ನವದೆಹಲಿ: ದೆಹಲಿಯಲ್ಲಿ ಕೋವಿಡ್ ಸೋಂಕಿನ ನಡುವೆಯೇ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ವೈದ್ಯಕೀಯ ತಜ್ಞರ ಪ್ರಕಾರ, ಸ್ವಚ್ಛಗೊಳಿಸದ ಅಥವಾ ಮರುಬಳಕೆಯ ಮಾಸ್ಕ್ ಬಳಸುವುದು ಮತ್ತು ಕಳಪೆ ಗಾಳಿ ಇರುವ ಕೊಠಡಿಗಳನ್ನು ಬಳಸುವುದರಿಂದ ಸೋಂಕು ಬರಲು ಕಾರಣವಾಗಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಮುಂದುವರಿಸಲು ಕಾಂಗ್ರೆಸ್ ನಿಂದ ಸತತ ಪ್ರಯತ್ನ: ಈಶ್ವರಪ್ಪ ಆರೋಪ
ಬ್ಲ್ಯಾಕ್ ಫಂಗಸ್ (ಮ್ಯೂಕೋರ್ ಕೋಸಿಸ್) ಗೆ ಒಳಗಾದ ರೋಗಿಗಳ ಹಿಸ್ಟರಿಯನ್ನು ಪರಿಶೀಲಿಸಿದ ಹಲವಾರು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯಕೀಯ ತಜ್ಞರ ಪ್ರಕಾರ, ದೀರ್ಘಕಾಲದವರೆಗೆ ತೊಳೆಯದ ಮಾಸ್ಕ್ ಧಿರಿಸುವುದು ಸೇರಿದಂತೆ ಕಳಪೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಂಡಿರುವುದು ಸೋಂಕು ಹರಡಲು ಕಾರಣವಾಗಿದೆ ಎಂದು ಬಹಿರಂಗಪಡಿಸಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದೆಡೆ ಈ ಆರೋಪಕ್ಕೆ ಯಾವುದೇ ಕ್ಲಿನಿಕಲ್ ಪುರಾವೆಗಳಿಲ್ಲ ಎಂದು ಅನೇಕ ತಜ್ಞ ವೈದ್ಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸ್ಟಿರಾಯ್ಡ್ ಗಳ ಬಳಕೆಯಿಂದಾಗಿ ಇಂತಹ ಅನಾರೋಗ್ಯ ಕಾಡುತ್ತಿರುವುದಾಗಿ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಡಾ.ಸುರೇಶ್ ಸಿಂಗ್ ನರುಕಾ ಪಿಟಿಐಗೆ ತಿಳಿಸಿದ್ದಾರೆ.
ದೀರ್ಘಕಾಲದವರೆಗೆ ತೊಳೆಯದ ಮಾಸ್ಕ್ ಗಳನ್ನು ಉಪಯೋಗಿಸುವುದು ಅಥವಾ ಕಡಿಮೆ ಗಾಳಿಯಾಡುವ ಕೋಣೆಯಲ್ಲಿ ವಾಸವಾಗಿರುವುದು ಅಥವಾ ಆಮ್ಲಜನಕದ ಕೊರತೆ ಇರುವ ಸ್ಥಳಗಳಲ್ಲಿ ಇರುವುದು ಬ್ಲ್ಯಾಕ್ ಫಂಗಸ್ ಹರಡಲು ಕಾರಣವಾಗುತ್ತದೆ ಎಂದು ನರುಕಾ ವಿವರಿಸಿದ್ದಾರೆ.