ದಾವಣಗೆರೆ: ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೆ.26 ರಿಂದ 30ರ ವರೆಗೆ ಪರಿಣಾಮಕಾರಿಯಾಗಿ ಮ್ಯಾನುಯಲ್ ಸ್ಕ್ಯಾವೆಂಜರ್ ಮರು ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ ವಿಶೇಷ ಮರು ಸಮೀಕ್ಷೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮ್ಯಾನುಯಲ್ ಸ್ಕ್ಯಾವೆಂಜರ್ ವಿಶೇಷ ಮರು ಸಮೀಕ್ಷೆ ನಡೆಸುವ ಮುನ್ನ ವ್ಯಾಪಕ ಪ್ರಚಾರ ನೀಡಬೇಕು. ತಂಡಗಳ ರಚಿಸಿಕೊಂಡು ಎಲ್ಲೆಡೆ ಶಿಬಿರ ನಡೆಸಿ, ಮರು ಸಮೀಕ್ಷೆಯ ಸಮಗ್ರ ವರದಿಯನ್ನು ಸೆ.30ಕ್ಕೆ ತಮಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಆದೇಶದಂತೆ ದಾವಣಗೆರೆಯಲ್ಲಿ 158, ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 58 ಜನ ಮ್ಯಾನುಯಲ್ ಸ್ಕ್ಯಾವೆಂಜರ್ ಮರು ಸಮೀಕ್ಷೆ ನಡೆಸಲಾಗಿತ್ತು. ಆದರೆ, ದಾವಣಗೆರೆ ಜಿಲ್ಲೆಗೆ ನೋಡಲ್ ಅಧಿಕಾರಿ ನೇಮಕ ಮಾಡದ ಹಾಗೂ ಸಮೀಕ್ಷೆಗೆ ಆದೇಶ ನೀಡದ ಹಿನ್ನೆಲೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಗಳ ವಿವರ ಅಪ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಈಗ ಮ್ಯಾನುಯಲ್ ಸ್ಕ್ಯಾವೆಂಜರ್ ವಿಶೇಷ ಮರು ಸಮೀಕ್ಷೆಗೆ ಆದೇಶಿಸಲಾಗಿದೆ. ಹಾಗಾಗಿ ಮ್ಯಾನುಯಲ್ ಸ್ಕ್ಯಾವೆಂಜರ್ ವಿಶೇಷ ಮರು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಅ.17ರ ಒಳಗೆ ಮರು ಸಮೀಕ್ಷೆ ಮುಗಿಸಬೇಕಾಗಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಜಿ. ನಜ್ಮಾ ತಿಳಿಸಿದರು.
ಮ್ಯಾನುಯಲ್ ಸ್ಕ್ಯಾವೆಂಜರ್ ವಿಶೇಷ ಮರು ಸಮೀಕ್ಷೆಗೆ ಎಷ್ಟು ಸಮಯ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ದಾವಣಗೆರೆ, ಹರಿಹರದಲ್ಲಿ 2 ದಿನ, ಬೇರೆ ಸ್ಥಳೀಯ ಸಂಸ್ಥೆಯಲ್ಲಿ 1 ದಿನ ಬೇಕಾಗಬಹುದು ಎಂದು ನಜ್ಮಾ ತಿಳಿಸಿದರು. ದಾವಣಗೆರೆ, ಹರಿಹರದಲ್ಲಿ 2 ರಿಂದ 4 ದಿನ, ಬೇರೆ ಕಡೆ 1 ದಿನದಲ್ಲಿ ಮರು ಸಮೀಕ್ಷೆ ನಡೆಸಿ, ಸಮೀಕ್ಷೆ ಗೆ ಸಂಬಂಧಿಸಿದಂತೆ ವ್ಯಾಪಕ ಪ್ರಚಾರ, ಸಮೀಕ್ಷೆ ನಡೆಸುವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ದಾವಣಗೆರೆಯಲ್ಲಿ 158, ಹರಿಹರದಲ್ಲಿ 58 ಮ್ಯಾನುಯಲ್ ಸ್ಕ್ಯಾವೆಂಜರ್ ಗುರುತಿಸಿ 2-3 ವರ್ಷ ಕಳೆದರೂ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಸಫಾಯಿ ಕರ್ಮಚಾರಿಗಳ ಸಮಿತಿಯ ಡಿ.ಎಸ್. ಬಾಬಣ್ಣ , ವಾಸುದೇವ್ ಅಸಮಾಧಾನ ವ್ಯಕ್ತಪಡಿಸಿದರು. ಸೌಲಭ್ಯ ಒದಗಿಸುವುದಕ್ಕಾಗಿಯೇ ಮ್ಯಾನುಯಲ್ ಸ್ಕ್ಯಾವೆಂಜರ್ ವಿಶೇಷ ಮರು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಜಿ. ನಜ್ಮಾ ತಿಳಿಸಿದರು.
ಪ್ರತಿ ನಿತ್ಯ ನಗರ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರಿಗೆ ನಿಗದಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆದರೆ, ಮಾಸ್ಟರ್ ಚೆಕಪ್ ಮಾಡಲಾಗುತ್ತಿಲ್ಲ. ತಿಂಗಳಿಗೊಮ್ಮೆ ಸಭೆ ನಡೆಸುವ ಮೂಲಕ ಪೌರ ಕಾರ್ಮಿಕರ ಸಮಸ್ಯೆ ಆಲಿಸಿ, ಪರಿಹರಿಸುವ ಕೆಲಸ ಆಗಬೇಕು ಎಂದು ಪೌರ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ ಒತ್ತಾಯಿಸಿದರು.
ಸ್ವಚ್ಛತಾ ಕಾರ್ಯ ಮಾಡುವಂತಹ ಪೌರ ಕಾರ್ಮಿಕರಿಗೆ ಸ್ಪಂದಿಸಬೇಕು. ತಿಂಗಳಿಗೊಮ್ಮೆ ನಗರಪಾಲಿಕೆಯಲ್ಲೇ ಪೌರ ಕಾರ್ಮಿಕರ ಸಭೆ ನಡೆಸಿ, ಜಿಲ್ಲಾ ಆಸ್ಪತ್ರೆಯಲ್ಲಿ ದಿನಕ್ಕೆ 20 ಜನರಿಗೆ ಉಚಿತವಾಗಿಯೇ ಮಾಸ್ಟರ್ ಚೆಕಪ್ ಮಾಡಿ ಎಂದು ಜಿಲ್ಲಾಧಿಕಾರಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಪೌರ ಕಾರ್ಮಿಕರು ಮಾರಣಾಂತಿಕ ಕಾಯಿಲೆಗೆ ತುತ್ತಾದರೆ ಬಹಳ ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಆರೋಗ್ಯ ಕಾರ್ಡ್ ವ್ಯವಸ್ಥೆ ಮಾಡಬೇಕು. ದಾವಣಗೆರೆಯಲ್ಲಿ ಗೃಹಭಾಗ್ಯ ಯೋಜನೆ ಚುರುಕುಗೊಳಿಸಬೇಕು. ಇತರೆಡೆಯೂ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡಬೇಕು ಎಂದು ಎನ್. ನೀಲಗಿರಿಯಪ್ಪ ಮನವಿ ಮಾಡಿದರು. ಆಯುಷ್ಮಾನ್ ಭಾರತ ಕರ್ನಾಟಕ ಆರೋಗ್ಯ ಯೋಜನೆ ಮೂಲಕ ಕಾರ್ಡ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಇತರರು ಇದ್ದರು.