ಕಲಬುರಗಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ರೂವಾರಿ ಆರ್.ಡಿ.ಪಾಟೀಲ್‌ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ!
ಸಿಐಡಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಲ್ಲದೇ, ನನ್ನನ್ನು ಟಚ್ ಮಾಡಿದ್ದರೆ ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದ ಆರ್.ಡಿ.ಪಾಟೀಲ್‌ನನ್ನು ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದರು. ನ್ಯಾಯಾಲಯ ಹೆಚ್ಚಿನ ವಿಚಾರಣೆಗೆ 13 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ್ದರಿಂದ ಎಂ.ಬಿ.ನಗರ ಠಾಣೆಯಲ್ಲಿ ಸೆಲ್‌ನಲ್ಲಿ ಇಡಲಾಗಿತ್ತು. ಸೆಲ್‌ನಲ್ಲಿ ಆರ್.ಡಿ.ಪಾಟೀಲ್‌ಗೆ ಕುರ್ಚಿ ಹಾಕಿ ಕೂಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಅದೇ ಸೆಲ್‌ನಲ್ಲಿ ಇನ್ನೋರ್ವ ಆರೋಪಿ ಮಲ್ಲುಗೌಡ ಕೈ ಕಟ್ಟಿ ನಿಂತು ಆರ್.ಡಿ.ಪಾಟೀಲ್ ಜತೆ ಚರ್ಚೆಗೆ ಅವಕಾಶ ನೀಡಲಾಗಿದೆ! ಕಾನೂನು ಎಲ್ಲರಿಗೂ ಒಂದೇ. ಆದರೆ ಆರ್.ಡಿ.ಪಾಟೀಲ್‌ಗೆ ಮಾತ್ರ ರಾಜಾತಿಥ್ಯ ನೀಡುತ್ತಿರುವುದು ಇಲಾಖೆಯನ್ನೇ ಪ್ರಶ್ನಿಸುವಂತಾಗಿದೆ.
ಮೂರು ತಿಂಗಳ ಹಿಂದೆಯೇ ಬುಲಾವ್: ಹಲವು ಪರೀಕ್ಷೆಯಲ್ಲಿ ಅಕ್ರಮ ಎಸಗುವುದನ್ನೇ ತನ್ನ ದಂಧೆ ಮಾಡಿಕೊಂಡಿದ್ದ ಆರ್.ಡಿ.ಪಾಟೀಲ್ ಹಾಗೂ ನೀರಾವರಿ ಇಲಾಖೆ ಕಿರಿಯ ಎಂಜಿನಿಯರ್ ಮಂಜುನಾಥ ಮೇಳಕುಂದಿಗೆ ಬೆಂಗಳೂರಿನ ಅಧಿಕಾರಿಗಳು ಮೂರು ತಿಂಗಳ ಹಿಂದೆ ಕರೆಯಿಸಿ ವಿಚಾರಣೆ ಮಾಡಿ ಕಳುಹಿಸಿದ್ದರು. ಅದೇ ರೀತಿ ಪ್ರಕರಣವೊಂದರಲ್ಲಿ ಕ್ಲೀನ್‌ಚಿಟ್ ನೀಡಲು ಪೊಲೀಸ್ ಅಧಿಕಾರಿಗಳಿಗೆ ಕೋಟಿಗಟ್ಟಲೇ ಹಣ ನೀಡಿದ್ದಾನೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಎಂತಹ ಪ್ರಕರಣದಲ್ಲಿಯಾದರೂ ತನ್ನನ್ನು ಸಿಕ್ಕಿಸಲಿ, ಹೇಗೆ ಹೊರಗೆ ಬರೋದು ನನಗೆ ಗೊತ್ತಿದೆ ಎಂದು ಆರ್.ಡಿ.ಪಾಟೀಲ್ ಆಪ್ತರಲ್ಲಿ ಗರ್ವದಿಂದ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ.
