Advertisement

ಕಾಲಹರಣ ಮಾಡದೆ ಪರಿಶ್ರಮ ಪಟ್ಟು ಓದಿ

11:10 PM Jul 03, 2019 | Team Udayavani |

ತುಮಕೂರು: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು. ಈ ಅವಧಿಯಲ್ಲಿ ಕಾಲಹರಣ ಮಾಡದೆ ಪರಿಶ್ರಮ ಪಟ್ಟು ಓದಿ ಹೆತ್ತವರಿಗೆ, ಗುರುಗಳಿಗೆ ಕಳಂಕ ತರದೆ ಪ್ರತಿಭಾನ್ವಿತರಾಗಿ ಮುಂದುವರಿಯಬೇಕು ಎಂದು ಪೈ ಇಂಟರ್‌ನ್ಯಾಷನಲ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ರಾಜ್‌ಕುಮಾರ್‌ ಪೈ ತಿಳಿಸಿದರು.

Advertisement

ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಬುಧವಾರ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ 14ನೇ ವರ್ಷದ ಉಚಿತ ಪುಸ್ತಕ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಮಠದ ಆಶ್ರಯದಲ್ಲಿ ವ್ಯಾಸಂಗ ಮಾಡುತ್ತಿರುವ ನೀವೆಲ್ಲಾ ಪುಣ್ಯವಂತರು. ಮಠದ ಕೀರ್ತಿಯನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ಯುವಲ್ಲಿ ನೀವು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾವು ಏನು ಯೋಚಿಸುತ್ತೇವೆಯೋ ಅದನ್ನು ಮಾಡುತ್ತೇವೆ. ನಾವು ಏನು ನೀಡುತ್ತೇವೆಯೋ ಅದನ್ನು ಪಡೆಯುತ್ತೇವೆ. ಉತ್ತಮ ಆಲೋಚನೆ, ಗುರಿಗಳು ಸಮಯ ತೆಗೆದುಕೊಳ್ಳಬಹುದು. ಆದರೆ, ಕೈಬಿಡುವುದಿಲ್ಲ. ಇತರರಿಗೆ ಒಳ್ಳೆಯದನ್ನು ಬಗೆದರೆ ನಿಮಗೂ ಅದು ಅನಿರೀಕ್ಷಿತವಾಗಿ ಹಿಂತಿರುಗುತ್ತದೆ ಎಂಬ ಮಾತುಗಳನ್ನು ವಿದ್ಯಾರ್ಥಿಗಳು ನಂಬಿ ಸಾಗಬೇಕಿದೆ ಎಂದರು.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ಮಾತನಾಡಿ, ಪೈ ಕುಟುಂಬವು ಸತತ 14 ವರ್ಷದಿಂದ ಮಠದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡುತ್ತಿದೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲೂ ಇವರ ಸೇವೆ ಸಾಗುತ್ತಿದೆ. ಕುಟುಂಬದ ಸರ್ವರೂ ಮಠಕ್ಕೆ ಆಗಮಿಸಿ ಪುಸ್ತಕ ನೀಡುವ ಕಾರ್ಯಕ್ರಮ ಒಂದು ಹಬ್ಬವಾಗಿ ಮಾರ್ಪಟ್ಟಿದೆ ಎಂದು ಶ್ಲಾಘಿಸಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅಂತೆಯೇ ಪೈ ಕುಟುಂಬ ಮುಂಬರುವ ದಿನಗಳಲ್ಲಿ ಕೋಟಿ ಸಸಿಗಳನ್ನು ನೆಡುವ ಕಾರ್ಯ ನಡೆಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಠದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

Advertisement

ಎಸ್‌ಎಸ್‌ಎಲ್‌ಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಈ ಸಂದರ್ಭದಲ್ಲಿ ಪೈ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಗುರುಪ್ರಸಾದ್‌ ಪೈ, ಉತ್ತಮ್‌ ಕುಮಾರ್‌ ಪೈ, ಅದಿತ್‌ ಕುಮಾರ್‌ ಪೈ, ಕುಟುಂಬಸ್ಥರಾದ, ಮೀನಾ ರಾಜ್‌ಕುಮಾರ್‌ ಪೈ, ಜಯಶ್ರೀ ಪೈ, ಪುಷ್ಪಾ ಪೈ, ಸಿದ್ಧಗಂಗಾದ ವಿವಿಧ ಶಾಲೆಗಳ ಶಿಕ್ಷಕರು, ಆಡಳಿತ ಮಂಡಳಿ ಮತ್ತು ಇತರರು ಉಪಸ್ಥಿತರಿದ್ದರು.

14 ವರ್ಷದಿಂದ ಮಠದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ್ದು ಸಂತಸ ತಂದಿದೆ. ವಿದ್ಯಾರ್ಥಿಗಳ ಮೊಗದಲ್ಲೂ ಖುಷಿ ಕಾಣುತ್ತಿದೆ. ವಿದ್ಯಾರ್ಥಿಗಳು ಪಾಲಕರ ಕನಸನ್ನು ಈಡೇರಿಸುವಲ್ಲಿ ಸಾಗಬೇಕು. ಪ್ರತಿಭಾನ್ವಿತರಾಗಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸದಾ ನಮ್ಮ ಸಹಕಾರ ಇರುತ್ತದೆ.
-ರಾಜ್‌ಕುಮಾರ್‌, ಎಂ.ಡಿ., ಪೈ ಇಂಟರ್‌ನ್ಯಾಷನಲ್‌ ಕಂಪನಿ

Advertisement

Udayavani is now on Telegram. Click here to join our channel and stay updated with the latest news.

Next