Advertisement
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಹಲವು ವರ್ಷಗಳಿಂದ ಮದ್ಯವರ್ಜನ ಶಿಬಿರ ನಡೆಸಲಾಗುತ್ತಿದ್ದು, ಕಳೆದ ಏಳು ದಿನಗಳಿಂದ ವಿದ್ಯಾಗಿರಿಯ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಸುಮಾರು 80 ಜನರಿಗೆ ವಿಶೇಷ ಶಿಬಿರ ನಡೆಸಲಾಯಿತು.
Related Articles
Advertisement
ಮದ್ಯ ವ್ಯಸನ ಬಿಟ್ಟವರ ಕುಟುಂಬದವರನ್ನ ಕರೆಯಿಸಿ ಮರು ಮದುವೆ ಮಾಡಿಸಿ ಸುಗಮ ಬಾಳು ನಡೆಸಲು ಅವಕಾಶ ಕಲ್ಪಿಸಲಾಯಿತು. ಕುಡಿತದಿಂದ ತಮ್ಮ ಪತ್ನಿಯವರನ್ನು ನಿಂದನೆ ಮಾಡುವ ಪುರುಷರು ಹಾಗೂ ಬೇಸರವಾಗಿರುವ ಪತ್ನಿಯರಿಗೆ ಪರಸ್ಪರ ಹೊಸ ಸಂಬಂಧ-ಭಾಂದವ್ಯದ ಬೆಸುಗೆ ಬೇಸೆಯುವ ಮೂಲಕ ಗಮನ ಸೆಳೆಯಲಾಯಿತು.
ಗುಳೇದಗುಡ್ಡ-ಕೆಂದೂರ ಸಂಸ್ಥಾನ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮರು ಮದುವೆ ಆಗಿರುವ ವಧು ವರರಿಗೆ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಎಂಬಂತೆ ಭಾಸ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಏಳು ದಿನಗಳ ವಿಶೇಷ ಶಿಬಿರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಸಿ ಟ್ರಸ್ಟ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಂಸ್ಥೆಗಳ ಅಶ್ರಯದಲ್ಲಿ ನವನಗರದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆದ 1340ನೇ ಮದ್ಯವರ್ಜನ ಶಿಬಿರದಲ್ಲಿ ವಿವಿಧ ತರಬೇತಿ ನೀಡಲಾಯಿತು.
ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ ಸುಮಾರು 80ಕ್ಕೂ ಅಧಿಕ ಮದ್ಯವ್ಯಸನ ಶಿಬಿರಾರ್ಥಿಗಳಿಗೆ ಒಂದು ವಾರ ಕಾಲ ತರಬೇತಿ ನೀಡಿದ್ದು, ಬೆಳ್ಳಗೆ 5 ಗಂಟೆಯಿಂದ ರಾತ್ರಿಯವರೆಗೆ ಶಿಬಿರವನ್ನು ನಡೆಸಲಾಯಿತು. ವ್ಯಾಯಾಮ, ಯೋಗ, ವಠಾರ ಸ್ವಚ್ಛತೆ, ಶ್ರಮದಾನ, ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹಾಗೂ ಕೌಟುಂಬಿಕ ಸಲಹೆ ಸೇರಿದಂತೆ ಕೆಲ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವ್ಯಸನ ಮುಕ್ತರಾಗಲು ಶಿಬಿರಾರ್ಥಿಗಳಿಗೆ ಬೋಧಿಸಲಾಯಿತು.
ಕೊನೆಯ ದಿನವಾದ ಸೋಮವಾರ ಧರ್ಮಸ್ಥಳದ ಮಂಜುನಾಥ ದೇವರ ಮಂಗಳ್ಳೋತ್ಸವ, ಶಿಬಿರಾಗ್ನಿ ಸಮಾರಂಭ ಗಮನ ಸೆಳೆಯಿತು. ಮದ್ಯ ವ್ಯಸನ ಶಿಬಿರಾರ್ಥಿಗಳಿಗೆ ಮಂಜುನಾಥ ದೇವರ ಭಾವಚಿತ್ರವನ್ನು ಇಟ್ಟು ಅಲಂಕಾರ ಮಾಡಿ, ಪೂಜೆ ಪುನಸ್ಕಾರ ನೆರವೇರಿಸಿದರು. ಅಲ್ಲದೇ ಓಂಕಾರ, ಪ್ರಾರ್ಥನೆ ಸಲ್ಲಿಸುವ ಮೂಲಕ ನೂತನ ಜೀವನದ ಮಾರ್ಗದರ್ಶನ ನೀಡಲಾಯಿತು. ಶಿಬಿರಾಗ್ನಿ ಎಂದು ಸರಾಯಿ, ತಂಬಾಕು, ಸಿಗರೇಟು, ಗುಟಕಾದಿಂದ ಮಾಡಿದ್ದ ಕೃತಕ ಗೊಂಬೆಯನ್ನು ಇಟ್ಟು ಸುತ್ತಲೂ ಬೆಂಕಿಯ ಜ್ವಾಲೆಯಲ್ಲಿ ಹಿಡಿದು ಸುತ್ತು ಹಾಕುವ ಮೂಲಕ ತಮ್ಮಲ್ಲಿನ ದುಶ್ಚಟವನ್ನು ಬೆಂಕಿಯಿಂದ ಸುಟ್ಟು, ಹೊಸ ಜೀವನ ಪ್ರಾರಂಭಿಸುವುದಾಗಿ ಶಿಬಿರಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಲಾಯಿತು.
ಒಟ್ಟಾರೆ ನಗರದಲ್ಲಿ ನಡೆದ ಮದ್ಯವ್ಯರ್ಜನ ಶಿಬಿರ ಈ ಬಾರಿ ಎಲ್ಲರ ಗಮನ ಸೆಳೆಯಿತು. ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಪಿ.ಎಚ್. ಪೂಜಾರಿ, ಜಿ.ಪಂ. ಸದಸ್ಯ ಹೂವಪ್ಪ ರಾಠೊಡ ಸೇರಿದಂತೆ ಧರ್ಮಸ್ಥಳ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು, ನಗರದ ಹಲವು ಪ್ರಮುಖರು ಪಾಲ್ಗೊಂಡಿದ್ದರು.