ನವಲಗುಂದ: ವರ್ಷದ ಹಿಂದೆ ಹೂಳಿದ್ದ ಅಪರಿಚಿತ ಯುವಕನ ಶವವನ್ನು ಕೊಲೆ ಪ್ರಕರಣ ಸಂಬಂಧ ಮೇಲಕ್ಕೆತ್ತಿ ಮರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವಿದ್ಯಮಾನ ಪಟ್ಟಣದ ರುದ್ರಭೂಮಿಯಲ್ಲಿ ಶನಿವಾರ ನಡೆದಿದೆ.
2018ರ ಡಿ. 4ರಂದು ಇಬ್ರಾಹಿಂಪುರ ಬಳಿ ಮಲಪ್ರಭಾ ಕಾಲುವೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಪಂಚನಾಮೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಿ ಪಟ್ಟಣದ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಸಿದ್ದರು. ಯುವಕನ ಪೋಟೋವನ್ನು ರಾಜ್ಯಾದ್ಯಂತ ಎಲ್ಲ ಠಾಣೆಗಳಿಗೆ ಕಳುಹಿಸಿಕೊಡಲಾಗಿತ್ತು.
ಸಾಮ್ಯತೆ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದೊಡ್ಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಲಹೊಂಗಲ ತಾಲೂಕಿನ ಹಿರೇಬೆಳ್ಳಕಟ್ಟಿಯ ಶಿವಪ್ಪ ಬಸಪ್ಪ ಬಿಜ್ಜಣ್ಣವರ(26) ಎಂಬಾತ ಕೊಲೆಯಾದ ಪ್ರಕರಣ ದಾಖಲಾಗಿತ್ತು. ಈತನ ಫೋಟೋಕ್ಕೂ, ಕಾಲುವೆಯಲ್ಲಿ ಶವವಾಗಿ ದೊರೆತಿದ್ದವನ ಫೋಟೋಕ್ಕೂ ಸಾಮ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಹೂಳಿದ್ದ ಶವ ಮೇಲಕ್ಕೆತ್ತಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಹೈದ್ರಾಬಾದ್‌ಗೆ ಸ್ಯಾಂಪಲ್: ಹುಬ್ಬಳ್ಳಿ ಕಿಮ್ಸ್ ಪ್ರಯೋಗಾಲಯ ತಜ್ಞ ವೈದ್ಯರಾದ ಡಾ| ತಲಯವಾಡು ತಂಡದವರು, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ತಹಶೀಲ್ದಾರ್ ನವೀನ ಹುಲ್ಲೂರು ನೇತೃತ್ವದಲ್ಲಿ ಮೂರು ತಾಸುಗಳ ಕಾರ್ಯಾಚರಣೆ ಬಳಿಕ ಶವದ ಪಳೆಯುಳಿಕೆ ಹೊರ ತೆಗೆಯಲಾಯಿತು. ಡಿಎನ್‌ಎ ಪರೀಕ್ಷೆಗೆ ಬೇಕಾದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಸ್ಥಳದಲ್ಲಿ ಪಿಎಸ್‌ಐ ಜಯಪಾಲ ಪಾಟೀಲ, ಪೊಲೀಸ್ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ಮನೆಯವರಿಂದ್ಲೇ ಕೊಲೆಯಾದನೇ!: ಬೈಲಹೊಂಗಲ ತಾಲೂಕಿನ ಹಿರೇಬೆಳ್ಳಕಟ್ಟಿಯ ಶಿವಪ್ಪ ಬಿಜ್ಜಣ್ಣವರ ಕೊಲೆ ಪ್ರಕರಣದಲ್ಲಿ ಆತನ ಕುಟುಂಬದವರೇ ಐವರು ಆರೋಪಿತರಾಗಿದ್ದು, ಬಂಧನಕ್ಕೊಳಗಾಗಿದ್ದಾರೆ. ಲೈಂಗಿಕ ಕಿರುಕುಳ ಹಿನ್ನೆಲೆಯಲ್ಲಿ ಮಲಪ್ರಭಾ ಕಾಲುವೆಗೆ ನೂಕಿ ಕೊಲೆ ಮಾಡಿದ್ದಾಗಿ ಅವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಸಿಪಿಐ ಶ್ರೀಕಾಂತ ತೋಟಗಿ ಅವರಿಗೆ, ನವಲಗುಂದ ಠಾಣೆಯಿಂದ ಬಂದಿದ್ದ ಅಪರಿಚಿತ ಯುವಕನ ಶವದ ಪೋಟೋದೊಂದಿಗೆ ಸಾಮ್ಯತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವರ್ಷದ ಹಿಂದೆ ಮಲಪ್ರಭಾ ಕಾಲುವೆಯಲ್ಲಿ ಇಬ್ರಾಹಿಂಪುರ ಬಳಿ ದೊರೆತಿದ್ದ ಶವವನ್ನು ರುದ್ರಭೂಮಿಯಿಂದ ಮೇಲಕ್ಕೆತ್ತಿ ಮರು ಪರೀಕ್ಷೆಗೆ ಒಳಪಡಿಸಲಾಗಿದೆ.