Advertisement

ಆಶಯ ಕಳೆದುಕೊಂಡ ಸಚಿವರ ಗ್ರಾಮವಾಸ್ತವ್ಯ

11:51 AM Feb 23, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಕಂದಾಯ ಸಚಿವರ ಗ್ರಾಮವಾಸ್ತವ್ಯ ತನ್ನ ಆಶಯ ಕಳೆದುಕೊಂಡಿದ್ದು, ಇದು ಅವರ ಚೊಚ್ಚಲ ಪ್ರಚಾರ ಕಾರ್ಯಕ್ರಮವಾಗಿ ಉಳಿಯಿತೆ ಹೊರತು, ಜನರ ಕಾರ್ಯಕ್ರಮ ಆಗಲಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಆರೋಪಿಸಿದ್ದಾರೆ.

Advertisement

ನಗರದ ಪ್ರವಾಸಿ ಮಂದಿರಲ್ಲಿ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮವಾಸ್ತವ್ಯಕ್ಕೂ ಮುನ್ನ ರೈತರಿಗೆ ಆಗಬೇಕಿದ್ದ ಕೆಲಸಗಳ ರೂಪುರೇಷೆ ಸಿದ್ಧವಾಗಬೇಕಿತ್ತು. ರಾಜ್ಯ,ಕೇಂದ್ರ ರೈತ ಕಾನೂನು ಬಗ್ಗೆ ಸಾರ್ವಜನಿಕವಾಗಿ ತಿಳಿಸಿಕೊಡಬೇಕಿತ್ತು ಎಂದರು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆಯಿಂದ ಶೇ.34ರಷ್ಟು ರೈತರ ಭೂಮಿ ಉದ್ಯಮಿಗಳ ಪಾಲು ಮಾಡಿರುವ ಬಿಜೆಪಿ ಸರ್ಕಾರ ಯಾರಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿವುದು ರೈತರ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ನೀಡಿ ಗ್ರಾಮವಾಸ್ತವ್ಯ ಮಾಡಿದರೆ ಮಾತ್ರ ಅದರ ಆಶಯ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮಸೂದೆ ವಾಪಸ್‌ ಪಡೆಯಿರಿ: ಸಂಘದ ಸಂಘಟನಾ ಕಾರ್ಯದರ್ಶಿ ವಸಂತ್‌ ಮಾತನಾಡಿ, ಸರ್ಕಾರ ಬಂಡವಾಳ ಶಾಹಿಪರವಾದ ಕಾನೂನು ರೂಪಿಸುತ್ತಿವೆ. ಇದರಿಂದ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿ. ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಗೋಹತ್ಯೆ ನಿಷೇಧಕಾಯ್ದೆ ನಾವು ಒಪ್ಪಿಕೊಳ್ಳಬೇಕೆಂದರೆ ಗಂಡುಕರು ಸಾಕುವ ನಿರ್ವಹಣಾ ವೆಚ್ಚ ನೀಡಿ. ಇಲ್ಲವಾದಲ್ಲಿ ಮಸೂದೆ ಹಿಂದಕ್ಕೆ ಪಡೆಯಿರಿ ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್‌, ಕಾರ್ಯದರ್ಶಿ ವಸಂತ್‌,ತೂಬಗೆರ ಹೋಬಳಿ ಅಧ್ಯಕ್ಷ ವೆಂಕಟನಾರಾಯಣಪ್ಪ, ಕಾಂತರಾಜು, ನಾರಾಯಣಸ್ವಾಮಿ, ಚೆಲುವರಾಜ್‌ ಇದ್ದರು.

ಸಕಾಲಕ್ಕೆ ರೈತರ ಕೆಲಸ ಮಾಡಿಕೊಟ್ಟರೆ ಸಾಕು  : ಮುಂದಿನ ದಿನಗಳಲ್ಲಾದರೂ ಸ್ಥಳೀಯ ರೈತರಿಗೆ ಕಂದಾಯ ಇಲಾಖೆಯಿಂದ ಆಗಬಹುದಾದ ಕೆಲಸಗಳ ರೂಪುರೇಷೆ, ಕೆಲಸಗಳು ಆಗಬಹುದಾದ ಸಮಯ ನಿಗದಿ ಮಾಡಬೇಕು. ರೈತರು ತಾಲೂಕು ಕಚೇರಿಗೆ ಹೋದಾಗ ಸೌಜನ್ಯದಿಂದ ನಡೆದಕೊಂಡು ಸಕಾಲಕ್ಕೆ ಅವರ ಕೆಲಸ ಮಾಡಿಕೊಟ್ಟರೆ ಸಾಕಾಗಿದೆ. ಇಂತಹ ಗ್ರಾಮ ವಾಸ್ತವ್ಯಗಳ ಆಶಯ ಈಡೇರುವಲ್ಲಿ ಇಂತಹ ಕ್ರಿಯಾತ್ಮಕ ಆಡಳಿತಕ್ಕೆ ಚಾಲನೆ ನೀಡಬೇಕಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next