ಹೊಸದಿಲ್ಲಿ: ಇಲ್ಲಿನ ಐತಿಹಾಸಿಕ ಕ್ರಿಕೆಟ್ ಸ್ಟೇಡಿಯಂ “ಫಿರೋಜ್ ಶಾ ಕೋಟ್ಲಾ’ ಇನ್ನು ಮುಂದೆ “ಅರುಣ್ ಜೇಟ್ಲಿ ಸ್ಟೇಡಿಯಂ’ ಎನಿಸಿಕೊಳ್ಳಲಿದೆ. ಗುರುವಾರ ಜವಾಹರ್‌ಲಾಲ್ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೇಂದ್ರ ಗೃಹಸಚಿವ ಅಮಿತ್ ಶಾ ಡಿಜಿಟಲ್ ರೂಪದಲ್ಲಿ ಹೆಸರನ್ನು ಮರುನಾಮಕರಣ ಮಾಡಿದರು.
ಇದೇ ಕಾರ್ಯಕ್ರಮದಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿನ ಸ್ಟಾಂಡ್ ಒಂದಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರನ್ನಿಡಲಾಯಿತು. ಕೊಹ್ಲಿಯ ಸಾಧನೆಯನ್ನೊಳಗೊಂಡ ಕಿರು ದೃಶ್ಯಾವಳಿಯನ್ನೂ ಪ್ರದರ್ಶಿಸಲಾಯಿತು.
ಕ್ಯಾನ್ಸರ್‌ನಿಂದ ಮೃತಪಟ್ಟ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ, ದಿಲ್ಲಿ ಕ್ರಿಕೆಟ್ ಸಂಸ್ಥೆಗೆ 13 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಸೇವೆಯನ್ನು ಹಾಲಿ ಅಧ್ಯಕ್ಷ ರಜತ್ ಶರ್ಮ, ಭಾರತ ಕ್ರಿಕೆಟ್ ತಂಡದ ಮಾಜಿ ಸದಸ್ಯರಾದ ಕಪಿಲ್ ದೇವ್, ಚೇತನ್ ಚೌಹಾಣ್ ಸ್ಮರಿಸಿದರು. ವಿರಾಟ್ ಕೊಹ್ಲಿ, ಶಿಖರ್ ಧವನ್, ರಿಷಭ್ ಪಂತ್, ಆಶಿಷ್ ನೆಹ್ರಾ, ವೀರೇಂದ್ರ ಸೆಹವಾಗ್ ಇವರ ಜೀವನ ರೂಪಿಸುವಲ್ಲಿ ಜೇಟ್ಲಿ ಪಾತ್ರ ಮಹತ್ವದ್ದು, ಅಗತ್ಯವಿದ್ದಾಗಲೆಲ್ಲ ಅವರ ಸಲಹೆಯನ್ನು ಪಡೆದುಕೊಳ್ಳಲಾಗುತ್ತಿತ್ತು ಎಂದು ರಜತ್ ಶರ್ಮ ಹೇಳಿದರು.
ಅರುಣ್ ಜೇಟ್ಲಿಯವರ ಕುಟುಂಬ ಸದಸ್ಯರು, ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು, ಮಾಜಿ ಕ್ರೀಡಾಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸಿŒ, ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮ, ಸದಸ್ಯರಾದ ಶಿಖರ್ ಧವನ್, ಚೇತೇಶ್ವರ್ ಪೂಜಾರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.