ಬೆಂಗಳೂರು: ಎರಡನೇ ಆವೃತ್ತಿಯ ವನಿತಾ ಪ್ರೀಮಿಯರ್ ಲೀಗ್ ಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 23ರಂದು ಬೆಂಗಳೂರಿನಲ್ಲಿ ಈ ಬಾರಿಯ ಡಬ್ಲ್ಯೂಪಿಎಲ್ ಆರಂಭವಾಗಲಿದೆ. ಈ ಬಾರಿ ಬೆಂಗಳೂರು ಮತ್ತು ಹೊಸದಿಲ್ಲಿಯಲ್ಲಿ ಪಂದ್ಯಗಳು ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ, ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಅವರು ಡಬ್ಲ್ಯೂಪಿಎಲ್ ನಿಂದ ಹೊರಗುಳಿಯುವ ನಿರ್ಧರಿಸಿದ್ದಾರೆ.
ನೈಟ್ ಅವರು ಹೊರಗುಳಿಯುವ ಬಗ್ಗೆ ಫ್ರಾಂಚೈಸಿಯು ಯಾವುದೇ ಕಾರಣವನ್ನು ನೀಡಲಿಲ್ಲ. ಡಬ್ಲ್ಯುಪಿಎಲ್ ಮುಗಿಯುವ ಸಮಯದಲ್ಲಿಯೇ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಬೇಕಾದ ಕಾರಣ ಇಂಗ್ಲೆಂಡ್ ಕ್ರಿಕೆಟಿಗರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಇಂಗ್ಲೆಂಡ್ ನಾಯಕಿ ಡಬ್ಲ್ಯುಪಿಎಲ್ ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಡಬ್ಲ್ಯೂಪಿಎಲ್ ನ ಫೈನಲ್ ಪಂದ್ಯವನ್ನು ಮಾರ್ಚ್ 17 ರಂದು ನಿಗದಿಪಡಿಸಲಾಗಿದ್ದು, ಪ್ರವಾಸಿ ಇಂಗ್ಲೆಂಡ್ ತಂಡದ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಮಾರ್ಚ್ 19 ರಂದು ನಡೆಯಲಿದೆ.
ಹೀದರ್ ನೈಟ್ ಬದಲಿಗೆ ಆರ್‌ಸಿಬಿಯು ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ನಾಡಿನ್ ಡಿ ಕ್ಲರ್ಕ್ ಅವರನ್ನು ತಂಡಕ್ಕೆ ನೇಮಿಸಿದೆ.
“ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ 2024 ರ ಋತುವಿನಿಂದ ಹಿಂದೆ ಸರಿದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರ ಬದಲಿ ಆಟಗಾರನಾಗಿ ನಾಡಿನ್ ಡಿ ಕ್ಲರ್ಕ್ ಅವರನ್ನು ಹೆಸರಿಸಿದೆ” ಎಂದು ಡಬ್ಲ್ಯೂಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ, ಆಟಗಾರರು ಡಬ್ಲ್ಯೂಪಿಎಲ್ ಮುಗಿಯುವವರೆಗೆ ಭಾರತದಲ್ಲಿದ್ದರೆ ಅವರನ್ನು ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಮೂರು ಟಿ20 ಪಂದ್ಯಗಳಿಗೆ ಅವರನ್ನು ಪರಿಗಣಿಸಲಾಗುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.