Advertisement

ಆದಿತ್ಯ ಲ್ಯಾಬ್‌ನಲ್ಲೇ ಕಾಲ ಕಳೆಯುತ್ತಿದ್ದ, ಅಲ್ಲೇ ಮಲಗುತ್ತಿದ್ದ

08:30 PM Aug 06, 2020 | Karthik A |

ಸಾಧನೆಗೆ ಯಾವ ವಯಸ್ಸು ಪಕ್ವ ವಯಸ್ಸು, ಅಂತ ಕೇಳಿದರೆ, ಇದಮಿತ್ಥಂ ಎಂದು ಹೇಳುವಾಗಿಲ್ಲ.

Advertisement

ವಯಸ್ಸು ಮಾಗುತ್ತಾ, ಅನುಭವ ಬೆಳೆಯುತ್ತಾ, ಸಾಧನೆ ಬಲಿಯುತ್ತದೆ ಎನ್ನುವುದು ಕಲ್ಪನೆ. ಆದರೆ, ಅತೀ ಸಣ್ಣ ಪ್ರಾಯದಲ್ಲೇ ದೊಡ್ಡದಾದ ಸಾಧನೆ ಮಾಡಿದವರು ಅನೇಕರು ನಮ್ಮ ನಡುವೆ ಇದ್ದಾರೆ.

ಅಂತವರಲ್ಲಿ ಒರ್ವ, ಯುವ ಸಂಶೋಧಕ ಟೆನಿತ್‌ ಆದಿತ್ಯ.

ಆದಿತ್ಯನ ಸಂಶೋಧಕ ಪ್ರವೃತ್ತಿಯಲ್ಲಿ ತೊಡಗುವುದು ತನ್ನ ಎರಡನೆಯ ತರಗತಿಯಲ್ಲಿ. ತನ್ನ ಪ್ರಾಯದ ಮಕ್ಕಳು ಮೈದಾನದಲ್ಲಿ ಆಡುವ ಹೊತ್ತಿಗೆ ಆದಿತ್ಯ ಮಾತ್ರ, ತನ್ನ ಲ್ಯಾಬ್‌ ಸೇರಿ ಸಂಶೋಧನಾ ಚಟುವಟಿಕೆಗಳಲ್ಲಿ ನಿರತನಾಗಿರುತ್ತಿದ್ದ. ಆ ಕಾಲಕ್ಕೇ ಕಂಪ್ಯೂರ್ಟ ಆ್ಯಪ್‌ಗ್ಳನ್ನು ಕಲಿಯಲು ತೊಡಗಿ ಈತ ಕಲಿತಿದ್ದು 35 ಆ್ಯಪ್‌ಗಳನ್ನು ಮತ್ತು 6 ಪ್ರೋ ಗ್ರಾಮಿಂಗ್‌ ಭಾಷೆಗಳನ್ನು. ಜತೆಜತೆಗೆ, ಸಮಾಜದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರವನ್ನು ಕಂಡುಹುಡುಕಬೇಕು ಅನ್ನುವ ಇಚ್ಛೆಯಿಂದ ಇವನು ಅನ್ವೇಷಿಸಿದ ಹಲವು ತಂತ್ರಜ್ಞಾನಗಳು ಇಂದು ಭಾರತಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿವೆ.

ಆದಿತ್ಯನ ಗುರುತಿಸಲೇಬೇಕಾದ ಸಂಶೋಧನೆಯೆಂದರೆ, ಪ್ಲಾಸ್ಟಿಕ್‌ ಸಮಸ್ಯೆಗೆ ಬಾಳೆ ಎಲೆಯ ಪರ್ಯಾಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು. ಯಾವುದೇ ರಾಸಾಯನಿಕ ಬಳಸದೇ ಬಾಳೆಎಲೆಯನ್ನು, ಕೆಲವು ಜೀವಕೋಶೀಯ ಮಾರ್ಪಾಡುಗಳೊಂದಿಗೆ, 3 ವರ್ಷ ಹಾಳಾಗದಂತೆ ಸಂರಕ್ಷಿಸುವ ತಂತ್ರಜ್ಞಾನ ಇದು. ಇಂತಹ ಎಲೆಗಳಿಂದ ತಯಾರಿಸಿದ, ಕಪ್‌, ಸ್ಟ್ರಾ, ಪ್ಲೇಟ್‌ಗಳನ್ನು ಆದಿತ್ಯ ಮಾರಾಟ ಮಾಡುತ್ತಿದ್ದಾನೆ. ವಿಶೇಷವೆಂದರೆ, ಪ್ಲಾಸ್ಟಿಕ್‌ನಷ್ಟೇ ಬಲ ಹೊಂದಿರುವ ಈ ಉತ್ಪನ್ನಗಳ ಬೆಲೆ ಮಾತ್ರ ಶೇ. 75ರ‌ಷ್ಟು ಕಡಿಮೆ. ಇದಕ್ಕೆ, ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮೋದನೆಯೂ ದೊರಕಿದೆ.

