ಬಹಳ ದಿನಗಳ ನಂತರ ಬರೆಯುತ್ತಿರುವ ಓಲೆಯಿದು. ಅದೆಷ್ಟೋ ಸಲ, ನಿನ್ನನ್ನು ಕಾಣಲು ಬಂದಾಗ ಬರೀ ನೋಟಗಳ ವಿನಿಮಯವಷ್ಟೇ ನಡೆದದ್ದು. ಮಾತಾಡುವ ತವಕ ನನ್ನದಾದರೂ ನೀನ್ಯಾಕೆ ಒಮ್ಮೆಯೂ ಆ ಪ್ರಯತ್ನ ಮಾಡಲಿಲ್ಲ? ಯಾರ¨ªೋ ಮಾತು, ತೀರ್ಮಾನಗಳನ್ನು ನಿನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿನಗೆ ನಷ್ಟವೇ ಹೊರತು ಅನ್ಯರಿಗಲ್ಲ. ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು, ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿತುಕೋ.
ಭಾವನೆಗಳು ಹುಟ್ಟುವುದೇ ಮೊದಲ ನೋಟದಲ್ಲಿ ಅಂತಾರೆ, ನಾನು ಭಾವನೆಗಳನ್ನು ವ್ಯಕ್ತಪಡಿಸುವ ಮೊದಲೇ ನೀನು ಅದನ್ನು ಕೇವಲ ನೋಟಗಳಿಗೆ ಸೀಮಿತ ಮಾಡಿಬಿಟ್ಟೆ. ಭಾವನೆಗಳನ್ನು ಹಂಚಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದರೂ, ನೀನದಕ್ಕೆ ಅವಕಾಶವನ್ನೇ ಕೊಡಲಿಲ್ಲವೇಕೆ?
ಪ್ರೀತಿ ಯಾವತ್ತೂ ಅಂದ, ಚಂದ, ಬಣ್ಣ, ಅಂತಸ್ತು ನೋಡಿ ಹುಟ್ಟುವುದಿಲ್ಲ. ಅದು ಯಾವತ್ತೂ ಹೃದಯದಿಂದ ಹುಟ್ಟುತ್ತದೆ ಎಂಬ ಮಾತು ಬರೀ ಬೊಗಳೆಯಂತೆ ಭಾಸವಾಗುತ್ತಿದೆ. ಆ ಮಾತೇ ಸತ್ಯವಾಗಿದ್ದರೆ, ನೀನು ಕನಿಷ್ಠ ಪಕ್ಷ ನನ್ನ ಮಾತನ್ನಾದರೂ ಕೇಳಿಸಿ ಕೊಳ್ಳುತ್ತಿದ್ದೆ. ನನ್ನ ಮನವಿಗೆ, ಪ್ರಾರ್ಥನೆಗೆ ನೀನೇಕೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ? ನಿನಗೆ ಪ್ರೀತಿ ಅಂದ್ರೆ ಏನು ಅಂತಾನೇ ಗೊತ್ತಿಲ್ವಾ?
ಈ ವಿಷಯದಲ್ಲಿ ನೀನು, ಹೃದಯದ ಮಾತಿಗಿಂತ, ಅನ್ಯರ ಮಾತುಗಳಿಗೇ ಹೆಚ್ಚು ಬೆಲೆ ಕೊಡುತ್ತೀಯ ಅನ್ನಿಸ್ತಾ ಇದೆ.
ನಾನು ಇನ್ನು ಯಾವ ರೀತಿ ಪ್ರೇಮ ನಿವೇದನೆ ಮಾಡಲಿ ಹೇಳು, ಕೇಳಲು ನೀನೇ ರೆಡಿಯಿಲ್ಲದಿರುವಾಗ? ಮನುಷ್ಯನ ಜೀವನದಲ್ಲಿ ಬದಲಾವಣೆಯ ತಿರುವುಗಳು ಯಾವಾಗ ಬರುತ್ತವೆಯೋ ಹೇಳಲಾಗದು. ಈಗ ನನ್ನ ಜೀವನದಲ್ಲಿ ಬದಲಾವಣೆಯ ಪರ್ವ ಬಂದಿದೆ. ಇನ್ಮುಂದೆ ನಿನ್ನಲ್ಲಿ ಪ್ರೇಮ ಭಿಕ್ಷೆ ಬೇಡುವುದಿಲ್ಲ. ಆದರೆ, ನಿನಗಾಗಿ ಕಾಯುತ್ತಿರುತ್ತೇನೆ. ನನ್ನ ಪ್ರೀತಿ ನಿಜ ಅನ್ನಿಸಿದ ದಿನ, ನನ್ನೆಡೆಗೆ ಒಂದು ಸಣ್ಣ ನಗು ಬೀರು. ಓಡೋಡಿ ಬರುತ್ತೇನೆ.
ಅದೇನೇ ನಿರ್ಬಂಧಗಳು ನಿನಗಿದ್ದರೂ ಈ ಓಲೆಯನ್ನು ದಯವಿಟ್ಟು ಓದು.
ಇಂತಿ ನಿನ್ನವನಾಗಲು ಕಾಯುತ್ತಿರುವ…
– ಶ್ರೀನಾಥ ಮರಕುಂಬಿ