ಬೆಂಗಳೂರು: ಹೈಕೋರ್ಟ್ ಆದೇಶದ ಮೇರೆಗೆ ಕೆ.ಆರ್.ಮಾರುಕಟ್ಟೆಯಲ್ಲಿನ ಒತ್ತುವರಿ ತೆರವುಗೊಳಿಸಿ ವಾರ ಕಳೆಯುವ ಮೊದಲೇ ಮಾರುಕಟ್ಟೆ ರಸ್ತೆಗಳು ಮತ್ತೆ ಒತ್ತುವರಿಯಾಗಿರುವುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಮಾರುಕಟ್ಟೆಗಳಲ್ಲಿನ ಬೆಂಕಿ ಅವಘಡಗಳ ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ಪಾಲಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಅದರಂತೆ ಕೆ.ಆರ್.ಮಾರುಕಟ್ಟೆಯಲ್ಲಿನ ಒತ್ತುವರಿ ತೆರವುಗೊಳಿಸುವಂತೆಯೂ ಸೂಚಿಸಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪಾಲಿಕೆಯ ಅಧಿಕಾರಿಗಳು ಅನಧಿಕೃತ ಪಾದಾಚಾರಿ ಮಾರ್ಗ, ಪಾರ್ಕಿಂಗ್, ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಕಟ್ಟಡ ಹಾಗೂ ಮಳಿಗೆಗಳನ್ನು ತೆರವುಗೊಳಿಸಿದ್ದರು.
ಸ್ವತಃ ಬಿಬಿಎಂಪಿ ಆಯುಕ್ತರೇ ಮಾರುಕಟ್ಟೆಗೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದ್ದರು. ಪಾಲಿಕೆಯ ಕಾರ್ಯಾಚರಣೆಯ ನಂತರವೂ ಒತ್ತುವರಿ ಮಾಡಿಕೊಂಡರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.
ಅದ್ಯಾವುದಕ್ಕೂ ಬೆದರದ ವ್ಯಾಪಾರಿಗಳು ಮತ್ತೆ ಮಾರುಕಟ್ಟೆಯಲ್ಲಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮುಂದುವರಿಸುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂ ಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮಾರುಕಟ್ಟೆಯ ಸುತ್ತಮುತ್ತಲು ಶೇ.70ರಷ್ಟು ಜಾಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಅದರಂತೆ ಮಾರುಕಟ್ಟೆಯಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದೇವೆ. ಈಗಾಗಲೇ ಬಹುತೇಕ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದ್ದು, ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದೇವೆ. ಅದಾದ ಬಳಿಕವೂ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸಫìರಾಜ್ ಖಾನ್, ಕೆ.ಆರ್.ಮಾರುಕಟ್ಟೆ ಮತ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವರನ್ನು ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಮತ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಎಂದರು.
ಮಾರುಕಟ್ಟೆಯಲ್ಲಿರುವ ಬೀದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಗುರುತಿನ ಚೀಟಿ ವಿತರಿಸಲಾಗಿದೆ. ಹಾಗಾಗಿ ಅವರಲ್ಲಿ ಯಾರು ಅಧಿಕೃತ, ಅನಧಿಕೃತ ಎಂದು ಗುರುತಿಸಿ ಬೇರೆಡೆ ಸ್ಥಳಾವಕಾಶ ಕಲ್ಪಿಸಿಕೊಡಲಾಗುವುದು. ಜತೆಗೆ ಮಾರುಕಟ್ಟೆಯನ್ನು ಪುನರ್ ನವೀಕರಣ ಮಾಡಬೇಕಿರುವ ಕಾರಣ ಅನಧಿಕೃತ ಜಾಗವನ್ನು ಮಾರ್ಕಿಂಗ್ ಮಾಡಬೇಕಿದೆ ಎಂದು ಹೇಳಿದರು.