Advertisement

ಇವನ ಇತ್ತೀಚಿನ ಸಂಶೋಧನೆಗಳಲ್ಲಿ, ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವ, ಬಳಕೆದಾರರ ಖಾಸಗಿತನವನ್ನು ರಕ್ಷಿಸುವ ಮತ್ತು ಡಿಜಿಟಲ್‌ ಹೆಜ್ಜೆಗಳನ್ನು ಕಾಪಿಡದ “ಆಲ್ಟ್ರೂ’ ಸಾಮಾಜಿಕ ಜಾಲತಾಣವೂ ಸೇರಿದೆ. ಅಡ್ಜಸ್ಟೇಬಲ್‌ ಎಕ್ಸ್‌ಟೆನ್ಶನ್‌ ಬಾಕ್ಸ್‌ ಮುಂತಾದ ಒಟ್ಟು 19 ಸಂಶೋಧನೆಗಳ ಪೇಟೆಂಟ್‌ ಇವನಲ್ಲಿದೆ.

ತನ್ನ 4ನೇ ತರಗತಿಯಿಂದಲೂ ಲ್ಯಾಬ್‌ನಲ್ಲೇ ಕಾಲ ಕಳೆಯುತ್ತಿದ್ದ ಆದಿತ್ಯ ಮಲಗುತ್ತಿದ್ದುದು, ಮುಂಜಾನೆ 3 ಗಂಟೆ ಹೊತ್ತಿಗೆ. ಅದರಿಂದಲೇ, ಶಾಲೆಗೆ ತಡವಾಗಿ ಹೋಗಿ ಹೆಚ್ಚಿನ ಕಾಲ ತರಗತಿಯ ಹೊರಗೆ ನಿಂತುಕೊಳ್ಳುವಂತಾಗುತ್ತಿತ್ತು. ಆದರೂ, ಸಾಂಪ್ರದಾಯಿಕ ಶಿಕ್ಷಣಕ್ಕಿಂತಲೂ, ಪ್ರಾಯೋಗಿಕ ಶಿಕ್ಷಣವೇ ಅವನಿಗೆ ಪ್ರಿಯವಾಯಿತು. ಹಾಗಂತ, ಈ ಸಂಶೋಧನೆ ಹೂವಿನ ಹಾಸಿಗೆಯಾಗಿರಲಿಲ್ಲ. ಸಂಶೋಧನೆಯ ನಡುವೆ ಅನೇಕ ಬಾರಿ ಅವಘಡಗಳು ಏರ್ಪಟ್ಟು, ಪ್ರಾಣಾಪಾಯದ ಸಂಭವಗಳೂ ನಡೆದಿತ್ತಂತೆ. ಇಂತಹ ಸಾಹಸೀ ಶ್ರಮ ವ್ಯರ್ಥವಾಗದೇ, ಮುಂದೆ ರಾಷ್ಟಪತಿ ಅಬ್ದುಲ್‌ ಕಲಾಂ ಕೈಯಿಂದಲೂ ಈತ ಪ್ರಶಂಸೆ ಪಡೆಯುವಂತಾಯಿತು.

