Advertisement
ಎಷ್ಟು ಗಂಟೆ ಓದಬೇಕು? ಮತ್ತು ಹೇಗೆ ಓದಬೇಕು? ಓದಿಗೆ ಯಾವ ಸಮಯ ಸೂಕ್ತ? ಎನ್ನುವ ಗೊಂದಲ ಬೇರೆ. ಹೀಗಾದಾಗ, ಎಷ್ಟು ಓದಿದರೂ ಪರೀಕ್ಷೆಯ ವೇಳೆಯಲ್ಲಿ ಎಲ್ಲವೂ ಮರೆತು ಹೋಗುವುದು, ಪರೀಕ್ಷೆಯ ಸಂದರ್ಭದಲ್ಲೇ ಆರೋಗ್ಯ ಕೆಡುವುದು, ಓದಲು ಸಮಯ ಸಾಕಾಗದೇ ಹೋಗುವುದು, ಬಿಟ್ಟೂ ಸಮಸ್ಯೆ ತಲೆನೋವು ಬರುವುದು ಮುಂತಾದ ಕಾರಣಗಳು ಧುತ್ತೆಂದು ಜೊತೆಯಾಗಿಬಿಡುತ್ತವೆ. ಇವೆಲ್ಲಾ ಒತ್ತಡದ ಓದಿನ ಲಕ್ಷಣಗಳು. ನೆನಪಿರಲಿ!ಓದಿಗೆ ಶಾರ್ಟ್ ಕಟ್ ಇಲ್ಲ. ಪರೀಕ್ಷೆ ಎಂಬ ಮೂರುಗಂಟೆಗಳ ಕಾಲದ ಪ್ರದರ್ಶನದಲ್ಲಿ ಪಾಸ್ ಆಗಲು ವರ್ಷ ಪೂರ್ತಿ ಸಿದ್ಧತೆ ಬೇಕೇ ಬೇಕು. ಅದಕ್ಕೆ ಹೀಗೆಲ್ಲಾ ಮಾಡಿ.
Related Articles
Advertisement
ಯಾವ ಸಮಯ ಉತ್ತಮ?: ಓದಲು ಬೆಳಗಿನ ಜಾವವೇ ಸೂಕ್ತವಾದರೂ ಕೆಲವರಿಗೆ ಏಳಲು ಸಾಧ್ಯವಾಗುವುದಿಲ್ಲ. ಅಂಥವರು ರಾತ್ರಿಯೇ ಓದಿ ಮಲಗುವುದು ಸೂಕ್ತ. ರಾತ್ರಿ ಮಲಗುವಾಗ ಮುಂಜಾನೆ ಬೇಗ ಎದ್ದರಾಯ್ತು ಎಂದೋ, ರಾತ್ರಿ ತುಂಬಾ ಹೊತ್ತು ಓದಿದರಾಯ್ತು ಅಂದು ಕೊಳುತ್ತಲೋ ಮುಂದೂಡುತ್ತಾ ಇರಬೇಡಿ. ಮುಂಜಾನೆ ಮತ್ತು ರಾತ್ರಿ ಮಕ್ಕಳು ಓದುವಾಗ ಪೋಷಕರೂ ಅವರೊಂದಿಗೆ ಎದ್ದಿದ್ದು ಮಾನಸಿಕವಾಗಿ ಮಕ್ಕಳಿಗೆ ನೆರವಾಗಬೇಕು. ಹಾಗಂತ ಟಿ.ವಿ, ಮ್ಯೂಸಿಕ್, ಮೊಬೈಲ್ ಇಟ್ಟುಕೊಂಡು ಪಕ್ಕದಲ್ಲಿ ಕೂರಬೇಡಿ. ಬದಲಿಗೆ ನೀವೂ ಓದುವ ಗೀಳನ್ನು ಬೆಳೆಸಿಕೊಳ್ಳಿ. (ಕಥೆ, ಕಾದಂಬರಿ ಯಾವುದೂ ಆದೀತು) ಹೀಗೆ ಓದುವಾಗ, ನಿಮಗೆ ಗೊತ್ತಾಗದ ವಿಷಯಗಳನ್ನು ಶಿಕ್ಷಕರಲ್ಲಿ, ಸ್ನೇಹಿತರಲ್ಲಿ, ಪೋಷಕರಲ್ಲಿ ಅಥವಾಒಡಹುಟ್ಟಿದವರೊಂದಿಗೆ ಚರ್ಚಿಸಿ ಸಂದೇಹಗಳನ್ನು ಬಗೆಹರಿಸಿಕೊಳ್ಳಿ.
ಈಗ ಬೈಜೂಸ್, ಅಡ್ಡಾ 24 7, ಅನ್ ಅಕಾಡೆಮಿಯಂಥ ಬಹಳಷ್ಟು ಅನುಮಾನ ಪರಿಹರಿಸುವ ಆ್ಯಪ್‌ಗ್ಳು,ಯು ಟ್ಯೂಬ್ ವೀಡಿಯೊ ಗಳು ಬಂದಿವೆ. ಅವುಗಳ ಸಹಾಯವನ್ನೂ ಪಡೆಯಬಹುದು. ನೀವು ಓದಿದ ನಿಮ್ಮ ಜ್ಞಾನವನ್ನು ಆಗಿಂದಾಗ್ಗೆ ನೀವೇ ಸಣ್ಣ ಪರೀಕ್ಷೆಗಳನ್ನು ಕೊಟ್ಟುಕೊಳ್ಳುವುದರ ಮೂಲಕ ಪರೀಕ್ಷೆ ಮಾಡಿನೋಡಿ. ಆಗ ನೀವು ಎಲ್ಲಿದ್ದೀರಿ, ಇನ್ನೆಷ್ಟು ತಯಾರಿ ಬೇಕು ಎಂಬ ಅಂದಾಜು ಸಿಗುತ್ತದೆ.