ಬಗೆದಷ್ಟು ಅಕ್ರಮ: ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಟ್ಟಿಗೆ ವ್ಯಾಪಕವಾಗಿರುವ ಅಕ್ರಮ ಬಗೆದಷ್ಟು ವಿಸ್ತಾರಗೊಳ್ಳುತ್ತಿದೆ. ಪಿಎಸ್‌ಐ ಅಲ್ಲದೇ ಲೋಕೋಪಯೋಗಿ, ಜಲಸಂಪನ್ಮೂಲ, ಎಸ್‌ಡಿಎ, ಎಸ್ ಡಿಸಿ, ಪ್ರಾಧ್ಯಾಪಕ ಹುದ್ದೆ, ಅಬಕಾರಿ ನಿರೀಕ್ಷರು, ಸಹಕಾರ ಇಲಾಖೆ ಹುದ್ದೆಗಳು ಸೇರಿ ಇತರ ಹಲವಾರು ಇಲಾಖೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ವ್ಯವಸ್ಥಿತವಾಗಿ ಅಕ್ರಮ ನಡೆದಿದೆ. ಈ ಮೂಲಕ ಸಾವಿರಾರು ಹುದ್ದೆಗಳ ನೇಮಕಾತಿ ಮಾಡುವಂತೆ ನೋಡಿಕೊಂಡಿರುವ ಕೂಟದಲ್ಲಿ ಕಿಂಗ್‌ಪಿನ್‌ಗಳಲ್ಲದೇ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ ಎನ್ನುವುದು ದಿಗ್ಭ್ರಮೆ ಮೂಡಿಸಿದೆ.
ಸಿಎಂ ಹೇಳಿಕೆಗೆ ಆಕ್ರೋಶ: ಪ್ರಕರಣದಲ್ಲಿ ಯಾರೇ ಇರಲಿ ಅವರನ್ನು ರಕ್ಷಿಸುವುದಿಲ್ಲ, ದಿವ್ಯಾ ಹಾಗರಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪದೇ ಪದೇ ಹೇಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ತಮ್ಮದೇ ಪಕ್ಷದ ನಾಯಕಿ ಜಾಮೀನು ಕೋರುವ ಅರ್ಜಿಗೆ ಸಹಿ ಹಾಕುತ್ತಾರೆಂದ ಮೇಲೂ ಬಂಧನ ಮಾಡದಿರುವುದು ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಐಗೆ ಹೆಚ್ಚಿದ ಒತ್ತಡ: ಪಿಎಸ್‌ಐ ಸೇರಿದಂತೆ ವಿವಿಧ ಪರೀಕ್ಷೆ ಅಕ್ರಮಗಳ ತನಿಖೆ ಸಿಬಿಐಗೆ ವಹಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ಬ್ಲೂಟೂತ್ ಬಳಸಿ ಡಿವೈಸ್ ಮೂಲಕ ಪ್ರಶ್ನೆಗಳಿಗೆ ಉತ್ತರವನ್ನು ನೆರೆಯ ರಾಜ್ಯಗಳ ಅಜ್ಞಾತ ಸ್ಥಳದಲ್ಲಿದ್ದು ಹೇಳುತ್ತಿದ್ದುದರಿಂದ ಜತೆಗೆ ಐಪಿಎಸ್‌ನಂತಹ ಹಿರಿಯ ಅಧಿಕಾರಿಗಳು ಅಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಎಲ್ಲರ ಮುಖವಾಡ ಕಳಚಲು ಸಿಬಿಐ ತನಿಖೆಯೊಂದೇ ಪರಿಹಾರವೆಂದು ನೊಂದ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಯಾವೊಂದು ತನಿಖೆಯೂ ತಾರ್ಕಿಕ ಅಂತ್ಯ ಕಂಡಿಲ್ಲ. ಹೀಗಾಗಿ ಇದು ಕೂಡ ಹಳ್ಳ ಹಿಡಿಯುವ ಸಾಧ್ಯತೆ ಇದೆ. ಸಮಗ್ರ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದ ಪ್ರಭಾವಿಗಳನ್ನು ಕಂಬಿ ಹಿಂದೆ ಹಾಕುವಂತೆ ಆಗ್ರಹಿಸಿದ್ದಾರೆ.
–ಹಣಮಂತರಾವ ಭೈರಾಮಡಗಿ