Advertisement

ಆರ್‌ಸಿಇಪಿ ಒಪ್ಪಂದ ದೇಶಕ್ಕೆ ಮಾರಕ

09:17 PM Nov 04, 2019 | Lakshmi GovindaRaju |

ಮೈಸೂರು: ಕೇಂದ್ರ ಸರ್ಕಾರದ ನೋಟು ಅಮಾನ್ಯಿಕರಣ ಮತ್ತು ಜಿಎಸ್‌ಟಿಯಿಂದ ಈಗಾಗಲೇ ದೇಶದ ಅರ್ಥ ವ್ಯವಸ್ಥೆ ಕುಸಿದಿದ್ದು, ಈಗ ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ ದೇಶ ಮತ್ತಷ್ಟು ಆರ್ಥಿಕವಾಗಿ ಕುಸಿಯುತ್ತದೆ ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ ಹೇಳಿದರು.

Advertisement

ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘದಿಂದ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ (ಆರ್‌ಸಿಇಪಿ) ಗ್ರಾಮೀಣ ಆರ್ಥಿಕತೆ ಮೇಲಾಗುವ ಪರಿಣಾಮ ವಿಷಯವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ಮುಕ್ತ ಸಂವಾದದಲ್ಲಿ ಮಾತನಾಡಿದರು.

ಪರಿಸ್ಥಿತಿ ಬದಲಾಗಿದೆ: ಭಾರತ ಮೂಲಭೂತವಾಗಿ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಶೇ.65 ಕುಟುಂಬ ಕೃಷಿ ಆಧಾರಿಸಿ ಜೀವನ ನಡೆಸುತ್ತಿವೆ. ಕೃಷಿ ಮತ್ತು ಹೈನೋದ್ಯಮ ಗ್ರಾಮೀಣ ಆರ್ಥಿಕತೆ ಜೀವಾಳವಾಗಿದೆ. ಸ್ವಾತಂತ್ರ್ಯ ಬಂದ ಸಂದರ್ಭ ನಮ್ಮಲ್ಲಿ ಆಹಾರ ಸಮಸ್ಯೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು.

ಭಾರತಕ್ಕೆ ಹೆಚ್ಚು ಮಾರಕ: ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಇಡೀ ವಿಶ್ವದಲ್ಲಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ. ಇಂತಹ ಸಂದರ್ಭದಲ್ಲಿ 16 ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದದಿಂದ ಆ ದೇಶಗಳ ಕೃಷಿ ಉತ್ಪನ್ನ, ಹೈನೋತ್ಪನ್ನ ನಮ್ಮ ದೇಶದ ಮಾರುಕಟ್ಟೆ ಪ್ರವೇಶಿಸಿದರೆ ಇತರೆ ದೇಶಗಳಿಗಿಂತ ನಮ್ಮ ದೇಶಕ್ಕೆ ಹೆಚ್ಚು ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹೈನುಗಾರಿಕೆಗೆ ಹೊಡೆತ: ರಾಷ್ಟ್ರೀಯ ಹಾಲು ಉತ್ಪಾದಕರ ಅಭಿವೃದ್ಧಿ ಮಂಡಳಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್‌ ಆರಾಧ್ಯ ಮಾತನಾಡಿ, ಆರ್‌ಸಿಇಪಿ ಒಪ್ಪಂದಿದಂದ ಭಾರತ ಬಿಟ್ಟು ಉಳಿದ 15 ರಾಷ್ಟ್ರಗಳಿಗೆ ಅನುಕೂಲವಿದೆ. ಒಂದು ವೇಳೆ ಈ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ, ದೇಶದ ಸ್ಥಳೀಯ ಮಾರುಕಟ್ಟೆ ಮೇಲೆ ಹೆಚ್ಚು ಪರಿಣಾಮವಾಗಲಿದೆ. ಅದರಲ್ಲೂ ರೈತರು ಮತ್ತು ಹೈನುಗಾರಿಕೆ ಮಾಡುವವರಿಗೆ ಹೊಡೆತ ಬೀಳಲಿದೆ. ಈ ಒಪ್ಪಂದದಿಂದ ಸ್ಥಳೀಯರಿಗೆ ಉದ್ಯೋಗವಕಾಶ ಸಿಗುವುದು ಕಷ್ಟ. ಜೊತೆಗೆ ಕೃಷಿ ಭೂಮಿ ಕಡಿಮೆಯಾಗಿ, ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆ ಕಡಿಮೆಯಾಗುತ್ತದೆ ಎಂದರು.

Advertisement

ದೊಡ್ಡ ಸಮಸ್ಯೆ: ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ಎ.ಎಸ್‌.ಪ್ರೇಮನಾಥ್‌, ರಾಜ್ಯದಲ್ಲಿ ಪ್ರತಿದಿನ 84 ಲಕ್ಷ ಲೀಟರ್‌ ಹಾಲನ್ನು ಉತ್ಪಾದಿಸಲಾಗುತ್ತಿದೆ. ಆದರೆ ಮಾರಾಟವಾಗುತ್ತಿರುವುದು ಕೇವಲ 44 ಲಕ್ಷ ಲೀಟರ್‌. ಉಳಿದ 40 ಲಕ್ಷ ಲೀಟರ್‌ ಹಾಲನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ. ಇಂತಹ ಸಂದರ್ಭದಲ್ಲಿ ಆರ್‌ಸಿಇಪಿ ಯೋಜನೆಗೆ ನಮ್ಮ ದೇಶ ಒಳಪಟ್ಟರೆ ರಾಜ್ಯಕ್ಕೆ ಹೊಡೆತ ಬೀಳಲಿದೆ.

ಹೀಗಾಗಿ ಈ ಒಪ್ಪಂದದಿಂದ ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನವನ್ನು ಹೊರಗಿಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್‌.ಶಿವಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಎಪಿಎಂಸಿ ಉಪಾಧ್ಯಕ್ಷ ಚಿಕ್ಕ ಜವರಯ್ಯ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ವಿ. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಖಂಡಿಸಲಿ: ಕೇಂದ್ರ ಸರ್ಕಾರಗಳು ಸರಿಯಾದ ನಿರ್ಧಾರ ಕೈಗೊಳ್ಳದಿದ್ದರೆ ಅದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ನೋಟು ಅಮಾನ್ಯಿಕರಣ ಹಾಗೂ ಜಿಎಸ್‌ಟಿಯಿಂದ ಜಿಡಿಪಿ ಕುಸಿತ, ನಿರುದ್ಯೋಗ ಸಮಸ್ಯೆ ಎದುರಾಗಿದೆ. ಜೊತೆಗೆ ಸಾವಿರಾರು ಸಣ್ಣ ಕೈಗಾರಿಕೆ ಮುಚ್ಚಿವೆ. ಈ ವೇಳೆ ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಲು ಮುಂದಾಗುತ್ತಿರುವುದು ಸರಿಯಲ್ಲ. ಇಂತಹ ವಿಚಾರಗಳನ್ನು ವಿದ್ಯಾರ್ಥಿಗಳು ಖಂಡಿಸಬೇಕು. ಸಮಕಾಲೀನ ಸಂಗತಿಗೆ ವಿದ್ಯಾರ್ಥಿಗಳು ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮಾಜಿ ಸಂಸದ ಧ್ರುವನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next