ತಪ್ಪದೆ, ಕಡಿಮೆ ಎಂದರೂ ಒಂದೈದು ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿರಿ. ಆಗ ಪ್ರಶ್ನೆಗಳು ಯಾವ ರೀತಿಯಲ್ಲಿ ಬರುತ್ತವೆ ಎಂಬ ಅಂದಾಜು ಸಿಗುತ್ತದೆ. ಟೈಮ್ ಸೆಟ್ ಮಾಡಿಕೊಂಡರೆ ನಿಮಗೆ ಅಷ್ಟೂ ಪ್ರಶ್ನೆಗಳನ್ನು, ಕೊಟ್ಟಿರುವ ಸಮಯದಲ್ಲಿ ಬರೆಯಲು ಅಭ್ಯಾಸವಾಗುತ್ತದೆ. ಇದರಿಂದ ನಿಮಗೆ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ಕೈಯಲ್ಲಿ ಹಿಡಿದುಕೊಂಡಿದ ತಕ್ಷಣ ಅಬ್ಟಾ, ಇಷ್ಟು ಪ್ರಶ್ನೆಗಳಿಗೆ ಎರಡು ಗಂಟೆಗಳಲ್ಲಿ ಹೇಗೆ ಉತ್ತರಿಸೋದು‘ ಎನ್ನುವ ಭಯ ಹೋಗುತ್ತದೆ. ಉತ್ತರ ಬರೆಯುವ ಶೈಲಿಯನ್ನು ರೂಢಿಸಿಕೊಳ್ಳಿ. ಕಲಿತ ವಿಷಯವನ್ನು ಸರಿಯಾಗಿ ಅಭಿವ್ಯಕ್ತಿಸುವುದೂ ಒಂದು ಕಲೆ. ಇದು ಕನ್ನಡ,
ಇಂಗ್ಲೀಷ್,ಹಿಂದಿ ಅಥವಾ ಸಮಾಜ ಶಾಸ್ತ್ರದಲ್ಲಿ ಹೆಚ್ಚಾಗಿ ಉಪಯೋಗವಾಗುತ್ತದೆ. ಎಷ್ಟು ಅಂಕಗಳಿಗೆ ಎಷ್ಟು ಉತ್ತರಿಸಬೇಕು ಎಂಬುದನ್ನು ಅರಿಯಿರಿ. ಕೇವಲ ಎರಡು ಅಂಕಗಳಿಗೆ ಒಂದು ಪೇಜು ಉತ್ತರದ ಅಗತ್ಯವಿರುವುದಿಲ್ಲ. 5-10 ಅಂಕಗಳಿಗೆ ಒಂದುಪ್ಯಾರಾಗ್ರಾಫ್ ಉತ್ತರ ಸಾಕಾಗುವುದಿಲ್ಲ. ಹಾಗೆಯೇ, ನಿಮ್ಮ ಪದ ಸಂಪತ್ತನ್ನು ವೃದ್ಧಿಸಿಕೊಳ್ಳಿ. ಇದು ನಿಮ್ಮ ಉತ್ತರವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲು ನೆರವಾಗುತ್ತದೆ. ಇದೆಲ್ಲಾ ನಿಮಗೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಾ ಹೋಗುವಾಗ ಅರ್ಥವಾಗುತ್ತದೆ.
ಊಟ ತಿಂಡಿ : ಇಷ್ಟೆಲ್ಲಾ ಸಿದ್ಧತೆಯಿದ್ದು, ಪರೀಕ್ಷೆ ಸಂದರ್ಭದಲ್ಲೇ ಆರೋಗ್ಯ ಹಾಳಾದರೆ? ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ. ದಿನದ ಒಟ್ಟೂ ಸಮಯದಲ್ಲಿ ಒಂದಿಷ್ಟು ಸಮಯ ಧ್ಯಾನ ಮತ್ತು ವ್ಯಾಯಾಮಕ್ಕೂ ಮೀಸಲಿಡಿ. ಧ್ಯಾನದಿಂದ ನಿಮ್ಮ ಏಕಾಗ್ರತೆ ವೃದ್ಧಿಯಾಗುತ್ತದೆ. ವ್ಯಾಯಾಮದಿಂದ ನಿಮ್ಮ ಆರೋಗ್ಯ. ಊಟದಲ್ಲಿ, ಹಣ್ಣು, ಸೊಪ್ಪು, ತರಕಾರಿ, ಹಾಲು, ಧಾನ್ಯ, ಮೊಟ್ಟೆ ಮತ್ತು ಮೀನನ್ನು(ಮಾಂಸಾಹಾರಿಯಾಗಿದ್ದಲ್ಲಿ) ಉಪಯೋಗಿಸಿ.
ಇವುಗಳ ಸೇವನೆಯಿಂದ ನಿಮ್ಮ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಕರಿದ ಪದಾರ್ಥಗಳು, ಸಿಹಿ ತಿಂಡಿಗಳನ್ನು ಅತಿಯಾಗಿ ತಿನ್ನಬೇಡಿ. ದೇಹಾಲಸ್ಯ ಮತ್ತು ಜಡತ್ವದಿಂದ ಅತಿಯಾದ ನಿದ್ದೆ ಆವರಿಸುತ್ತದೆ. ಬದಲಿಗೆ ಹಣ್ಣಿನ ರಸ ಕುಡಿಯಿರಿ. ಸಕ್ಕರೆ, ಐಸ್ ಬೇಡ.
–ಗಾಯತ್ರಿ ರಾಜ್