ಇದೀಗ 20ರ ಹರೆಯದ ಆದಿತ್ಯ ತನ್ನ “ಟೆನಿತ್‌ ಇನ್ನೋವೇಶನ್ಸ್‌’ ಕಂಪೆನಿಯ ಸಿಇಓ ಆಗಿ ದಣಿವರಿಯದೆ ದುಡಿಯುತ್ತಿದ್ದಾನೆ. “ಇಂಟರ್ನೇಶನಲ್‌ ಸೈನ್ಸ್‌ ಫೆಡರೇಶನ್‌’ ಮತ್ತು “ಆಲ್ಟ್ರೂಇನ್ನೋವೇಶನ್‌ ಸೆಂಟರ್‌’ನ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸುತ್ತಿದ್ದಾನೆ. 17 ಅಂತಾರಾಷ್ಟ್ರೀಯ, 10 ದೇಶೀಯ ಪ್ರಶಸ್ತಿಗಳಿಗೆ ಭಾಜನನಾಗಿರುವ ಆದಿತ್ಯ, 5 ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಶೋಧನಾ ಮೌಲ್ಯಮಾಪಕ ಮತ್ತು ಸಲಹೆಗಾರನಾಗಿದ್ದಾನೆ. 1 ಗಿನ್ನೀಸ್‌ ದಾಖಲೆಯೂ ಇವನ ಹೆಸರಿನಲ್ಲಿದೆ.

ಇಷ್ಟೆಲ್ಲಾ ಸಾಧಿಸಿರುವ ಟೆನಿತ್‌ ಸಾಮಾಜಿಕ ಜೀವನವನ್ನೂ ಗಂಭೀರವಾಗಿಯೇ ತೆಗೆದುಕೊಂಡಿದ್ದಾನೆ. ಪಕ್ಷಿ ಸಾಕಾಣಿಕೆ ಈತನಿಗೆ ಖುಷಿ ಕೊಡುವ ಹವ್ಯಾಸಗಳಲ್ಲಿ ಒಂದು. ಓರ್ವ ಉತ್ಸಾಹಿ ನಾಣ್ಯ ಸಂಗ್ರಾಹಕ, ಚೆಸ್‌ ಆಟಗಾರ, ಉತ್ತಮ ಕಂಪ್ಯೂಟರ್‌ ಪೋ›ಗ್ರಾಮರ್‌ ಆಗಿರುವ ಆದಿತ್ಯ, ‘ಕೃತಕ ಬುದ್ಧಿಮತ್ತೆ’ ಕ್ಷೇತ್ರದ ಭರವಸೆಯ ಸಂಶೋಧಕನಾಗಿಯೂ ಪರಿಚಿತ.

ತಾನು ಮಾತ್ರ ಬೆಳೆಯುವುದಲ್ಲ, ಸಮಾಜವೂ ಬೆಳೆಯಬೇಕು ಎನ್ನುವ ಬದ್ಧತೆ ಹೊಂದಿರುವ ಆದಿತ್ಯ, ತನ್ನ ಸ್ಫೂರ್ತಿದಾಯಕ ಮಾತುಗಳಿಂದ ವಿದ್ಯಾರ್ಥಿಗಳ ಮನ ಗೆದ್ದಿದ್ದಾನೆ. ತನ್ನಂತೇ ಸಂಶೋಧನೆಯಲ್ಲಿ ತೊಡಗುವ ಯುವ ಜನರಿಗೆ ಮಾರ್ಗದರ್ಶನ ನೀಡುತ್ತಾ, ತನ್ನ “ಲೆಟ್ಸ… ಇನ್ನೋವೇಟ್‌ ಯೂತ್‌ ಮೂಮೆಂಟ್‌’ ಮೂಲಕ 89,000 ಸಂಶೋಧಕರನ್ನು ತರಬೇತುಗೊಳಿಸಿದ್ದಾನೆ. ಈ ಮೂಲಕ, ಭಾರತದ ಹೆಸರನ್ನು ಇನ್ನಷ್ಟು ಪಸರಿಸುವ ಯುವ ಸಂಶೋಧಕರನ್ನು ನಿರ್ಮಿಸುವ ನಿಸ್ವಾರ್ಥ ಸೇವೆಯನ್ನೂ ಆದಿತ್ಯ ನೀಡುತ್ತಿದ್ದಾನೆ.

ಅವಕಾಶಗಳನ್ನು ಸರಿಯಾಗಿ ಬಳಸದೇ ಹತಾಶರಾಗುವ, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರದ ಯುವ ಜನಾಂಗ ಆದಿತ್ಯನಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಶ್ರದ್ಧೆ ಮತ್ತು ಶ್ರಮ ಸಾಮಾನ್ಯ ಬಾಲಕನನ್ನು ಇಂದು ಅಂತಾರಾಷ್ಟ್ರೀಯ ನೆಲೆಯಲ್ಲಿ ಗುರುತಿಸುವಂತೆ ಮಾಡಿರುವುದು ಸ್ಫೂರ್ತಿದಾಯಕ ವಿಷಯ.

-ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next