಿಧಿ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ನಮ್ಮ ನೆಲ-ಜಲ ಪರಿಸರ, ಸಾಂಸ್ಕೃತಿಕ ಹಿರಿಮೆ ಅರಿಯಬೇಕು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಓದು ಮತ್ತು ಬರಹ ಕೌಶಲ ರೂಢಿಸಿಕೊಳ್ಳಬೇಕು. ನಿರ್ದಿಷ್ಟ ಗುರಿ ತಲುಪಲು ಕಠಿಣ ಪರಿಶ್ರಮದ ಅಭ್ಯಾಸವಿಲ್ಲದಿದ್ದರೆ ಗುರಿ ಮುಟ್ಟುವುದು ಕಷ್ಟ ಎಂದರು. ಆಧುನಿಕ ಬದುಕಿನ ಎಲ್ಲ ಸೌಲತ್ತುಗಳನ್ನು ಬಳಸಿಕೊಳ್ಳಬೇಕು. ಹೊರತು ಅವುಗಳ ದಾಸರಾಗಬಾರದು. ಸಂಸ್ಕಾರವಿಲ್ಲದ ಜೀವನಕ್ಕೆ ಅರ್ಥವಿಲ್ಲ, ಒಳ್ಳೆಯ ನಡೆ-ನುಡಿ ಮನೆಯಿಂದ, ಶಾಲೆಗಳಿಂದ ಆರಂಭವಾಗುತ್ತವೆ. ಏನೂಯಿಲ್ಲದ ಜನರು ಏನೆಲ್ಲ ಸಾಧನೆ ಮಾಡಿದ್ದಾರೆ. ಅಂತವರು ನಿಮಗೆ ದಾರಿದೀಪವಾಗಬೇಕು. ಓದು ಬರಹ ನಿಮ್ಮ ಜೀವನಕ್ಕೆ ಭದ್ರ ಬುನಾದಿಯಾಗಲಿ ಎಂದರು.
ವೀ.ವಿ ಸಂಘದ ಮಾಜಿ ಸಹಕಾರ್ಯದರ್ಶಿ ಐಗೋಳ ಚಿದಾನಂದ ಮಾತನಾಡಿ, ಪಠ್ಯಕ್ಕೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ವೀ.ವಿ. ಸಂಘ ಎಲ್ಲ ರೀತಿಯ ಆಧುನಿಕ ಸೌಕರ್ಯ ಕಲ್ಪಿಸಿದೆ. ಅವುಗಳನ್ನು ಬಳಸಿ ಕೊಂಡು ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯ ಕಲ್ಪಿಸಿದ್ದೇವೆ. ಉತ್ತಮ ಅಭ್ಯಾಸದಿಂದ ಕಾಲೇಜಿಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯ ಹೆಸರನ್ನು ತರಲು ಶ್ರಮಿಸಿ ಎಂದರು.
ಕಾಲೇಜು ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಸಿ.ಮೋಹನರೆಡ್ಡಿ, ಪ್ರಾಚಾರ್ಯರಾದ ಎಸ್.ಎಸ್.ಪಾಟೀಲ್, ಶ್ರೀನಿವಾಸ ನಾಯಕ, ಆಡಳಿತ ಮಂಡಳಿ ಸದಸ್ಯರಾದ ಸಿ.ಕೆ. ಎಂ. ಬಸವಲಿಂಗಸ್ವಾಮಿ, ಕೋಡಿಹಳ್ಳಿ ಮುದುಕಪ್ಪ, ಎಸ್ .ಜಯಶೀಲ, ಎಂ.ಪಿ.ಎಂ. ವೀರಭದ್ರದೇವರು, ಕನ್ನಿಹಳ್ಳಿ ಮುದುಕಪ್ಪ, ಡಾ| ಪ್ರಕಾಶ ಅಟವಾಳಗಿ, ಉಪನ್ಯಾಸಕ ಅಮರೇಗೌಡ ಪಾಟೀಲ್ ಉಪಸ್ಥಿತರಿದ್ದರು.
ಕಳೆದ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತೀಹೆಚ್ಚು ಅಂಕ ಗಳಿಸಿದ ರಿಯಾನಾ ಬೀಬಿ, ಹಾಲಿಯಾಸೌದಿ, ಜೆ.ರಾಜು, ನಯನಾ, ಕಾವ್ಯ, ಗಾಯಿತ್ರಿ, ಕೆ.ವಿಜಯಲಕ್ಷ್ಮೀ ಅವರಿಗೆ ದತ್ತಿ ಬಹುಮಾನ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಎಂ.ಪಿ.ಎಂ. ಶಿವಪ್ರಕಾಶ ಸ್ವಾಗತಿಸಿದರು. ಪ್ರಾಚಾರ್ಯ ಶ್ರೀನಿವಾಸ ನಾಯಕ ಪ್ರಾಸ್ತಾವಿಕ ಮಾತನಾಡಿ ದರು. ಉಪನ್ಯಾಸಕ ಸೋಮಶೇಖರ ಅಥಿತಿ ಪರಿಚಯ ಮಾಡಿದರು. ಉಪನ್ಯಾಸಕ ಪಿ.ಎಂ. ಬಸವಲಿಂಗಯ್ಯ ನಿರೂಪಿಸಿದರು. ಉಪನ್ಯಾಸಕ ಪರಶುರಾಮ ವಂದಿಸಿದರು.