ಕಾಸರಗೋಡು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು, ಈ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ವೀರಮಲೆ ಬೆಟ್ಟ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆಗೆ ಮತ್ತೆ ಮರು ಜೀವ ಬಂದಿದೆ.
ಈ ನಿಟ್ಟಿನಲ್ಲಿ ಮಲಬಾರು ಪ್ರದೇಶದ ಉತ್ತರ ಭಾಗದಲ್ಲಿ ಈ ಯೋಜನೆಯ ಮೂಲಕ ಸಾಕಷ್ಟು ಸಾಧ್ಯತೆಗಳಿದ್ದು, ಪ್ರವಾಸಿಗರನ್ನು ಕೈಬೀಸಿ ಸ್ವಾಗತಿ ಸಲು ಪ್ರಕ್ರಿಯೆ ಆರಂಭಿಸಲಾಗಿದೆ.
ವೀರಮಲೆ ಬೆಟ್ಟ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಅಂಗವಾಗಿ ಪ್ರವಾಸೋದ್ಯಮ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆಗಳ ಸಚಿವರು, ಶಾಸಕರು, ಜಿಲ್ಲಾಧಿಕಾರಿ,ಇಲಾಖೆಯ ಅಧಿಕಾರಿಗಳು ಸಂಯುಕ್ತವಾಗಿ ಸಭೆ ಸೇರಿ ನಿರ್ಣಯಗೊಳ್ಳಲಿದ್ದಾರೆ. ಈ ನಿಮಿತ್ತ ಜು. 18ರಂದು ತಿರುವನಂತಪುರದಲ್ಲಿ ಸಭೆ ನಡೆಯಲಿದೆ.
ವೀರಮಲೆ ಬೆಟ್ಟ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಡಿಎಫ್‌ಒ, ಟೂರಿಸಂ ಡೆಪ್ಯೂಟಿ ಡೈರೆಕ್ಟರ್, ಎ.ಡಿ.ಎಂ, ಡಿ.ಟಿ.ಪಿ.ಸಿ. ಕಾರ್ಯದರ್ಶಿ, ಆರ್ಕಿಟೆಕ್ಟ್ ಮೊದಲಾದವರು ಈ ಪ್ರದೇಶಕ್ಕೆ ಭೇಟಿ ನೀಡಿ ಅವಲೋಕಿಸಿದ್ದಾರೆ.
ಕಾಸರಗೋಡು ಜಿಲ್ಲೆ ಸಹಿತ ಮಲಬಾರ್ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಅಂಗವಾಗಿ ಜಾರಿಗೊಳಿಸಲು ಮಲಬಾರು ರಿವರ್ ಕ್ರೂಸ್ ಯೋಜನೆಯನ್ನು ಸಾಕಾರಗೊಳಿಸಲು ವಲಿಯಪರಂಬ ಹಿನ್ನೀರಿನಲ್ಲಿ ಮಾದರಿ ಗ್ರಾಮ ನಿರ್ಮಾಣ, ಕಾರ್ಯಾಂಗೋಡು ಹಿನ್ನೀರಿನಲ್ಲಿ ವಾಟರ್ ನ್ಪೋರ್ಟ್ ಆ್ಯಂಡ್ ರಿವರ್ ಬಾತಿಂಗ್ ಕ್ರೂಸ್, ಕೋಟ್ಟಪುರ ಮತ್ತು ಕಾಕಡದಲ್ಲಿ ಬೋಟ್ ಟರ್ಮಿನಲ್ ಮೊದಲಾದವುಗಳನ್ನು ಸಾಕಾರಗೊ ಳಿಸುವ ಮೂಲಕ ವೀರಮಲೆ ಬೆಟ್ಟ ಪ್ರದೇಶದಲ್ಲಿ ಪ್ರವಾಸೋದ್ಯಮ ಯೋಜನೆಗೆ ಆದ್ಯತೆ ಸಿಗಲಿದೆ.
ಅಭಿವೃದ್ಧಿ ಪ್ರಕ್ರಿಯೆ ಚುರುಕು
ಕೆಲವು ವರ್ಷಗಳ ಹಿಂದೆ ಬೇಕಲ ಕೋಟೆಯ ಅಭಿವೃದ್ಧಿಯ ಜೊತೆಗೆ ವೀರಮಲೆ ಬೆಟ್ಟ ಪ್ರದೇಶವನ್ನು ಪ್ರವಾ ಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಕುರಿತಾಗಿ ಸಾಕಷ್ಟು ಭರವಸೆ ಗಳು ಕೇಳಿ ಬಂದಿದ್ದವು. ಅಲ್ಲದೆ ಅಂದು ಸಂಬಂಧಪಟ್ಟವರ ನಿಯೋಗ ಬೆಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ ಎಂದು ಕಂಡು ಕೊಳ್ಳಲಾಗಿತ್ತು. ಆದರೆ ದಿನಗಳೆದಂತೆ ಅಭಿವೃದ್ಧಿ ಕಾರ್ಯ ಎಲ್ಲಿಗೂ ತಲುಪದೆ ಮೌನಕ್ಕೆ ಶರಣಾಗಿತ್ತು. ಈಗ ಮತ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಚುರುಕುಗೊಂಡಿದೆ.